Advertisement

ಕೂಚುವೇಲಿ-ಬೆಂಗಳೂರು ರೈಲು ಸಂಚಾರ

12:12 AM Sep 30, 2019 | Team Udayavani |

ಮೈಸೂರು: ಮೈಸೂರಿನ ವಿಸ್ತರಣೆಗೊಂಡ “ಕೂಚುವೇಲಿ-ಬೆಂಗಳೂರು’ ಎಕ್ಸ್‌ಪ್ರೆಸ್‌ ರೈಲಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾನುವಾರ ಚಾಲನೆ ನೀಡಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈಲುಗಾಡಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈಲ್ವೆ ವಿಚಾರದಲ್ಲಿ ರಾಜ್ಯಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛತೆ, ಸಮಯಪಾಲನೆಗೆ ರೈಲ್ವೆ ಇಲಾಖೆ ಮುಂದಾಗಿದೆ. ರೈಲ್ವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು, ಅಗತ್ಯ ಭೂಮಿ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

Advertisement

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಮಾತನಾಡಿ, ಪ್ರಧಾನಿ ಮೋದಿ ದೇಶ, ದೇಶಗಳ ನಡುವೆ ಸಂಪರ್ಕ ಸಾಧಿಸುತ್ತಿದ್ದರೆ, ಇಡೀ ದೇಶವನ್ನು ರೈಲ್ವೆ ಇಲಾಖೆ ಸಂಪರ್ಕಿಸಿದೆ. ಗಣ್ಯರು, ಅತಿಗಣ್ಯರು ಇರುವ ಬೋಗಿಗಳನ್ನು ಮಾತ್ರ ಸ್ವಚ್ಛವಾಗಿಡದೆ ಸಾಮಾನ್ಯ ಜನರು ಸಂಚರಿಸುವ ಬೋಗಿಗಳನ್ನು ಸ್ವಚ್ಛವಾಗಿಡಬೇಕು ಎಂದು ಈಗಾಗಲೇ ನಿರ್ಧರಿಸಿದ್ದು, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ಸೇರಿದಂತೆ ದೇಶದ ಇನ್ನಿತರೆ ಪ್ರವಾಸ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗೋಲ್ಡನ್‌ ಚಾರಿಯಟ್‌ ರೈಲನ್ನು ಮತ್ತೆ ಸಂಚರಿಸುವಂತೆ ಮಾಡಲಾಗುವುದು. ರೈಲ್ವೆ ಇಲಾಖೆಯಲ್ಲಿ ಮುಂದೆ 50 ಲಕ್ಷ ಕೋಟಿ ರೂ. ವಿನಿಯೋಗಿಸಲು ನಿರ್ಧರಿಸಲಾಗಿದ್ದು, ಉದ್ಯೋಗವಕಾಶ ಹೆಚ್ಚಲಿದೆ. ಈ ನಿಟ್ಟಿನಲ್ಲಿ ರಾಜ್ಯದ ಯುವಕರು ಕೇವಲ ಐಎಎಸ್‌, ಐಪಿಎಸ್‌ ಪರೀಕ್ಷೆ ತೆಗೆದುಕೊಳ್ಳದೆ ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಬರೆಯವಂತೆ ಸಲಹೆ ನೀಡಿದರು.

“ಕೂಚುವೇಲಿ-ಬೆಂಗಳೂರು’ ರೈಲು ವಿಸ್ತರಣೆಯಿಂದ ಕರ್ನಾಟಕ, ತಮಿಳುನಾಡು, ಕೇರಳ ನಡುವೆ ಸಂಪರ್ಕ ಕಲ್ಪಿಸಲಿದೆ. ಮುಂದೆ ಬೆಂಗಳೂರು-ಮುಂಬೈ ನಡುವೆ ಕೂಡಾ “ವಂದೇ ಭಾರತ್‌’ ರೈಲು ಸಂಪರ್ಕಿಸಲು ಪ್ರಯತ್ನಗಳು ನಡೆಸಲಾಗುವುದು. ಕರ್ನಾಟಕ-ಮಹಾರಾಷ್ಟ್ರ-ಗೋವಾ ನಡುವೆ ಸಂಪರ್ಕಿಸುವ ರೈಲು ಸಂಚರಿಸಲಿವೆ ಎಂದರು ವಿವರಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಪುಷ್ಪಲತಾ, ಜಿಪಂ ಅಧ್ಯಕ್ಷೆ ಪರಿಮಳಾ, ಶಾಸಕ ಸಿ.ಎಸ್‌.ನಿರಂಜನಕುಮಾರ್‌, ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ಕುಮಾರ್‌ ಸಿಂಗ್‌, ಪ್ರಾದೇಶಿಕ ವ್ಯವಸ್ಥಾಪಕಿ ಅಪರ್ಣ ಗರ್ಗ್‌ ಇತರರಿದ್ದರು.

ರೈಲು ವೇಳಾಪಟ್ಟಿ: ನೂತನ ಕೂಚುವೇಲಿ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ನಿತ್ಯ ಮಧ್ಯಾಹ್ನ 12.15ಕ್ಕೆ ಮೈಸೂರು ನಿಲ್ದಾಣವನ್ನು ಬಿಟ್ಟು 4:35ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 4.50ಕ್ಕೆ ಹೊರಟು ಮರು ದಿನ ಬೆಳಗ್ಗೆ 9.35ಕ್ಕೆ ಕೇರಳದ ಕೂಚುವೇಲಿ ತಲುಪಲಿದೆ. ಕೂಚುವೇಲಿನಿಂದ ಸಂಜೆ 4.45ಕ್ಕೆ ಹೊರಟು ಬೆಳಗ್ಗೆ 8ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 8.35ಕ್ಕೆ ಬಿಟ್ಟು 11.20ಕ್ಕೆ ಮೈಸೂರಿಗೆ ಆಗಮಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next