Advertisement

ತೆಂಗು ತಿಟ್ಟು

01:24 PM Jul 02, 2018 | Harsha Rao |

ತೆಂಗಿನಕಾಯಿಯ ಬೆಲೆ ಗಗನಮುಖೀಯಾಗಿದೆ. ಬಹುಶಃ ಪೂರೈಕೆ ಕಡಿಮೆಯಾಗಿರುವುದಕ್ಕೆ ಹೀಗಾಗಿದೆ ಎನ್ನುವುದು ಮೇಲುನೋಟದ ಸತ್ಯ. ಆದರೆ ತೆಂಗನ್ನೇ ನಂಬಿಕೊಂಡವರ ಬದುಕು ಮಾತ್ರ ಹೋಳಾಗಿದೆ. ಕಾಯಿಯ ಬೆಲೆ 35ರೂ. ಏರಿದರೂ, ಬೆಳೆಗಾರರಿಗೆ ಸಿಗುವುದು ಮಾತ್ರ 10-12 ರೂ. ಮಾತ್ರ. ಇದರಲ್ಲಿ ಅವರ ಕೂಲಿ ಕೂಡ ಹುಟ್ಟುತ್ತಿಲ್ಲ. ಇಳುವರಿವೆಚ್ಚ 18ರೂ. ಆಗುತ್ತಿದೆ. ಹೀಗಾಗಿ ತೆಂಗು ಬೆಳೆದವರು ಇಂಗು ತಿಂದಂತಾಗಿದೆ.

Advertisement

ಯಾರು ಹಿತವರು ಮೂರರಲ್ಲಿ? ಒಣಕೊಬ್ಬರಿಯೋ, ಎಳನೀರೋ, ತೆಂಗಿನಕಾಯಿಯೋ?
ಹೀಗಂತ ರೈತರನ್ನು ಕೇಳಿದರೆ, ಅವರು ತೆಂಗಿನಕಾಯನ್ನೇ ಮುಟ್ಟಿಯಾರು. ಏಕೆಂದರೆ, ಈಗ ಖುಷಿಯಾದ ಬೆಲೆ ಇರೋದು ಅದಕ್ಕೆ ಮಾತ್ರ. ವಾರಂಪ್ರತಿ ಇದು ಏರುತ್ತಲೇ ಇದೆ. ಈಗ ಕೊಬರಿ ಗಿಟುಕಿನ ಟನ್‌ಗೆ ಬೆಲೆ 15-16 ಸಾವಿರದ ಆಚೀಚೆ ಓಡಾಡುತ್ತಿದೆ. ರೇಟು ಬಿದ್ದೇ ಹೋಯ್ತು ಎನ್ನುವ ಹೊತ್ತಿಗೆ ಈ ಕೊಬ್ಬರಿ ಗಿಟುಕು, ಎದೆ ಉಬ್ಬಿಸಿ ನಿಂತುಬಿಟ್ಟಿತು.

ಹಾಗಂತ ಇದೇನು ಲಾಭದ ಬೆಲೆಯಲ್ಲ.
ಎಳನೀರಿನ ಬೆಲೆಯಲ್ಲಿ ಭಾರೀ ಅನ್ನುವಂತಹ ಏರಿಕೆ ಕಾಣುತ್ತಿಲ್ಲ. ಬೇಸಿಗೆಯಲ್ಲಿ ಒಂದು ಎಳನೀರಿನ ಬೆಲೆ 30ರೂ.ಗೆ ಮುಟ್ಟಿದ್ದು ನಿಜ, ಆದರೆ ಅದೀಗ 25ರೂ.ಗೆ ನಿಂತಿದೆ. ಇದೊಂಥರ ಸರಾಸರಿ ಬೆಲೆ ಅಂತಲೇ ಹೇಳಬಹುದು.
ಸ್ವಲ್ಪ ನಿಲ್ಲಿ, ಎಳನೀರ ಬೆಲೆ 25 ರೂ. ಅಂದರೆ ಗ್ರಾಹಕರ ಬೆಲೆ ಇದು. ರೈತರ ಕೈಗೆ ಸಿಗುವುದು 10-12ರೂ. ನೇ. ಹೀಗಾಗಿ ತೆಂಗು ಬೆಳೆದ ರೈತರಿಗೆ ಹೇಳಿಕೊಳ್ಳುವ ಲಾಭವೇನಿಲ್ಲ. ತುಮಕೂರು, ಶಿರಾ, ಬೆಂಗಳೂರು ಗ್ರಾಮಾಂತರ ಭಾಗದ ರೈತರಿಗೆ ತೆಂಗಿನ ಮೇಲೆ ನೀವು ಮಾಡುವ ಹೂಡಿಕೆ ಎಷ್ಟು? ಅಂತ ಪ್ರಶ್ನೆ ಮಾಡಿದರೆ ನಕ್ಕಾರು. ಏಕೆಂದರೆ ಅವರಿಗೆ ಒಂದು ತೆಂಗಿನ ಉತ್ಪಾದಕ ಬೆಲೆಯೇ 16-17 ರೂ.ವರೆಗೂ ಮುಟ್ಟುತ್ತಿದೆಯಂತೆ.  ನೀರು, ಕೂಲಿಗಳೆಲ್ಲಾ ಸೇರಿಸಿದರೆ ತೆಂಗಿನ ಮರದಷ್ಟೇ ಎತ್ತರವಾಗುತ್ತದೆ ತೆಂಗು ಬೆಳೆಯಲು ತಗುಲುವ ಖರ್ಚಿನ ಮೊತ್ತ!

