“ಎಂಥಾ ಕರಾಬ್ ದುನಿಯಾನೋ ಇದು… ಒಳ್ಳೊಳ್ಳೆ ಫೈಟರ್‌ಗಳು, ಕಿಲಾಡಿಗಳು ಫಸ್ಟೇ ಹೋಗ್‌ಬಿಡ್ತಾರೆ. ಗಾಂಡುಗಳು ಊರ್ ತುಂಬ ಓಡಾಡ್‌ಕೊಂಡು ಕೈಗೆ, ಕಾಲ್‌ಗೆ ಸಿಕ್ತಾ ಇರ್ತಾರೆ…’
-“ಸಲಗ’ ಚಿತ್ರದ ಮೇಕಿಂಗ್ ವಿಡಿಯೋ ನೋಡಿದವರಿಗೆ ಈ ಡೈಲಾಗ್ ಹೇಳಿದ ವಿಲನ್ ಯಾರೆಂಬುದು ಗೊತ್ತಿರುತ್ತೆ. ಹೌದು, ಹೊಸ ಲುಕ್‌ನಲ್ಲಿ ಇಂಥದ್ದೊಂದು ಪಕ್ಕಾ ಲೋಕಲ್ ಡೈಲಾಗ್ ಹೇಳುವ ಮೂಲಕ ಮಾಸ್ ಪ್ರಿಯರಿಗೆ ಇಷ್ಟ ಎನಿಸುವ ಖಳ ನಟ “ಕಾಕ್ರೋಚ್’ ಖ್ಯಾತಿಯ ಸುಧಿ ಹೇಳುವ ಡೈಲಾಗ್ ಇದು. “ಸಲಗ’ ಅವರ ಮತ್ತೂಂದು ಮೈಲೇಜ್ ಕೊಡುವ ಪಾತ್ರ ಅಂದರೆ ತಪ್ಪಿಲ್ಲ. ಸದ್ಯಕ್ಕೆ “ಸಲಗ’ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿರುವ “ಕಾಕ್ರೋಚ್’ ಸುಧಿ, ತಮ್ಮ ಸಿನಿ ಜರ್ನಿ ಕುರಿತು ಹೇಳಿಕೊಂಡಿದ್ದಾರೆ.
“ನಾನೊಬ್ಬ ಗೋಡೆ, ಬೋರ್ಡ್, ನಂಬರ್ ಪ್ಲೇಟ್ಸ್ ಮೇಲಿನ ಬರಹಗಾರ. “ಅಲೆಮಾರಿ’ ಚಿತ್ರಕ್ಕೆ ಆರ್ಟ್ ಕೆಲಸಕ್ಕೆಂದು ಬಂದವನಿಗೆ, ಸಿಕ್ಕ ಸಣ್ಣದ್ದೊಂದು ಪಾತ್ರ ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಅಲ್ಲಿಂದ ಶುರುವಾದ ಸಿನಿ ಪಯಣ ಜೋರಾಗಿದೆ. “ಕಡ್ಡಿಪುಡಿ’ಯಲ್ಲಿ ಗ್ಯಾಂಗ್‌ನಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದೆ.. ನಿರ್ದೇಶಕ “ದುನಿಯಾ’ ಸೂರಿ ನನ್ನನ್ನು ಗಮನಿಸಿ, “ಟಗರು’ ಚಿತ್ರದಲ್ಲಿ “ಕಾಕ್ರೋಚ್’ ಎಂಬ ಖಳನಟನ ಪಾತ್ರ ಕೊಟ್ಟರು. ಆ ಪಾತ್ರ ನನಗೆ ಹೊಸ ಲೈಫ್ ಆಯ್ತು. “ಟಗರು’ ಬಳಿಕ ನನ್ನನ್ನು ಹುಡುಕಿ ಬಂದಿದ್ದು ಸುಮಾರು 25ಕ್ಕೂ ಹೆಚ್ಚು ಚಿತ್ರಗಳು. ಸದ್ಯಕ್ಕೆ ಯುವರತ್ನ, ಪಾಪ್ ಕಾರ್ನ್ ಮಂಕಿ ಟೈಗರ್, ರಾಬರ್ಟ್, ಏಕಲವ್ಯ, ರವಿಚಂದ್ರ, ನಟÌರ್‌ಲಾಲ್, ಚೆಕ್‌ವೆುàಟ್, ಚಾಂಪಿಯನ್, ಸಕಲ ಕಲಾವಲ್ಲಭ, ಯಲ್ಲೋ ಬೋರ್ಡ್, ಗಲ್ಲಿ ಚಿತ್ರಗಳಲ್ಲಿ ನಟಿಸಿದ್ದೇನೆ. ಹೊಸವರ್ಷದಲ್ಲಿ ಹೊಸ ಚಿತ್ರಗಳಿವೆ. “ಯಾರ್ ಮಗ’, “ರಣ ಬೇಟೆಗಾರ’, “ಜಗ್ಗಿ ಜೊತೆ ಜಾನು’, “ರಾಜ್‌ವೀರ’, “ರಂಗಮಂದಿರ’, “ತಾಜ್‌ಮಹಲ್ 2′ ಚಿತ್ರಗಳ ಜೊತೆಗೆ ಒಂದಷ್ಟು ಸಿನಿಮಾಗಳಿವೆ’ ಎಂದು ವಿವರ ಕೊಡುತ್ತಾರೆ ಸುಧಿ.
