ಪಾರಾದೀಪ್: ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಹಡಗೊಂದರಿಂದ 220 ಕೋಟಿ ರೂ. ಮೌಲ್ಯದ ಕೊಕೇನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ರಾತ್ರಿ ಪರದೀಪ್ ಇಂಟರ್‌ನ್ಯಾಶನಲ್ ಕಾರ್ಗೋ ಟರ್ಮಿನಲ್‌ನಲ್ಲಿ (ಪಿಐಸಿಟಿ) ಲಂಗರು ಹಾಕಲಾಗಿದ್ದ ಹಡಗಿನಲ್ಲಿ ಇಪ್ಪತ್ತೆರಡು ಅನುಮಾನಾಸ್ಪದ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಕ್ರೇನ್ ಆಪರೇಟರ್ ಅದನ್ನು ಕಂಡ ನಂತರ, ಸ್ಫೋಟಕ ಎಂದು ಶಂಕಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಪರೀಕ್ಷೆಯ ನಂತರ ಇದು ಕೊಕೇನ್ ಎಂದು ದೃಢಪಟ್ಟಿದೆ.
MV ಡೆಬಿ ಹೆಸರಿನ ಸರಕು ಹಡಗು ಈಜಿಪ್ಟ್‌ನಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು, ಇಂಡೋನೇಷ್ಯಾದ ಗ್ರೆಸಿಕ್ ಬಂದರಿನ ಮೂಲಕ ಇಲ್ಲಿಗೆ ಬಂದಿದೆ. ಇಲ್ಲಿಂದ ಸ್ಟೀಲ್ ಪ್ಲೇಟ್ ಗಳೊಂದಿಗೆ ಡೆನ್ಮಾರ್ಕ್ ಗೆ ಹೊರಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಹಡಗಿನಲ್ಲಿದ್ದ ಕ್ರೇನ್‌ನಿಂದ ಇಪ್ಪತ್ತೆರಡು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷ ಕಿಟ್ ಬಳಸಿ ಪರೀಕ್ಷಿಸಿದ ಬಳಿಕ ಪೌಡರ್ ತರಹದ ವಸ್ತು ಕೊಕೇನ್ ಎಂದು ದೃಢಪಟ್ಟಿದೆ. ವಶಪಡಿಸಿಕೊಂಡ ವಸ್ತುಗಳ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ 200 ರಿಂದ 220 ಕೋಟಿ ರೂ ಎಂದು ರಾಜ್ಯ ಕಸ್ಟಮ್ಸ್ ಕಮಿಷನರ್ ಮಧಾಬ್ ಚಂದ್ರ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ಆದರೆ ಹಡಗಿನ ಸಿಬಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆಗೆ ನೆರವಾಗಲು ಭುವನೇಶ್ವರದಿಂದ ಕಸ್ಟಮ್ಸ್ ತಂಡವನ್ನು ಪಾರಾದೀಪ್‌ಗೆ ರವಾನಿಸಲಾಗಿದೆ.