ಒಂದು ಸಲ ಬೆಲೆ ಹೆಚ್ಚು ಬಂದರೆ ಸಾಕು, ಈ ಸಮಸ್ಯೆಗಳು ಆಕ್ಷಣಕ್ಕೆ ಮುಚ್ಚಿಹೋಗುತ್ತದೆ.  ಇವರ ದೊಡ್ಡ ಸಮಸ್ಯೆ ಎಂದರೆ ತೆಂಗು ಕೀಳುವುದು ಸಿಪ್ಪೆ, ಬಿಡಿಸುವುದು. ಇದಕ್ಕೆ ಮಂದಿಯೇ ಇಲ್ಲ. ಇದ್ದರೂ ಕಡಿಮೆ ವರ್ಗ. ಸಾಂಪ್ರದಾಯಿಕವಾಗಿ ತೆಂಗು ಇಳಿಸುವವರ ವಂಶವೆಲ್ಲಾ ಬೆಂಗಳೂರಿಗೆ ಬಂದಿದೆ. ಓದು, ಉದ್ಯೋಗಕ್ಕೆ ತೆರೆದು ಕೊಂಡ ಮೇಲೆ ಹಳ್ಳಿಯಲ್ಲಿರುವ ತೆಂಗಿನ ಮರಗಳು ಹೆಣ್ಣು ಸಿಗದ ಗಂಡಿನಂತಾಗಿವೆ.

ತೆಂಗು ಬೆಳೆಯುವುದು ಸುಲಭ. ಆದರೆ ತೆಂಗಿನಕಾಯನ್ನು ಅದನ್ನು ಮರದಿಂದ ಇಳಿಸುವ ಹೊತ್ತಿಗೆ ಸಣ್ಣ ಬೆಳೆಗಾರರಂತೂ ಸುಸ್ತೋ ಸುಸ್ತು. ಒಂದು ಪಕ್ಷ ಮಾರುಕಟ್ಟೆಯಲ್ಲಿ ಒಳ್ಳೇ ಬೆಲೆ ಸಿಕು¤ ಮಾರೇÅ ಅಂತ ಖುಷಿಪಟ್ಟರೂ, ತೆಂಗನ್ನು ಇಳಿಸಿ, ಸುಲಿದು ಮಾರುಕಟ್ಟೆಗೆ ತಲುಪಿಸುವ ಹೊತ್ತಿಗೆ ಒಂದು ತಿಂಗಳು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ತೆಂಗು ಸುಲಿಯಲು ಕೂಲಿ ಎಷ್ಟಿದೆ ಗೊತ್ತಾ? ಅಂದಾಜು, ಸಾವಿರ ಕಾಯಿಗೆ 1700.ರೂಪಾಯಿ. ಕೀಳುವುದಕ್ಕೆ ಸಾವಿರ ಕಾಯಿಗೆ ಸಾವಿರ ರೂ. ತಿಂಡಿ, ಊಟ ಇತ್ಯಾದಿ ಪ್ರತ್ಯೇಕ.  ತೆಂಗಿನ ಕಾಯಿ ಒಡೆಯೋಕೆ 300ರೂ. ಜೊತೆಗೆ ಅವರು ಹೇಳಿದ ಸಮಯಕ್ಕೆ ಕಾಯಿ ಇಳಿಸಬೇಕು. ಹಾಗಾಗಿ,ಇದು ಗುತ್ತಿಗೆ ವ್ಯವಹಾರವಾಗಿದೆ. ದಿನಗೂಲಿಗೆ ಯಾರು ಬರುತ್ತಿಲ್ಲ.  ಹೀಗಾಗಿ, ತೆಂಗು ಬೆಳೆಯುವುದು ಸುಲಭ ಎನಿಸಿದರೂ, ನಂತರ ಕಿರಿಕಿರಿಗಳನ್ನು ರೈತರು  ಸಹಿಸಿಕೊಳ್ಳುವುದು ಕಷ್ಟವಾಗುತ್ತಿದೆ.

