Advertisement
ಕರಾವಳಿ ಜಿಲ್ಲೆಯಲ್ಲಿ ಉತ್ಪಾದನೆ ಯಾಗುವ ತೆಂಗಿನ ಕಾಯಿಗಳ ಪೈಕಿ ಶೇ.30 ರಷ್ಟು ಸ್ಥಳೀಯ ಎಣ್ಣೆ ಮಿಲ್‌ಗಳಿಗೆ ಕೊಬ್ಬರಿ ರೂಪದಲ್ಲಿ ಬಳಕೆಯಾದರೆ, ಶೇ. 30 ರಿಂದ 40 ರಷ್ಟು ತೆಂಗಿನ ಕಾಯಿಯ ಪೌಡರ್ ಆಗಿ ಬಳಕೆಯಾಗುತ್ತದೆ. ಇನ್ನು ಉಳಿದ ಪ್ರಮಾಣದ ತೆಂಗಿನ ಕಾಯಿ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತದೆ. ಈಗ ಒಟ್ಟಾರೆ ಶೇ. 15 ರಿಂದ 20 ರಷ್ಟು ತೆಂಗು ಉತ್ಪಾದನೆಗೆ ಮಾತ್ರ ಮಾರುಕಟ್ಟೆ ಸಿಗುತ್ತಿದೆ.ಈಗ ತೆಂಗಿನ ಪೌಡರ್ ಉತ್ಪತ್ತಿ ಘಟಕ ಕೂಡ ಆರಂಭಿಸಲು ಉಭಯ ಜಿಲ್ಲಾಡಳಿತ ಸೂಚನೆ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರದಲ್ಲಿ 4, ಬೈಂದೂರಲ್ಲಿ 3, ಹೆಬ್ರಿ, ಉಡುಪಿ ಸೇರಿದಂತೆ 8- 10 ಘಟಕಗಳಿವೆ. ಉಡುಪಿ ಜಿಲ್ಲೆಯಲ್ಲಿ 15 ರಿಂದ 20 ಬೃಹತ್ ಎಣ್ಣೆ ಮಿಲ್‌ಗಳು, 50 ರಷ್ಟು ಸಣ್ಣ ಎಣ್ಣೆ ಮಿಲ್‌ಗಳಿವೆ.
ಯಂತ್ರದ ಮೂಲಕ ಪೌಡರ್ ಮಾರ್ಪ ಡಿಸಿ, ಅದನ್ನು ಡಬ್ಬದಲ್ಲಿ ಪ್ಯಾಕ್ ಮಾಡಿ, ದೇಶದ ವಿವಿಧೆಡೆಗೆ ಹಾಗೂ ಕೊಲ್ಲಿ ರಾಷ್ಟ್ರಗಳಿಗೂ ರಫ್ತು ಮಾಡಲಾಗುತ್ತಿತ್ತು. ಆದರೆ ತೆಂಗಿನ ಪೌಡರ್ ಉತ್ಪತ್ತಿ ಘಟಕ ಗಳಿಗೆ ಅನುಮತಿ ಸಿಗದ ಕಾರಣ ಸಮಸ್ಯೆ ಯಾಗಿತ್ತು. ಈಗ ಜಿಲ್ಲಾಡಳಿತ ಅನುಮತಿ ನೀಡಿದ್ದು, ಸಾಕಷ್ಟು ಮಂದಿ ತೆಂಗು ಬೆಳೆ ಗಾರರಿಗೆ ಪ್ರಯೋಜನವಾಗಲಿದೆ. ಪರ್ಯಾಯ ಕ್ರಮ ಅಗತ್ಯ
ತೆಂಗು ಬೆಳೆಗಾರರು ಸದ್ಯಕ್ಕೆ ಪರ್ಯಾಯ ಕ್ರಮಕ್ಕೆ ಗಮನ ಕೊಡು ವುದು ಉತ್ತಮ. ಕೊಬ್ಬರಿ ಒಣಗಿಸಿ, ಅದನ್ನು ಭದ್ರವಾಗಿ ಪ್ಯಾಕ್ ಮಾಡಿದರೆ 3 ತಿಂಗಳವರೆಗೂ ಇಟ್ಟುಕೊಳ್ಳಬಹುದು. ಕೊಬ್ಬರಿಯಾಗಿಸಿ, ಸಿಹಿ ತಿನಿಸುಗಳ ತಯಾರಿಕೆಗೆ ಬಳಸಬಹುದು. ಅನಾನಸುವನ್ನು ಡ್ರೈಯರ್ ಮಾಡಿ ದಂತೆ ತೆಂಗಿನ ಕಾಯಿಯನ್ನು ಕೂಡ ಎಣ್ಣೆ ಮಿಲ್‌ನಲ್ಲಿ ಡ್ರೈಯರ್ ಮಾಡಿದರೆ ಕೆಲ ತಿಂಗಳವರೆಗೆ ಇಡಬಹುದು ಎನ್ನುತ್ತಾರೆ ಉಡುಪಿ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ.