ತಮ್ಮ ಕೆರಿಯರ್ ಬಗ್ಗೆ ಮಾತನಾಡುವ ಸುಧಿ, “ಟಗರು’ ಚಿತ್ರದ ಕಾಕ್ರೋಚ್ ಪಾತ್ರ ನನ್ನ ಬದುಕು ಬದಲಿಸಿತು. ಆ ಕ್ರೆಡಿಟ್ ಸೂರಿ ಸರ್‌ಗೆ ಹೋಗಬೇಕು. ಈಗ ಕಾಕ್ರೋಚ್ ಪಾತ್ರ ಮರೆಸುವ ಪಾತ್ರ “ಸಲಗ’ ಚಿತ್ರದಲ್ಲಿದೆ. “ದುನಿಯಾ’ ವಿಜಯ್ ಸರ್ ಅವರು ನನಗೊಂದು ಪ್ರಮುಖ ಪಾತ್ರ ಕೊಟ್ಟಿದ್ದಾರೆ. ಆ ಹೆಸರು ರಿವೀಲ್ ಮಾಡಂಗಿಲ್ಲ. ಅದೊಂದು ರಗಡ್ ಆಗಿರುವ, ಭಯಾನಕವಾಗಿರುವಂಥದ್ದು. ಮನರಂಜನೆ ಜೊತೆಗೊಂದು ಹೊಸ ಫೀಲ್ ಕೊಡುವ ಪಾತ್ರವದು. ಸಿನಿಮಾ ನೋಡಿ ಆಚೆ ಬಂದವರಿಗೆ “ಸಲಗ’ ಪಾತ್ರ ತಲೆಯಲ್ಲಿ ಉಳಿಯುತ್ತೆ. ಹಂಡ್ರೆಡ್ ಪರ್ಸೆಂಟ್ ಕಾಕ್ರೋಚ್ ಪಾತ್ರ ಮರೆಸುವ ಪಾತ್ರವದು’ ಎನ್ನುವ ಸುಧಿ, ಗೋಡೆಗಳ ಮೇಲೆ ಸಿನಿಮಾಗಳ ಹೆಸರು ಬರೆದು ಬದುಕು ಕಟ್ಟಿಕೊಳ್ಳುತ್ತಿದ್ದ ನಾನು, ಸಿನಿಮಾ ಮಾಡಿ ಪಾತ್ರಗಳ ಮೂಲಕ ಗುರುತಿಸಿಕೊಂಡು ಬದುಕು ಕಟ್ಟಿಕೊಳ್ಳುವಂತಾಗಿದೆ. ಈಗ ಬಹಳಷ್ಟು ನೆಗೆಟಿವ್ ಪಾತ್ರಗಳೇ ಹುಡುಕಿ ಬರುತ್ತಿವೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.
ಎಲ್ಲಾ ಸರಿ, ವಿಲನ್ ಆಗಿರುವ ನಿಮಗೂ ಹೀರೋ ಆಗುವ ಅವಕಾಶ ಬಂದರೆ? ಈ ಪ್ರಶ್ನೆಗೆ ಉತ್ತರಿಸುವ ಸುಧಿ, “ನನಗೆ ಹೀರೋಗಿಂತ ಮೊದಲು ಒಳ್ಳೆಯ ವಿಲನ್ ಎನಿಸಿಕೊಳ್ಳುವ ಆಸೆ ಇದೆ. ವಿಲನ್ ಆಗಿ ಕಲಿಯೋದು ತುಂಬಾನೇ ಇದೆ. ಈ ನಡುವೆ ಎರಡು ಸಿನಿಮಾಗಳಲ್ಲಿ ಮೇನ್ ಲೀಡ್ ಮಾಡುವ ಅವಕಾಶ ಬಂದಿದೆ. ಸದ್ಯಕ್ಕೆ ಇರುವ ಚಿತ್ರಗಳಲ್ಲಿ ಬಿಝಿ ಇದ್ದೇನೆ. ಅಂಥದ್ದೊಂದು ಸಮಯ ಬಂದಾಗ ನೋಡ್ತೀನಿ’ ಎನ್ನುತ್ತಲೇ, “ನಾನು ಇಲ್ಲಿಯವರೆಗೆ ಬರುತ್ತೇನೆ ಅಂದುಕೊಂಡಿರಲಿಲ್ಲ. ಸಿನಿಮಾ ನಟ ಆಗ್ತಿàನಿ ಎಂಬುದೂ ಗೊತ್ತಿರಲಿಲ್ಲ. ಏನಕ್ಕೋ ಬಂದೆ, ಏನೋ ಆಗಿಬಿಟ್ಟೆ. ಒಟ್ಟಾರೆ ನಾನೊಬ್ಬ ಕಲಾವಿದ ಆಗಬೇಕಷ್ಟೇ’ ಎಂದು ಮಾತು ಮುಗಿಸುತ್ತಾರೆ ಸುಧಿ.
ವಿಜಯ್ ಭರಮಸಾಗರ