Advertisement

ಕೆಂಪೇಗೌಡ ಸಂಶೋಧನಾ ಕೇಂದ್ರಕ್ಕೆ ಸಂಹಿತೆ ಶಾಪ

12:51 AM Oct 20, 2019 | Lakshmi GovindaRaju |

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಮುಗಿದು, ನೀತಿಸಂಹಿತೆ ತೆರವಾಗಿವೆ. ಇದರೊಂದಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಮರುಚಾಲನೆ ದೊರಕಿದೆ. ಆದರೆ, ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣಕ್ಕೆ ಮಾತ್ರ ಇನ್ನೂ ನೀತಿ ಸಂಹಿತೆಯಿಂದ ಬಿಡುಗಡೆ ಸಿಕ್ಕಿಲ್ಲ!

Advertisement

ಜ್ಞಾನಭಾರತಿ ಆವರಣದ ಪೊಲೀಸ್‌ ಠಾಣೆ ಬಳಿ ಇರುವ ಮೂರು ಎಕರೆ ಜಾಗದಲ್ಲಿ ಕೇಂದ್ರ ನಿರ್ಮಾಣಕ್ಕೆ 2017ರಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಸಂಬಂಧ 50 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಆದರೆ, ಆರಂಭದಿಂದಲೂ ಒಂದಿಲ್ಲೊಂದು ಚುನಾವಣೆಗಳ ನೀತಿಸಂಹಿತೆ ನೆಪದಲ್ಲಿ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದುವರೆಗೆ ಪಾಲಿಕೆ ಟೆಂಡರ್‌ ಕೂಡ ಕರೆದಿಲ್ಲ.

ಈ ಬಗ್ಗೆ ವಿಶ್ವವಿದ್ಯಾಲಯದಿಂದ ಪಾಲಿಕೆಗೆ ನಾಲ್ಕು ಬಾರಿ ಪತ್ರ ಬರೆದಿದ್ದರೂ, ಪಾಲಿಕೆ ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ನೀತಿ ಸಂಹಿತೆ ನೆಪವೊಡ್ಡಿ ಕಾಲಹರಣ ಮಾಡುತ್ತಾ ಬಂದಿದೆ. ಪ್ರಸ್ತುತ ಯಾವುದೇ ನೀತಿ ಸಂಹಿತೆ ಇಲ್ಲದಿದ್ದರೂ, ಟೆಂಡರ್‌ ಕರೆಯದೆ ನಿರ್ಲಕ್ಷ್ಯ ವಹಿಸಿದೆ ಎಂಬ ಆರೋಪ ಕೇಳಿಬಂದಿವೆ.

ಬಿಬಿಎಂಪಿ 2017 -18ನೇ ಸಾಲಿನ ಬಜೆಟ್‌ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದ್ದು, ರಾಜ್ಯ ಸರ್ಕಾರವೂ ಅನುಮೋದಿಸಿದೆ. ಸಂಶೋಧನಾ ಕೇಂದ್ರ ನಿರ್ಮಾಣಕ್ಕಾಗಿ ವಿಶ್ವವಿದ್ಯಾಲಯದಲ್ಲಿ ಮೂರು ಎಕರೆ ಮೀಸಲಿಟ್ಟಿದ್ದು, ಅಲ್ಲಿದ್ದ 32 ನೀಲಗಿರಿ ಮರಗಳನ್ನು ತೆರವುಗೊಳಿಸಲಾಗಿದೆ. ಈಗಾಗಲೇ ಸಭಾಂಗಣ ಕಟ್ಟಡದ ನೀಲಿ ನಕ್ಷೆ, ಮೊದಲನೇ ಹಂತದ ಅನುದಾನ ಎಲ್ಲವೂ ಬಿಡುಗಡೆ ಆಗಿದ್ದರೂ, ಕಾಮಗಾರಿಗೆ ಮುಹೂರ್ತ ಕೂಡಿಬಂದಿಲ್ಲ. ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಉಳಿದವು ಉದ್ಘಾಟನೆಯಾದವು: ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್, ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಆರಂಭಿಸಲು ಒಟ್ಟೊಟ್ಟಿಗೆ ಮಂಜೂರಾತಿ ನೀಡಲಾಗಿತ್ತು.