Related Articles
ತೆಂಗು ಬೆಳೆಗಾರರು ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ. ಪ್ರಸುತ ಉತ್ತಮ ಬಿಸಿಲು ಇರುವುದರಿಂದ ಕೊಬ್ಬರಿ ಮಾಡುವುದು ಉತ್ತಮ ನಿರ್ಧಾರ. ಸರಕಾರ ಬೆಂಬಲ ಬೆಲೆ ನೀಡಿ ತೆಂಗು ಖರೀದಿಸಬೇಕು. ಜತೆಗೆ ಎಂಪಿಎಂಸಿ ಗೋದಾಮಿನಲ್ಲಿ ತೆಂಗು ಶೇಖರಣೆಗೆ ಅವಕಾಶ ಕಲ್ಪಿಸಿದರೆ ತೆಂಗು ಬೆಳೆಗಾರರು ತಮ್ಮ ಬೆಳೆಯನ್ನು ಸುರಕ್ಷಿತವಾಗಿ ಶೇಖರಿಸಿಡಬಹುದಾಗಿದೆ . ಎಣ್ಣೆ ಮಿಲ್‌ಗಳು ಹಿಂದಿನ ಅವಧಿಯಲ್ಲಿ ಕೆಲಸ ನಿರ್ವಹಿಸುವಂತಾಗಬೇಕು ಎಂದು ಉಡುಪಿ ಜಿಲ್ಲಾ ಕಿಸಾನ್ ಸಂಘದ ಪ್ರ.ಕಾರ್ಯದರ್ಶಿ ಕುದಿ ಶ್ರೀನಿವಾಸ್ ಭಟ್ ತಿಳಿಸಿದರು.
Advertisement
22,506 ಹೆಕ್ಟೇರ್ ತೆಂಗುಉಡುಪಿ ಜಿಲ್ಲೆಯಲ್ಲಿ 22,506 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಸಲಾಗಿದೆ. ಕಾರ್ಕಳದಲ್ಲಿ 6,574 ಹೆಕ್ಟೇರ್‌ನಲ್ಲಿ 7.88 ಕೋ. ತೆಂಗಿನ ಕಾಯಿ, ಕುಂದಾಪುರದಲ್ಲಿ 7216 ಹೆಕ್ಟೇರ್‌ನಲ್ಲಿ 8.65 ಕೋ. ತೆಂಗಿನ ಕಾಯಿ, ಉಡುಪಿ 8,716 ಹೆಕ್ಟೇರ್ 10.45 ಕೋ. ತೆಂಗಿನ ಕಾಯಿಗಳ ಇಳುವರಿ ದೊರಕುತ್ತಿದೆ. ಜಿಲ್ಲೆಯ ತೆಂಗು ಬೆಳೆಗಾರರ ಸೊಸೈಟಿಗಳಲ್ಲಿ ನೋಂದಾಯಿಸಿದ 4,820 ಬೆಳೆಗಾರರಿದ್ದಾರೆ. ತೆಂಗಿನ ಕಾಯಿಗೆ ಕೆ.ಜಿ.ಗೆ ಈಗ 35 ರಿಂದ 36 ರೂ. ಇದ್ದರೆ ಕೊಬ್ಬºರಿ ಕೆ.ಜಿ.ಗೆ 100 ರಿಂದ 102 ರೂ. ಇದೆ. ಉತ್ತಮ ಬೆಲೆಯಿದ್ದರೂ, ಈಗ ಮಾರುಕಟ್ಟೆ ವ್ಯವಸ್ಥೆಯಿಲ್ಲ ಎಂಬುದು ಬೆಳೆಗಾರರ ಕೊರಗು. ಎಣ್ಣೆ ಮಿಲ್‌ಗಳಿಗೆ ಸಂಜೆಯವರೆಗೂ ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ಮಾಲಕರು ಬೆಳಗ್ಗೆ 11 ಗಂಟೆಗೆ ಮುಚ್ಚುತ್ತಿದ್ದಾರೆ ಎಂಬ ದೂರುಗಳಿವೆ. ಇದೇ ಸಂದರ್ಭದಲ್ಲಿ ಕೊರೊನಾ ಭೀತಿಯಿಂದ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ ಎಂಬ ಅಭಿಪ್ರಾಯವೂ ಇದೆ. ಈ ಬಗ್ಗೆ ಪ್ರಶ್ನೆಗಳಿದ್ದರೆ ಉಭಯ ಜಿಲ್ಲೆಗಳ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ದ.