Advertisement

ಇವೆಲ್ಲ ಗ್ರಾಮೀಣ ಪ್ರದೇಶದ ಕಥೆ. ಇನ್ನು ನಗರ ಪ್ರದೇಶದ ಅಂಚಿನಲ್ಲಿ ತೆಂಗು ಬೆಳೆಯುವರ ಕಥೆ ಇನ್ನೂ ಕರಾಬು. ಮೊದಲಿಗೆ ಇಲ್ಲಿ ಕಾಯಿ ಕೀಳುವವರು, ಸುಲಿಯುವ ಮಂದಿಯನ್ನು ಹಿಡಿಯುವುದೇ ಕಷ್ಟ. ಒಂದೊಮ್ಮೆ ಅವರು ಕೆಲಸಕ್ಕೆ ಬಂದರೂ ಕಾಯಿಗೆ ನಾಲ್ಕು, ಐದು ರೂನಂತೆ ಕಾಯಿ ಇಳಿಸುತ್ತಾರೆ. ಹೀಗಾಗಿ ತೆಂಗು ಬೆಳೆಯುವ ಬದಲು ಕೊಳ್ಳುವುದೇ ಮೇಲು ಅನ್ನೋ ಮಾತು ಕೂಡ ಚಾಲ್ತಿಯಲ್ಲಿದೆ.

 ಒಂದು ಲೆಕ್ಕದಲ್ಲಿ ನೋಡಿದರೆ, ಇವತ್ತಿನ ಪರಿಸ್ಥಿತಿಯಲ್ಲಿ ರೈತರ ದೃಷ್ಟಿಯಲ್ಲಿ ಒಣಕೊಬ್ಬರಿಗಿಂತ ತೆಂಗಿನ ಕಾಯಿಯ ಮಾರಾಟವೇ ಉತ್ತಮ. ಏಕೆಂದರೆ, ಒಣಕೊಬ್ಬರಿಗೆ ತೆಂಗು ಬೆಳೆದು ಒಂದು ವರ್ಷ ಕಾಯಬೇಕು. ಆಗಿನ ಬೆಲೆ ಏನಿರುತ್ತದೋ!, ಆದರೆ ತೆಂಗಿನ ಕಾಯನ್ನು ಹಾಗೇ ಮಾರಾಟಮಾಡಿದರೆ ತಕ್ಷಣ ಲಾಭ ಬರುತ್ತದೆ ಅನ್ನೋದು ರೈತರ ಲೆಕ್ಕಾಚಾರ. ಈಗ ಸುಲಿದ ತೆಂಗಿನ ಕಾಯಿ/ ಬೆಲೆ ಇವತ್ತು 8ರೂನಿಂದ 30ರೂ. ತನಕ ಇದೆ. ರೈತರ ಕೈಗೆ ಕಾಯಿಗೆ ಸರಾಸರಿ, 10-15ರೂ. ಸಿಗುತ್ತಿದೆ. ಅಂದರೆ ಕ್ವಿಂಟಾಲ್‌ಗೆ 10-15ಸಾವಿರ ರೂ. ಬೇಡಿಕೆ ಹೆಚ್ಚಿರುವುದರಿಂದ 15 ಸಾವಿರದ ತನಕ ಮುನ್ನಡೆಯುತ್ತಿದೆ. ಆದರೆ ಗಿಟುಕು ಮಾಡಿ ಮಾರಿದರೆ ಈಗ ಲಾಸ್‌ ಆಗುತ್ತದೆ. ಅದು ಗಿಟಕಿಗೆ 10-12ರೂ. ಸಿಗಬಹುದು. ಅಂದರೆ ತೆಂಗಿನಕಾಯಿಗಿಂತಲೂ ಬೆಲೆ ಕಡಿಮೆ.

ಮಾರ್ಕೆಟ್‌ ಹೇಗೆ?
ತೆಂಗಿಗೆ ಯಾರು ಬೆಲೆ ನಿಗದಿ ಮಾಡುತ್ತಾರೆ? ಇದು ಯಕ್ಷ ಪ್ರಶ್ನೆಯಂತೆ ಕಾಣಿಸುತ್ತದೆ. ಎಳನೀರು, ಒಣಕೊಬ್ಬರಿ, ತೆಂಗಿನ ಕಾಯಿ… ಹೀಗೆ ಎಲ್ಲದಕ್ಕೂ ಪ್ರತ್ಯೇಕ ಮಾರುಕಟ್ಟೆಗಳು ಇವೆ. ಬೆಂಗಳೂರು ಗ್ರಾಮಾಂತರದ ಕಡೆ ತೆಂಗಿನ ಕಾಯಿಯನ್ನು ಒಣಕೊಬ್ಬರಿಯನ್ನಾಗಿಸಿ ಮಾರುವುದು ಕಡಿಮೆ. ತುಮಕೂರು ಸುತ್ತಮುತ್ತ ಒಣಕೊಬ್ಬರಿ ಮಾರುವುದು ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಅನೇಕ ರೈತರು ಈ ಪ್ರತಿಷ್ಠೆಗೆ ಜೋತು ಬಿದ್ದು ಸಾಲ, ಸೋಲ ಮಾಡಿಯಾದರೂ ಕೊಬ್ಬರಿ ಗಿಟುಕು ಮಾಡಿ ಮಾರುತ್ತಾರೆ.

