ಮಹಾನಗರ, ಅ. 4: ಬರೋಬ್ಬರಿ ಏಳು ತಿಂಗಳುಗಳ ಬಳಿಕ ಅ. 15ರಿಂದ ಚಿತ್ರಮಂದಿರಗಳು ಆರಂಭವಾಗುವ ಸುಳಿವು ದೊರೆಯುತ್ತಿರುವಂತೆಯೇ ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಆರಂಭವಾಗಿದೆ.
ಸಿನೆಮಾ ಪ್ರದರ್ಶನ ಆರಂಭದ ಬಗ್ಗೆ ಕೇಂದ್ರ ಸರಕಾರ ಸಹಮತ ವ್ಯಕ್ತಪಡಿಸಿದ್ದ ರಿಂದ ಕರಾವಳಿ ಭಾಗದಲ್ಲಿ ಈಗಾಗಲೇ ಸಿದ್ಧ ಗೊಂಡಿರುವ ತುಳು ಸಿನೆಮಾ ಪ್ರದರ್ಶನಕ್ಕೆ ತಯಾರಿ ನಡೆಯುತ್ತಿದೆ. ಈ ಮೂಲಕ ಕೋಸ್ಟಲ್‌ವುಡ್‌ನಲ್ಲಿ ಹೊಸ ಚೇತರಿಕೆ ಶುರುವಾಗುವ ಲಕ್ಷಣ ಗೋಚರಿಸಿದೆ.
ಸದ್ಯದ ಮಾಹಿತಿ ಪ್ರಕಾರ; ಕಾರ್ನಿಕದ ಕಲ್ಲುರ್ಟಿ, ಇಂಗ್ಲೀಷ್, ಇಲ್ಲೊಕ್ಕೆಲ್, ಪೆಪ್ಪೆರೆರೆ ಪೆರೆರೆರೆ ಸಿನೆಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿವೆ. ಈ ಪೈಕಿ ಕಾರ್ನಿಕದ ಕಲ್ಲುರ್ಟಿ, ಇಂಗ್ಲೀಷ್ ಸಿನೆಮಾಗಳು ಲಾಕ್‌ಡೌನ್ ಮುನ್ನವೇ ಪ್ರದರ್ಶನಕ್ಕೆ ದಿನಾಂಕ ನಿಗದಿ ಮಾಡಿತ್ತಾ ದರೂ ಲಾಕ್‌ಡೌನ್ ಕಾರಣದಿಂದ ಪ್ರದರ್ಶನ ಸ್ಥಗಿತಗೊಳಿಸಿತ್ತು. ಈ ಮಧ್ಯೆ, ಪೆಪ್ಪೆರೆರೆ ಪೆರೆರೆರೆ ಸಿನೆಮಾ ಡಿಸೆಂಬರ್‌ನಲ್ಲಿ ಒಟಿಟಿ ಫ್ಲ್ಯಾಟ್‌ಫಾರಂನಲ್ಲಿ ರಿಲೀಸ್‌ಗೆ ಸಿದ್ಧವಾಗಿವೆ. ಒಂದು ವೇಳೆ ಥಿಯೇಟರ್ ಆರಂಭವಾಗುವುದಾದರೆ ಈ ಸಿನೆಮಾ ಥಿಯೇಟರ್‌ನಲ್ಲಿಯೂ ರಿಲೀಸ್ ಆಗಲಿದೆ. ಜತೆಗೆ ವಿಕ್ರಾಂತ್, ಲಾಸ್ಟ್ ಬೆಂಚ್, ಏರೆಗಾವುಯೆ ಕಿರಿಕಿರಿ, ಅಗೋಳಿ ಮಂಜಣ್ಣ ಮುಂತಾದ ಸಿನೆಮಾಗಳು ಕೂಡ ಬಿಡುಗಡೆಗೆ ಸಿದ್ಧವಾಗಿವೆೆ. ಈ ಮಧ್ಯೆ, ಮಗನೇ ಮಹಿಷ, ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್, ಟ್ಯಾಕ್ಸಿ ಬಾಬಣ್ಣ, ಗಬ್ಬರ್‌ಸಿಂಗ್ ಸಹಿತ ಇನ್ನೂ ಕೆಲವು ಸಿನೆಮಾಗಳು ಕೆಲವೇ ದಿನಗಳಲ್ಲಿ ಶೂಟಿಂಗ್ ಆರಂಭಿಸಲಿವೆ.