ಕ.ದ ಕೆ.ಆರ್. ನಾಯ್ಕ (9448999226), ಉಡುಪಿಯ ಭುವನೇಶ್ವರಿ (9448999225) ಅವರನ್ನು ಸಂಪರ್ಕಿಸಬಹುದು. ಎಣ್ಣೆ, ಅಕ್ಕಿ ಮಿಲ್‌ಗೆ ನಿರ್ಬಂಧವಿಲ್ಲ
ತೆಂಗು ಬೆಳೆಗಾರರಿಗೆ ಅನುಕೂಲವಾಗಲೆಂದು ಎಣ್ಣೆಮಿಲ್‌ಗಳಿಗೆ ಈಗಾಗಲೇ ಬೆಳಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ. ಇನ್ನು ಅಕ್ಕಿ ಮಿಲ್‌ಗಳಿಗೂ ಕೂಡ ತೆರೆಯಲು ಅನುಮತಿಯಿದೆ. ಆಹಾರ ಸಾಮಗ್ರಿ ನೆಲೆಯಲ್ಲಿ ತೆಂಗಿನ ಕಾಯಿಯ ಪೌಡರ್ ಉತ್ಪತ್ತಿ ಘಟಕ ತೆರೆಯಲು ಅನುಮತಿ ನೀಡಲಾಗಿದೆ. ಯಾರಾದರೂ ಅಡ್ಡಿಪಡಿಸಿದರೆ ನನ್ನ ಗಮನಕ್ಕೆ ತನ್ನಿ.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ ದ.ಕ.ದಲ್ಲೂ ಅನುಮತಿ
ತೆಂಗಿನ ಉತ್ಪನ್ನ ತಯಾರಿಕಾ ಎಲ್ಲ ಘಟಕಗಳು, ಎಣ್ಣೆ ಮಿಲ್‌ಗಳಿಗೆ ದ.ಕ. ಜಿಲ್ಲೆಯಲ್ಲಿ ಅನುಮತಿಯಿದೆ. ಆದರೆ ಅವರು ಸೀಮಿತ ಕಾರ್ಮಿಕರು, ಸಾಮಾಜಿಕ ಅಂತರ ಮತ್ತಿತರ ಕೆಲ ನಿಬಂಧನೆಗಳನ್ನು ಅನುಸರಿಸಬೇಕು.
– ಕೆ.ಆರ್. ನಾಯ್ಕ, ಉಪ ನಿರ್ದೇಶಕರು,
ತೋಟಗಾರಿಕಾ ಇಲಾಖೆ, ದ.ಕ. ನಿಮ್ಮ ಬೆಳೆ ಮಾಹಿತಿ ನೀಡಿ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾವಿರಾರು ರೈತರು ತಾವು ಬೆಳೆದ ತರಕಾರಿ, ಹಣ್ಣು ಹಾಗೂ ಆಹಾರ ಬೆಳೆಗಳನ್ನು ಮಾರಲಾಗದೇ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಉದಯವಾಣಿಯು ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ರೈತರು, ತರಕಾರಿ ಬೆಳೆಗಾರರು ಈ ಅಂಕಣದ ಪ್ರಯೋಜನ ಪಡೆಯಬಹುದು. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳಿಸಿದರೆ ಪ್ರಕಟಿಸಲಾಗುವುದು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ. ವಾಟ್ಸಪ್ ಸಂಖ್ಯೆ: 76187 74529