 ತೆಂಗಿನಕಾಯಿಗಂತೂ ಅಸಂಘಟಿತ ಮಾರುಕಟ್ಟೆ ಇದೆ. ಸಂತೆ, ವಾರದ ಹರಾಜುಗಳಲ್ಲೇ ಇವುಗಳಿಗೆ ಬೆಲೆ ನಿಗದಿ ಮಾಡುವುದು. ಕಾಯಿಗಳ ಗಾತ್ರದ ಮೇಲೆ ಬೆಲೆ ನಿಗದಿ ಮಾಡುತ್ತಾರಾದರೂ ಇದನ್ನು ರೈತರು ಮಾಡುವುದಿಲ್ಲ. ರೈತರು- ಸಗಟು ವ್ಯಾಪಾರಿಗಳ ನಡುವಿನ ದಲ್ಲಾಳಿಗಳು ಈ ಕೆಲಸ ಮಾಡುತ್ತಾರೆ. ಹೊಸಕೋಟೆ, ತುಮಕೂರು, ಅರಸೀಕೆರೆ, ದೊಡ್ಡಬಳ್ಳಾಪುರ, ವಿಜಯಪುರ, ದೇವನಹಳ್ಳಿ ಹೀಗೆ ತಾಲೂಕ್‌, ಹೋಬಳಿ ಮಟ್ಟದಲ್ಲಿ ಮಂಗಳವಾರ, ಬುಧವಾರ, ಶನಿವಾರದಂದು ಹರಾಜುಗಳು ನಡೆಯುತ್ತವೆ. ಇಲ್ಲಿ ಕಾಯಿಗಳು ಗುಡ್ಡೆಲೆಕ್ಕದಲ್ಲೂ, ಕೆಲವು ಕಡೆ ಸಾವಿರ ಕಾಯಿಗಳ ಲೆಕ್ಕದಲ್ಲೂ ಬೆಲೆ ನಿಗದಿಯಾಗುತ್ತದೆ. ಹಾಗೆ ನೋಡಿದರೆ, ರೈತರ ಪಾಲಿಗೆ ಇದು ವರದಾನವೇ. ಹರಾಜಾದ ಸ್ಥಳದಲ್ಲೇ ಹಣ ಸಿಗುವುದರಿಂದ ಇದೊಂಥರಾ ವಾರದ ಆದಾಯವಾದಂತಾಯಿತು.

ಮಾರುಕಟ್ಟೆ, ಬೆಲೆ ಎಲ್ಲವೂ ಸರಿಯಾಗಿದೆಯಲ್ಲಾ ಅಂತ ಮೇಲ್ನೋಟಕ್ಕೆ ಕಂಡರೂ ರೈತರ ಪಾಲಿಗೆ ತೆಂಗೇನೂ ವರದಾನವಾಗಿಲ್ಲ. ತೆಂಗಿನ ಕಾಯನ್ನು ಮರದಿಂದ ಇಳಿಸುವುದು, ಅದನ್ನು ಸುಲಿಯುವ, ಬೆಳೆಯುವ ಎಲ್ಲಾ ಖರ್ಚು ಸೇರಿ ಒಂದು ತೆಂಗಿನ ಉತ್ಪಾದನಾ ವೆಚ್ಚ 15-17ರೂ. ಆಗುತ್ತಿದೆಯಂತೆ. ಮಾರುಕಟ್ಟೆಯಲ್ಲಿ 10-12ರೂ. ಮಾತ್ರ ಸಿಗುತ್ತಿದೆ. ಆದರೆ ಗ್ರಾಹಕರನ್ನು ತಲುಪುವ ಹೊತ್ತಿಗೆ ಇದು 20-25ರೂ. ಆಗಿರುತ್ತದೆ. ತೆಂಗಿನ ಬೆಳೆ ಪಡೆಯಲು ವರ್ಷವಿಡೀ ಬೆವರು ಹರಿಸುವ ರೈತ, ನಷ್ಟಕ್ಕೆ ಸಿಲುಕುತ್ತಾನೆ. ಆದರೆ, ಏನೇನೂ ಹೂಡಿಕೆ ಮಾಡದ ಮಧ್ಯವರ್ತಿಗಳು 8-10ರೂ. ಲಾಭ ಮಾಡುತ್ತಾರೆ. ಇದು, ತೆಂಗಿನ ಬೆಲೆ ಏರಿಕೆಯ ಹಿಂದಿರುವ ಇನ್ನೊಂದು ಕಾರಣ.