ಒಂದೊಂದು ಸೀಟ್ ಖಾಲಿ! : ಚಿತ್ರಮಂದಿರ ತೆರೆದರೆ ಚಿತ್ರೋದ್ಯಮ ಚೇತರಿಸಿಕೊಳ್ಳಲು ಹೆಚ್ಚು ಸಮಯ ಬೇಕಿಲ್ಲ. ಮನೋರಂಜನೆಗಾಗಿ ಜನ ಸಿನೆಮಾ ನೋಡಲು ಬಂದೇ ಬರುತ್ತಾರೆ ಎಂಬ ಆಶಾಭಾವ ಇದೆ ಎಂಬುದು ಸಿನೆಮಾ ಥಿಯೇಟರ್‌ಗಳ ಪ್ರಮುಖರ ಅಭಿಪ್ರಾಯ. ಥಿಯೇಟರ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರಣದಿಂದ ಒಂದು ಸೀಟಿನ ಅನಂತರದ ಸೀಟನ್ನು ಖಾಲಿ ಬಿಡಲಾಗುತ್ತದೆ. ಜತೆಗೆ, ಒಟ್ಟು ಥಿಯೇಟರ್‌ನಲ್ಲಿ ಅರ್ಧದಷ್ಟು ಪ್ರೇಕ್ಷಕರ ವೀಕ್ಷಣೆಗೆ ಮಾತ್ರ ಅವಕಾಶ ನೀಡಲಾಗುವುದು. ಅದೇ ರೀತಿ ಸಿನೆಮಾ ಟಿಕೆಟ್ ಬದಲು ಆನ್‌ಲೈನ್ ಟಿಕೆಟ್ ಅಥವಾ ಮೆಸೇಜ್ ತೋರಿಸುವ ಮೂಲಕ ಸಿನೆಮಾ ವೀಕ್ಷಣೆಗೆ ಒತ್ತು ನೀಡಲಾಗುವುದು. ಈ ಮೂಲಕ ಸಿನೆಮಾ ಮಂದಿರಗಳು ಸಿನಿಪ್ರೀಯರ ಸ್ವಾಗತಕ್ಕೆ ಸರ್ವ ಸಿದ್ಧತೆ ಮಾಡಿದೆ ಎನ್ನುತ್ತಾರೆ ಸಿನೆಪೊಲಿಸ್ ಪ್ರಮುಖರಾದ ಕೀರ್ತನ್ ಶೆಟ್ಟಿ.
ಕಲಾವಿದರಿಗೆ ಆಶಾಭಾವ : ಥಿಯೇಟರ್ ಆರಂಭಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆ. ಈ ಮೂಲಕ ತುಳುವಿನಲ್ಲಿ ಈಗಾಗಲೇ ಸಿದ್ಧವಾಗಿರುವ ಹಲವು ಸಿನೆಮಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಜತೆಗೆ, ಥಿಯೆಟರ್ ಆರಂಭದ ಮುಖೇನ ಹೊಸ ಸಿನೆಮಾಗಳ ಶೂಟಿಂಗ್ ಮತ್ತೆ ಮುಂದುವರಿಸುವ ಆಶಾಭಾವ ಮೂಡುತ್ತದೆ. ಕಲಾವಿದರು, ತಂತ್ರಜ್ಞರಿಗೆ ಇದರಿಂದ ಉಪಯೋಗವಾಗಲಿದೆ. ತುಳು ನಾಟಕಕ್ಕೆ ಕೂಡ ಇದೇ ರೀತಿ ಅವಕಾಶ ದೊರಕಿದರೆ ಸಾವಿರಾರು ಕಲಾವಿದರಿಗೆ ಅನುಕೂಲವಾಗಲಿದೆ
.-ಅರವಿಂದ ಬೋಳಾರ್,
ನಟ-ರಂಗಭೂಮಿ ಕಲಾವಿದರು
ಪ್ರದರ್ಶನಕ್ಕೆ ಸಿದ್ಧತೆ :ಮಂಗಳೂರಿನಲ್ಲಿ ಸಿಂಗಲ್ ಥಿಯೇಟರ್‌ಗಳು ಜ್ಯೋತಿ, ರಾಮಕಾಂತಿ, ರೂಪವಾಣಿ, ಪ್ರಭಾತ್, ಸುಚಿತ್ರ ಇದ್ದು, ಮಲ್ಟಿಪ್ಲೆಕ್ಸ್‌ನಲ್ಲಿ ಸಿಟಿಸೆಂಟರ್‌ನಲ್ಲಿ ಸಿನೆಪೊಲಿಸ್, ಭಾರತ್ ಮಾಲ್‌ನಲ್ಲಿ ಬಿಗ್ ಸಿನೆಮಾಸ್ ಹಾಗೂ ಫಾರಂ ಮಾಲ್‌ನಲ್ಲಿ ಪಿವಿಆರ್ ಥಿಯೇಟರ್‌ಗಳಿವೆ. ಅ. 15ರಿಂದ ಈ ಎಲ್ಲ ಥಿಯೇಟರ್‌ನಲ್ಲಿ ಸಿನೆಮಾ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ. ಆದರೆ ಯಾವ ಸಿನೆಮಾ ಮೊದಲು ರಿಲೀಸ್ ಆಗಲಿದೆ ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ. ಮುಂದೆ ಸುರತ್ಕಲ್‌ನಲ್ಲಿ ಮೂರು ಥಿಯೇಟರ್‌ಗಳು ಹೊಸದಾಗಿ ಕಾರ್ಯಾರಂಭಿಸಲಿವೆ.