Advertisement

ಸೊಳ್ಳೆ ಉತ್ಪತ್ತಿ ತಡೆಗೆ ತೆಂಗಿನೆಣ್ಣೆ ಮೊರೆ

01:08 AM Jul 18, 2019 | Lakshmi GovindaRaj |

ಬೆಂಗಳೂರು: ಮನೆಯಲ್ಲಿ ಸಂಗ್ರಹಿಸಿಟ್ಟ ನೀರಿನಿಂದ ಡೆಂಘೀ ಸೋಂಕು ಉಂಟುಮಾಡುವ ಸೊಳ್ಳೆಗಳು ಹೆಚ್ಚಾಗುತ್ತಿವೆಯೇ? ಆಗಿದ್ದರೆ ಸಂಗ್ರಹಿಸಿಟ್ಟ ಆ ನೀರಿಗೆ ಎರಡು ಹನಿ ತೆಂಗಿನ ಎಣ್ಣೆ ಹಾಕಿದರೆ ಸಾಕು. ಆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಗೆ ಕಡಿವಾಣ ಹಾಕಬಹುದು.

Advertisement

ಒಂದೆಡೆ ಜಲಮಂಡಳಿಯು ನಿತ್ಯ ನೀರು ಹರಿಸದೆ ನಗರದ ವಿವಿಧೆಡೆ ನೀರಿನ ಬವಣೆ ಉಂಟಾಗಿದೆ. ಇನ್ನೊಂದೆಡೆ ಬಿಬಿಎಂಪಿ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ ಎಂದು ಮನೆಯಲ್ಲಿ ನೀರು ಸಂಗ್ರಹಿಸಿಟ್ಟುಕೊಳ್ಳದಂತೆ ಬಿಬಿಎಂಪಿ ಸೂಚನೆ ನೀಡುತ್ತಿದೆ. ಇದರಿಂದಾಗಿ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು,

ಇದಕ್ಕೊಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪುರಾತನ ವಿಧಾನ ಹಾಗೂ ಸರಳ ವಿಧಾನದಲ್ಲೊಂದಾದ ಸಂಗ್ರಹಿಸಿದ ನೀರಿಗೆ ತೆಂಗಿನ ಎಣ್ಣೆ ಹನಿ ಸಿಂಪಡಣೆಗೆ ನಗರದ ಜನ ಮೊರೆ ಹೋಗುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವೈದ್ಯಾಧಿಕಾರಿಗಳೆ ಸಾರ್ವಜನಿಕರಿಗೆ ಈ ಕುರಿತು ಸೂಚನೆ ನೀಡುತ್ತಿದ್ದಾರೆ.

ಮಳೆಗಾಲದ ಹಿನ್ನೆಲೆ ನಗರದಲ್ಲಿ ಡೆಂಘೀ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರ ನಿಯಂತ್ರಣಕ್ಕೆ ಬಿಬಿಎಂಪಿ ಸಾಕಷ್ಟು ಮುಂಜಾಗೃತ ಕ್ರಮ ಕೈಗೊಂಡಿದ್ದು, ಡೆಂಘೀ ಸೊಳ್ಳೆ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಈಡೀಸ್‌ ಈಜಿಪ್ಟೈ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಘೀ ಸೋಂಕು ಬರುತ್ತದೆ.

ಹೀಗಾಗಿ, ಮನೆಗಳಿಗೆ ತೆರಳುತ್ತಿರುವ ಆರೋಗ್ಯಾಧಿಕಾರಿಗಳಿಂದ ಹಿಡಿದು ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಸಹಾಯಕ ಸಿಬ್ಬಂದಿವರೆಗೂ ಮನೆಯಲ್ಲಿ ನೀರು ಸಂಗ್ರಹಿಸದಂತೆ ಸೂಚಿಸುತ್ತಿರುವುದಲ್ಲದೇ, ಈಗಾಗಲೇ ಬಹುದಿನಗಳಿಂದ ಸಂಗ್ರಹಿಸಿಟ್ಟ ನೀರನ್ನು ತೆರವು ಮಾಡಲು ಹೇಳುತ್ತಿದ್ದಾರೆ.

Advertisement

ಆದರೆ, ನಗರದಲ್ಲಿ ನೀರಿನ ಸಮಸ್ಯೆ ಇರುವುದರಿಂದ ನಿವಾಸಿಗಳು ಬಿಬಿಎಂಪಿ ಸಿಬ್ಬಂದಿಯ ಮಾತಿ ಕಿವಿಗೊಡುತ್ತಿಲ್ಲ ಎಂಬ ಆರೋಪವೂ ಇದೆ. ಸದ್ಯ ನೀರು ಸಂಗ್ರಹವಾದ ಸಾರ್ವಜನಿಕ ಸ್ಥಳಗಳಲ್ಲಿ ಬಿಬಿಎಂಪಿಯಿಂದಲೇ ರಾಸಾಯನಿಕ ಸಿಂಪಡಣೆ (ಟೆಮಿಫೋಸ್‌) ಮಾಡಲಾಗುತ್ತಿದೆ.