ವಿಚಿತ್ರ ಎಂದರೆ, ತಿಪಟೂರು ಒಣಕೊಬ್ಬರಿ ಮಾರಾಟ ಆನ್‌ಲೈನ್‌ ಸೇರಿಯಾಗಿದೆ. ಇಲ್ಲಿಂದ ದೇಶವಿದೇಶಕ್ಕೆಲ್ಲಾ ಸಪ್ಲೆ„ ಆಗುತ್ತದೆ. ಇದೆಲ್ಲಾ ಸರಿ, ಆದರೆ ಇಲ್ಲಿನ ಆನ್‌ಲೈನ್‌ ಹರಾಜು ಪ್ರಕ್ರಿಯೆಯಲ್ಲಿ ರೈತರು ನೇರಭಾಗವಹಿಸುತ್ತಿಲ್ಲ. ಆನ್‌ಲೈನ್‌ ಬಟವಾಡೆ ನಿಧಾನ ಅನ್ನೋ ಆರೋಪ ಇದಕ್ಕೆ ಕಾರಣ. ಹರಾಜಿನ ಬೆಲೆಗೇ ಕಮೀಷನ್‌ ಏಜೆಂಟ್‌ಗಳಿಗೆ ಕೊಟ್ಟು ಕೈ ಮುಗಿಯುತ್ತಿದ್ದಾರೆ. ಈ ಸಲ ತುಮಕೂರು, ಶಿರಾ ಕಡೆ ಮಳೆಯ ಅಭಾವವಿರುವುದರಿಂದ ಶೇ.50ರಷ್ಟು ತೆಂಗು ಇಲ್ಲ. ಇದರ ಹೊಡೆತ ಬೆಂಗಳೂರಿಗೆ ಬಿದ್ದಿದ್ದು, ಒಂದು ತೆಂಗಿನ ಕಾಯಿ ಬೆಲೆ 30ರೂ. ಆಗಿದೆ. 10ಸಾವಿರ ಕಾಯಿಗಳನ್ನು ಮಾರುಕಟ್ಟೆಗೆ ಹಾಕುತ್ತಿದ್ದ ಬೆಳೆಗಾರನ ಬಳಿ ಎರಡು ಸಾವಿರ ಕಾಯಿ ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ತಿಪಟೂರು ಒಣಕೊಬ್ಬರಿ ಮಾರುಕಟ್ಟೆಗೆ ಎರಡು ಸಾವಿರ ಮಾತ್ರ ಬರುತ್ತಿದೆಯಂತೆ. ಈ ಹಿಂದೆ ಇದು ಐದು ಆರು ಸಾವಿರವನ್ನೂ ದಾಟಿದ್ದೂ ಉಂಟು.

ಹಾಗಾದರೆ ಲಾಭ ಯಾವುದು?
 ತೆಂಗಿನಕಾಯಿಯನ್ನು ಪ್ರತ್ಯೇಕ ಬೆಳೆಯಾಗಿ ನೋಡಿದರೆ ಲಾಭ ಗಿಟ್ಟುವುದಿಲ್ಲ. ಸಮಗ್ರ ಬೆಳೆಯಲ್ಲಿ ಇದೂ ಒಂದು ಎಂದೂ, ಎಲ್ಲಾ ಆದಾಯದಲ್ಲಿ ಇದನ್ನು ಸೇರಿಸಿಕೊಂಡರಷ್ಟೇ ತೆಂಗು ಬೆಳೆಯಾಗಿರಲು ಲಾಯಕ್ಕು. ತೆಂಗನ್ನೇ ಮುಖ್ಯ ಬೆಳೆಯನ್ನಾಗಿ ಬೆಳೆದರೆ ಹೇಳಿಕೊಳ್ಳುವಂಥ ಆದಾಯ ಕೈಸೇರುವುದು ಮರೀಚಿಕೆ. ಹೆಚ್ಚಿನ ಆದಾಯ ಬೇಕಾದರೂ ಅದಕ್ಕೆ ನಾನಾ ರೀತಿಯ ಕಿರಿಕಿರಿಗಳನ್ನೂ ಸಹಿಸಿಕೊಳ್ಳಬೇಕು, ಸರ್ಕಸ್‌ಗಳನ್ನು ಮಾಡಬೇಕು.  ಉದಾಹರಣೆಗೆ- ಮಂಡ್ಯ ಸುತ್ತಮುತ್ತ ಕಬ್ಬು, ಭತ್ತದ ಜೊತೆ ತೆಂಗು ಬೆಳೆಯುತ್ತಾರೆ. ಬೆಂಗಳೂರು ಗ್ರಾಮಾಂತರದ ಕಡೆ ಹೂವು, ಕಂಬಳಿ ಸೊಪ್ಪು, ತರಕಾರಿಗಳ ಜೊತೆ ತೆಂಗನ್ನು ಬೆಳೆಯುವುದಿದೆ.

