ಬೆಂಗಳೂರು: ಮಾದಕ ವಸ್ತು ಕೊಕೇನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಂಗೋ ದೇಶದ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಪೊಲೀಸರು ಬಂಧಿಸಿದ್ದಾರೆ.
ಡೇವಿಡ್ ಬೋಸಾ (28) ಬಂಧಿತ ಕಾಂಗೋ ಪ್ರಜೆ. ಕೊತ್ತನೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆರೋಪಿ, ಒಂದು ವರ್ಷದಿಂದ ನೆರೆ ರಾಜ್ಯಗಳ ಮೂಲಕ ಕೊಕೇನ್ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಕೊತ್ತನೂರು ಠಾಣೆ ವ್ಯಾಪ್ತಿಯ ಬೈರತಿ ಕ್ರಾಸ್ ಬಸ್ ನಿಲ್ದಾಣದ ಬಳಿ ಕೊಕೇನ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಆ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಮಾದಕ ವಸ್ತು ಸಮೇತ ಬಂಧಿಸಲಾಗಿದೆ. ಈತನಿಂದ 80 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಕೊಕೇನ್, ಒಂದು ದ್ವಿಚಕ್ರ ವಾಹನ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಬಂದಿದ್ದ ಆರೋಪಿ ಬೋಸಾ ಪ್ರತಿಷ್ಠಿತ ಕಾಲೇಜಿನಲ್ಲಿ ಬಿಸಿಎ ಪದವಿ ಪಡೆದುಕೊಂಡಿದ್ದಾನೆ. ಒಂದು ವರ್ಷದ ಹಿಂದೆಯೇ ಆರೋಪಿಯ ವೀಸಾ ಅವಧಿ ಮುಕ್ತಾಯಗೊಂಡಿದೆ. ಆದರೂ ಆರೋಪಿ ಸ್ವದೇಶಕ್ಕೆ ತೆರಳದೆ ಅಕ್ರಮವಾಗಿ ವಾಸವಾಗಿದ್ದ.
ಅಲ್ಲದೆ, ಜೀವನ ನಿರ್ವಹಣೆಗಾಗಿ ವಿದೇಶಗಳಿಂದ ಗೋವಾ ಹಾಗೂ ಮುಂಬೈನ ಸಮುದ್ರ ಮಾರ್ಗದಿಂದ ಮಾದಕ ವಸ್ತು ಕೊಕೇನ್ ತರಿಸುತ್ತಿದ್ದ. ನಂತರ ನಗರದಲ್ಲಿರುವ ಕಾಂಗೋ ದೇಶದ ಪ್ರಜೆಗಳು, ವಿದ್ಯಾರ್ಥಿಗಳು, ಸಾಫ್ಟ್ವೇರ್ ಎಂಜಿನಿಯರ್‌ಗಳಿಗೆ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.