ಆದರೆ, ಮನೆಯಲ್ಲಿ ಸಂಗ್ರಹಿಸಿಟ್ಟು ಬಳಕೆ ಮಾಡುವ ನೀರಿಗೆ ರಾಸಾಯನಿಕ ಸಿಂಪಡಣೆ ಸಾಧ್ಯವಿಲ್ಲದ ಕಾರಣ ಸುಲಭ ಮನೆಮದ್ದು, ಆ ನೀರಿನಲ್ಲಿ ಒಂದಿಷ್ಟು ತೆಂಗಿನ ಎಣ್ಣೆ ಹಾಕಲು ಸೂಚಿಸಲಾಗುತ್ತಿದೆ. ಮುಖ್ಯವಾಗಿ ಹವಾನಿಯಂತ್ರಿತ ಯಂತ್ರಗಳು (ಎ.ಸಿ) ತೊಟ್ಟಿಕ್ಕುವ ನೀರು, ಹೂಕುಂಡ, ಟ್ರಮ್‌ಗಳು, ಮನೆ ಮೇಲೆ ನೀರು ಸಂಗ್ರಹಿಸುವ ಟ್ಯಾಂಕ್‌ಗಳೆ ಸೊಳ್ಳೆ ಉತ್ಪತ್ತಿ ಸ್ಥಳಗಳಾಗಿದ್ದು, ಅವುಗಳ ನಿಯಂತ್ರಣಕ್ಕೆ ಅಲ್ಲಿ ತೆಂಗಿನ ಎಣ್ಣೆ ಸಿಂಪಡಿಸಬಹುದು.

ತೆಂಗಿನ ಎಣ್ಣೆಯಿಂದ ನಿಯಂತ್ರಣ ಹೇಗೆ?: ಡೆಂಘೀ ಉಂಟುಮಾಡುವ ಈಡೀಸ್‌ ಈಜಿಪ್ಟೆ„ ಸೊಳ್ಳೆಯ ಸಂತಾನೋತ್ಪತ್ತಿಗೆ ಶುದ್ಧ ನೀರು ಮಾತ್ರ ಬೇಕಾಗಿರುವುದರಿಂದ ಎಣ್ಣೆ ಮಿಶ್ರತ ನೀರಲ್ಲಿ ಆ ಸೊಳ್ಳೆ ಮೊಟ್ಟೆ ಇಡುವುದಿಲ್ಲ. ಕಾರಣ ತೆಂಗಿನ ಎಣ್ಣೆಯು ನೀರಿನ ಮೇಲ್ಭಾದಲ್ಲಿ ವಿಂಗಡಣೆಯಾಗಿ ಮೊಟ್ಟೆ ನಂತರದ ಪೀಪಾ,

ಲಾರ್ವಾ ಸ್ಥಿತಿಯಲ್ಲಿ ಆಮ್ಲಜನಕ ಕೊರತೆ ಉಂಟುಮಾಡಿ ಅದು ಸೊಳ್ಳೆಯಾಗಿ ರೂಪುಗೊಳ್ಳದಂತೆ ತಡೆಯುತ್ತದೆ. ಜತೆಗೆ ತೆಂಗಿನ ಎಣ್ಣೆ ಹಾಕಿದ ನೀರನ್ನು ಕುಡಿಯುವರಿಂದ ಹಿಡಿದು ಮನೆಯ ಎಲ್ಲಾ ಚಟುವಟಿಕೆಗಳಿಗೂ ಬಳಸಬಹುದು ಎಂದು ಬಿಬಿಎಂಪಿ ವೈದ್ಯಾಧಿಕಾರಿ ಡಾ.ಸಂಧ್ಯಾ ಮಾಹಿತಿ ನೀಡಿದರು.

ವಾರಕ್ಕೆರಡು ಬಾರಿ ಕಾಮಗಾರಿ ಸ್ಥಳಗಳ ಪರಿಶೀಲನೆ: ನಗರದಲ್ಲಿ ಸಾವಿರಾರು ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಆ ಸ್ಥಳಗಳಲ್ಲಿ ಹೆಚ್ಚಿನ ಸೊಳ್ಳೆ ಉತ್ಪತ್ತಿಯಾಗುತ್ತಿವೆ. ಹೀಗಾಗಿ, ಬಿಬಿಎಂಪಿ ವಾರ್ಡ್‌ ಮಟ್ಟದ ಆರೋಗ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ತಮ್ಮ ವ್ಯಾಪ್ತಿ ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಗಳಿಗೆ ವಾರಕ್ಕೆ ಎರಡು ಬಾರಿ ತೆರಳಿ ಅಲ್ಲಿ ನೀರು ಸಂಗ್ರಹವಾಗಿದ್ದರೆ ರಾಸಾಯನಿಕ ಸಿಂಪಡಿಸಿ ಬಳಿಕ ಮಾಲೀಕರಿಗೆ ಸೊಳ್ಳೆ ನಿಯಂತ್ರಣ ಕ್ರಮ ಕೈಗೊಳ್ಳುವ ಸೂಚನೆ ನೀಡುತ್ತಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳು ತಿಳಿಸಿದರು.

ನೀರು ಸಂಗ್ರಹಿಸಿರುವ ಡ್ರಂಗೆ ಬಟ್ಟೆ ಕಟ್ಟಿ ಮುಚ್ಚಲು ಸೂಚಿಸಲಾಗುತ್ತಿದೆ. ಸಾರ್ವಜನಿಕ ನಿಂತ ಹಾಗೂ ಬಳಸಲು ಯೋಗ್ಯ ನೀರಿಗೆ ಬಿಬಿಎಂಪಿ ವತಿಯಿಂದಲೇ ಟೆಮಿಫೋಸ್‌ ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದು, ಮನೆಗಳ ಸಂಗ್ರಹಿಸಿದ ನೀರಿಗೆ ಅಗತ್ಯ ಪ್ರಮಾಣದಷ್ಟು ತೆಂಗಿನ ಎಣ್ಣೆ ಸಿಂಪಡಣೆಗೆ ಸೂಚಿಸಲಾಗುತ್ತಿದೆ.
-ಡಾ.ವಿಜಯೇಂದ್ರ, ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next