ಈ ಮೊದಲು ಮದ್ದೂರಿನಲ್ಲಿರುವ ತೆಂಗು ಹರಾಜು ಕೇಂದ್ರಕ್ಕೆ ದಿನಕ್ಕೆ 50 ಲೋಡ್‌ ಲಾರಿ ( ಒಂದು ಲೋಡಿಗೆ 8 ಸಾವಿರ ಕಾಯಿ) ಬರುತ್ತಿತ್ತು, ಮಳೆಯಿಂದ ಇದು ಕಡಿಮೆಯಾಗಿದೆ. ಮಹಾರಾಷ್ಟ್ರ, ಮುಂಬಯಿ, ಪುಣೆ, ಹೈದರಾಬಾದ್‌ಗಳಿಗೆಲ್ಲಾ ಇಲ್ಲಿಂದಲೇ ಎಳನೀರು ಸಪ್ಲೆ„ ಆಗುತ್ತಿರುವುದು. ಹೀಗಾಗಿ ಮುಂದಿನ ದಿನದಲ್ಲಿ ಎಳನೀರ ಬೆಲೆ ಮತ್ತಷ್ಟು ಜಿಗಿಯುವ ಕುರುಹು ತೋರುತ್ತಿದೆ ಎನ್ನುತ್ತಾರೆ ಮದ್ದೂರ ರೈತರು.

 ಏನೇ ಹೇಳಿದರೂ, ಶಿರಾ, ತಿಪಟೂರು, ಚಿಕ್ಕನಾಯಕನಹಳ್ಳಿ ಕಡೆಗೆ ಹೋಲಿಸಿದರೆ ಮದ್ದೂರು, ಮಂಡ್ಯ ರೈತರಿಗೆ ಸ್ವಲ್ಪ ಕಿರಿಕಿರಿ ಕಡಿಮೆ. ಏಕೆಂದರೆ, ಇಲ್ಲಿ ತೆಂಗಿನ ವ್ಯಾಪಾರ ತೋಟದಲ್ಲೇ ಆಗುತ್ತದೆ. ಇಳಿಸುವುದು ಇವರದೇ ಕರ್ಮವಾಗಿರುವುದರಿಂದ ಬೆಳೆಗಾರ ಸ್ವಲ್ಪ ನಿರಾಳವಾಗಿರಬಹುದು.

– ಕಟ್ಟೆ ಗುರುರಾಜ್‌

ತೆಂಗು ಬೆಳೆದವ ಇಂಗು ತಿಂದವ !
ನಮ್ಮಲ್ಲಿ ತೆಂಗಿನ ಬೆಲೆ ನಿಗಧಿ ಮಾಡೋರಿಲ್ಲ. ಅದೆಲ್ಲವೂ ಮಧ್ಯವರ್ತಿಗಳ ಅಂಗೈಯಲ್ಲಿದೆ. ಅವರು ಕೂಲಿ, ಸಾಗಾಣಿಕೆ ವೆಚ್ಚ ಎಲ್ಲ ಲೆಕ್ಕ ಹಾಕಿ, ಲಾಭನ್ನು ಇಟ್ಟು ಮಾರಿ ತಾವು ಲಾಸು ಮಾಡಿಕೊಳ್ಳದೆ ಜೇಬು ತುಂಬಿಸಿಕೊಳ್ಳುತ್ತಾರೆ. ಏರಿಕೆಯ ಬಿಸಿ ಗ್ರಾಹಕನಿಗೆ, ಲಾಸಿನ ಹಾನಿ ರೈತನಿಗೆ.  ಹೀಗಾಗಿ, ತೆಂಗು ಬೆಳೆಯುವ ನಮ್ಮ ಇಳುವರಿ ವೆಚ್ಚ ಯಾರೂ ನೋಡೋರಿಲ್ಲ. ಸರ್ಕಾರಕ್ಕೂ ಇದು ಬೇಕಿಲ್ಲ. ತೆಂಗಿನಿಂದ ಉಪಉತ್ಪನ್ನಗಳು ಬೇಕಾದಷ್ಟು ಇವೆ. ಅದರ ಪ್ರಯೋಜನ ರೈತರ ತನಕ ಬರುತ್ತಿಲ್ಲ. ಇದಕ್ಕಾಗಿ ಪ್ರತ್ಯೇಕ ಮಂಡಳಿ ಬೇರೆ ಇದೆ. ಅದೂ ಕೂಡ ಎನ್‌ಜಿಓಗಳ ಚಕ್ರವ್ಯೂಹದೊಳಗೆ ಇರುವುದರಿಂದ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ಕೂಡ ಆಗುತ್ತಿಲ್ಲ.

ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಬರಿ ಸಣ್ಣ ರೈತರೇ ಇರೋದು. ದೊಡ್ಡ ರೈತರು ಅಂದ್ರೆ ಕನಿಷ್ಠ 10 ಎಕ್ರೆ ಜಮೀನಾದ್ರೂ ಇರಬೇಕು. ಇವತ್ತು ಮೂರು ಎಕ್ರೆ ಜಮೀನು ಇಧ್ದೋರೆಲ್ಲ ತೋಟ ಐತ್ರೀ ಅಂತ ಬೀಗ್ತಾರೆ. ಪಾಪ, ಅವರಿಗೆ ತೆಂಗು ನಂಬಿಕೊಂಡಿದ್ದರಿಂದ ಕೂಲಿ ಸಹ ಹುಟಿ¤ಲಿÅà. ಬೆಲೆ ಅನ್ನೋದು ಮಾಯಾಂಗನೆ. ಆಕೆ ಯಾರ್ಯಾರದೋ ಕೈಯಲ್ಲಿ ಕುಣಿತಾ ಇದ್ದಾಳೆ. ಮಾರ್ಕೆಟ್‌ನಲ್ಲಿ ತೆಂಗಿನಕಾಯಿ ಬೆಲೆ 30ರೂ. ದಾಟಿದರೂ ರೈತರು ಜಾಸ್ತಿ ಸಿಗಬಹುದು ಅನ್ನೋ ಆಸೆ ಪಡೋಂಗಿಲ್ಲ. ಸಿಕ್ಕರೂ ಒಂದು ರೂ. ಜಾಸ್ತಿ ಸಿಗಬಹುದೇನೋ..

ಹಾಗಾದರೆ ಲಾಭ ಬರೋಕೆ ಎಷ್ಟು ರೇಟು ಸಿಗಬೇಕು? ಹೀಗಂತ ಬಹಳ ಮಂದಿ ಕೇಳ್ತಾರೆ.  ಅದಕ್ಕೂ ಮೊದುÉ ನನ್ನ ಕಥಿ ಹೇಳ್ತೀನಿ. ನಮ್ಮಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಎಂಬ ಎರಡು ವಿಧದ ತೆಂಗು ಬೆಳೆಗಾರರಿದ್ದಾರೆ.

ನೀರಾವರಿ ಅಂದರೆ ಚನ್ನರಾಯಪಟ್ಟಣ, ಮಂಡ್ಯಕಾಲುವೆ ನಂಬಿದವರು, ಮಲೆನಾಡಿನ ಭಾಗದವರು. ಇವರಿಗೆಲ್ಲಾ ನೀರು ಇದೆ. ಹಾಗಾಗಿ, ಇಳುವರಿ ಜಾಸ್ತಿ ಇರುತ್ತದೆ. ನಮ್ಮಲ್ಲಿ ಆ ರೀತಿ ಇಲ್ಲ. ಉದಾಹರಣೆಗೆ ನನ್ನದು 10 ಎಕ್ರೆ ಜಮೀನಿದೆ.
ಕಳೆದ ವರ್ಷ ಅದರ ಖರ್ಚು ಹೀಗಿದೆ ನೋಡಿ.

ಗೊಬ್ಬರಕ್ಕೆ 50ಸಾವಿರ ರೂ. ಕೂಲಿ, ಇತರೆ 15 ಸಾವಿರ. ಅಲ್ಲದೇ ಈ ತೋಟವನ್ನು ಕಾಯೋ ವ್ಯಕ್ತಿಗೆ ವರ್ಷಕ್ಕೆ 60ಸಾವಿರ ರೂ. ಎಲ್ಲವನ್ನೂ, ಒಟ್ಟು ಮಾಡಿದರೆ, ಒಂದು ಲಕ್ಷದ 25 ಸಾವಿರ ರೂ. ಕಳೆದ ವರ್ಷದ ನಮ್ಮ ಇಳುವರಿ 5 ಸಾವಿರ ತೆಂಗಿನ ಕಾಯಿ. ಅಂದರೆ ಒಂದು ತೆಂಗಿನ ಕಾಯಿ ಇಳುವರಿ ವೆಚ್ಚ 25 ರೂ. ಆಗಿದೆ. ಆದರೆ ನನಗೆ ಬಂದ ಆದಾಯ 65 ಸಾವಿರ ರೂ. ಹೀಗಾಗಿ, ಒಂದು ತೆಂಗಿಗೆ 13ರೂ. ದೊರೆ ತಂತಾಯಿತು.  ಅಂದರೆ, ಒಂದು ಕಾಯಿಯ ಮೇಲೆ 12ರೂ. ಲಾಸು. ಇದು ನನ್ನ ಪಾಡಾದರೆ, ಇನ್ನು ಸಣ್ಣ ಹಿಡುವಳಿದಾರರ ಪಾಡೇನು ಅಂತ ನೀವೇ ಯೋಚನೆ ಮಾಡಿ.