Advertisement

ಡಾ.ಬಿ.ಆರ್‌. ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್ ಮತ್ತು ಈಶಾನ್ಯ ರಾಜ್ಯಗಳ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡರೂ, ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಕಾಮಗಾರಿ ಆರಂಭಿಸಲು ಮುಂದಾಗದಿರುವುದೆ ಶೋಚನೀಯವಾಗಿದೆ.

“ಬೆಂಗಳೂರು ವಿಶ್ವವಿದ್ಯಾನಿಲಯ ವಿಂಗಡಣೆಯಾದ ಬಳಿಕ ಕೇಂದ್ರ ವಿಶ್ವವಿದ್ಯಾನಿಲಯದ ಪಾಲಾಗಿರುವ ಜ್ಞಾನಜ್ಯೋತಿ ಸಭಾಂಗಣವನ್ನು 5 ವರ್ಷಗಳವರೆಗೆ ಮೂರೂ ವಿಶ್ವವಿದ್ಯಾಲಯಗಳು ಬಳಸಲು ಅವಕಾಶವಿದೆ. ಹೀಗಾಗಿ ಜ್ಞಾನಭಾರತಿ ಆವರಣದೊಳಗೆ ನೂತನ ಸಭಾಂಗಣ ನಿರ್ಮಾಣವಾದರೆ ಬೆಂಗಳೂರು ವಿಶ್ವವಿದ್ಯಾಲಯದ ಪ್ರತಿ ಕಾರ್ಯಕ್ರಮಗಳಿಗೆ ಇಲ್ಲಿಯವರೆಗೆ ಅಲೆದಾಡುವುದು ತಪ್ಪುತ್ತದೆ’ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌.

ಅಧ್ಯಯನ ಕೇಂದ್ರದ ಕಾರ್ಯ ನಿರ್ವಹಣೆಗೆ ವಾರ್ಷಿಕ 15 ಲಕ್ಷ ರೂ. ನೀಡಬೇಕು ಎಂದು ಪಾಲಿಕೆಯೊಂದಿಗೆ ಒಡಂಬಡಿಕೆಯಾಗಿದ್ದು, ಕೇಂದ್ರ ನಿರ್ಮಾಣದ ಜವಾಬ್ದಾರಿಯನ್ನೂ ಪಾಲಿಕೆ ವಹಿಸಿಕೊಂಡಿದೆ. ಉದ್ಘಾಟನೆ ನಂತರ ಕೇಂದ್ರ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡಲಿದೆ ಎಂದು ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ದೇಶಕ ಶೇಖ್‌ ಮೆಸ್ತಾನ್‌ ತಿಳಿಸಿದರು.

ಅಧ್ಯಯನ ಕೇಂದ್ರದಲ್ಲಿ ಏನೇನು ಇರಲಿದೆ?
-ನಾಡಪ್ರಭು ಕೆಂಪೇಗೌಡರ ಪರಂಪರೆ ಬಿಂಬಿಸುವ ಭವನ ನಿರ್ಮಾಣ.
-ಹವಾನಿಯಂತ್ರಿತ ವ್ಯವಸ್ಥೆಯುಳ್ಳ 1350 ಜನರು ಕುಳಿತುಕೊಳ್ಳಬಹುದಾದ ಸಭಾಂಗಣ.
-ಆಡಳಿತ ಕಚೇರಿ, ವಸ್ತು ಸಂಗ್ರಹಾಲಯ.
-ನಾಡಪ್ರಭು ಕೆಂಪೇಗೌಡರ 30 ಅಡಿ ಎತ್ತರದ ಕಂಚಿನ ಪ್ರತಿಮೆ.
-ಕೆಂಪೇಗೌಡ ಅಧ್ಯಯನ ಕೇಂದ್ರದ ಕಟ್ಟಡ.
-12 ಸೆಮಿನಾರ್‌ ಹಾಲ್‌ ಮತ್ತು ನಾಲ್ಕು ತರಗತಿ ಕೊಠಡಿ.
-ಕೆಂಪೇಗೌಡ ವಸ್ತು ಸಂಗ್ರಹಾಲಯ.

ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣದ ಬಗ್ಗೆ ಮಾಹಿತಿ ಇಲ್ಲ. ಅನುದಾನ ಬಿಡುಗಡೆಗೊಂಡಿದ್ದರೂ, ಟೆಂಡರ್‌ ಪ್ರಕ್ರಿಯೆಯಾಗದಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ.
-ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next