ಹಾಗೆ ನೋಡಿದರೆ, ಸರಿಯಾಗಿ ಮಳೆ ಬಿದ್ದಿದ್ದರೆ ನನ್ನ ತೋಟದ ಸಾಮರ್ಥಯಕ್ಕೆ 20ಸಾವಿರ ತೆಂಗು ಇಳುವರಿ ಬರಬೇಕಿತ್ತು. ಆಗ ಒಂದು ಕಾಯಿಗೆ  6.25ಪೈಸೆ ಇಳುವರಿ ವೆಚ್ಚ ಬೀಳ್ಳೋದು. ಆಗ ಮಾರುಕಟ್ಟೆಯಲ್ಲಿ ಕಾಯಿಗೆ 13ರೂ. ಸಿಕ್ಕಿದ್ದರೂ ಹೆಚ್ಚಾ ಕಮ್ಮಿ 7ರೂ. ಲಾಭವಾಗೋದು.  ನೀರಾವರಿ ಬೆಳೆಗಾರರಿಗೆ ಈ ರೀತಿಯ ಇಳುವರಿ ಕಿರಿಕಿರಿ ಇರೋದಿಲ್ಲ.

ನಾನು ಬೇರೆ ಬೇರೆ ಆದಾಯಗಳನ್ನು ತಂದು ಇಲ್ಲಿ ಸುರಿಯುತ್ತಿರುವುದರಿಂದ ಲಾಸಿನ ಬಿಸಿ ಅಷ್ಟಾಗಿ ತಟ್ಟುತ್ತಿಲ್ಲ. ಆದರೆ ತೆಂಗನ್ನೇ ನಂಬಿಕೊಂಡವರ ಬದುಕು ಮಾತ್ರ ಚಿತ್ರಾನ್ನ.

ಪರಿಹಾರ ಏನಪ್ಪಾ?
ಇಷ್ಟೆಲ್ಲಾ ಹೇಳಿದ ಮೇಲೆ ಪರಿಹಾರ ಕೇಳಬಹುದು. ನಮ್ಮಲ್ಲಿ ತೆಂಗಿನ ಬೆಲೆ ನಿಗಧಿ ಮಾಡೋರಿಲ್ಲ. ಅದೆಲ್ಲವೂ ಮಧ್ಯವರ್ತಿಗಳ ಅಂಗೈಯಲ್ಲಿದೆ. ಅವರು ಕೂಲಿ, ಸಾಗಾಣಿಕೆ ವೆಚ್ಚ ಎಲ್ಲ ಲೆಕ್ಕ ಹಾಕಿ, ಲಾಭವನ್ನು ಇಟ್ಟು ಮಾರಿ ತಾವು ಲಾಸು ಮಾಡಿಕೊಳ್ಳದೆ ಜೇಬು ತುಂಬಿಸಿಕೊಳ್ಳುತ್ತಾರೆ. ಏರಿಕೆಯ ಬಿಸಿ ಗ್ರಾಹಕನಿಗೆ, ಲಾಸಿನ ಹಾನಿ ರೈತನಿಗೆ.  ಹೀಗಾಗಿ, ತೆಂಗು ಬೆಳೆಯುವ ನಮ್ಮ ಇಳುವರಿ ವೆಚ್ಚ ನೋಡೋರೇ ಇಲ್ಲ. ಸರ್ಕಾರಕ್ಕೂ ಇದು ಬೇಕಿಲ್ಲ. ತೆಂಗಿನಿಂದ ಉಪಉತ್ಪನ್ನಗಳು ಬೇಕಾದಷ್ಟು ಇವೆ. ಅದರ ಪ್ರಯೋಜನ ರೈತರ ತನಕ ಬರುತ್ತಿಲ್ಲ. ಇದಕ್ಕಾಗಿ ಪ್ರತ್ಯೇಕ ಮಂಡಳಿ ಬೇರೆ ಇದೆ. ಅದೂ ಕೂಡ ಎನ್‌ಜಿಓಗಳ ಚಕ್ರವ್ಯೂಹದೊಳಗೆ ಇರುವುದರಿಂದ ರೈತರಿಗೆ ಅದರಿಂದ ಯಾವುದೇ ಪ್ರಯೋಜನ ಕೂಡ ಆಗುತ್ತಿಲ್ಲ. ಹೀಗೆ ತಿನ್ನಕ್ಕೆ ಮಾತ್ರ ತೆಂಗು ಬೇಕು. ತೇಗು ಬಂದ ಮೇಲೆ ಅದನ್ನು ಎಲ್ಲರೂ ಮರೆಯುವುದರಿಂದ ತೆಂಗು ಬೆಳೆದವ ಇಂದು ಇಂಗು ತಿಂದವನಂತೆ ಆಗಿದ್ದಾನೆ.

– ಬಿ.ಎಸ್‌. ಲಿಂಗದೇವರು, ಸಿನಿಮಾ ನಿರ್ದೇಶಕರು, ತೆಂಗುಬೆಳೆಗಾರರು

ನಿರೂಪಣೆ: ಕೆ.ಜಿ

Advertisement

Udayavani is now on Telegram. Click here to join our channel and stay updated with the latest news.

Next