Advertisement

ಪ್ರಾಮಾಣಿಕತೆಯಲ್ಲೂ ಕರಾವಳಿ ವಿದ್ಯಾರ್ಥಿಗಳು ಮುಂದು !

07:30 AM Apr 15, 2018 | Team Udayavani |

ಮಂಗಳೂರು: ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳಲ್ಲಿ ದಕ್ಷಿಣ ಕನ್ನಡ – ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವುದು ಪ್ರತೀ ವರ್ಷದ ವಿದ್ಯಮಾನ. ಇದರ ಜತೆಗೆ ಯಾವುದೇ ಅವ್ಯವಹಾರ ಇಲ್ಲದೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆಯುವುದರಲ್ಲೂ ಉಭಯ ಜಿಲ್ಲೆಗಳ ವಿದ್ಯಾರ್ಥಿಗಳು ಮುಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಎರಡೂ ವಿಭಾಗಗಳಲ್ಲಿ ಜಿಲ್ಲೆಯ ಯಾವೊಬ್ಬ ವಿದ್ಯಾರ್ಥಿಯೂ ಡಿಬಾರ್‌ ಆಗಿಲ್ಲ ಎನ್ನುವುದು ಸ್ಪಷ್ಟ ನಿದರ್ಶನ. ಹೀಗೆ ಕಳೆದ ಕೆಲವು ವರ್ಷಗಳಿಂದ ಪರೀಕ್ಷೆಯನ್ನು ಪ್ರಾಮಾಣಿಕವಾಗಿ ಉತ್ತರಿಸುವುದರ ಮೂಲಕವೂ ವಿದ್ಯಾರ್ಥಿಗಳು ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಗೈರು ಹಾಜರಾತಿಯೂ ತೀರಾ ಕಡಿಮೆ ಇದೆ. ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಷ್ಟೇ ಹೆಚ್ಚಾಗಿ ಗೈರು ಹಾಜರಾಗುತ್ತಿದ್ದಾರೆ. 

Advertisement

ದಕ್ಷಿಣ ಕನ್ನಡದಲ್ಲಿ ಈ ಬಾರಿ ಮಾ. 1ರಿಂದ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಒಟ್ಟು 54 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 38,633 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಮಾ. 23ರಿಂದ ಎ. 6ರ ವರೆಗೆ ಜಿಲ್ಲೆಯ ಒಟ್ಟು 94 ಕೇಂದ್ರಗಳಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ 32,786 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಉಡುಪಿಯಲ್ಲಿ ದ್ವಿ. ಪಿಯುಸಿ ಪರೀಕ್ಷೆಯನ್ನು 27 ಕೇಂದ್ರಗಳಲ್ಲಿ 16,074 ವಿದ್ಯಾರ್ಥಿಗಳು ಎದುರಿಸಿದ್ದರೆ, ಎಸೆಸೆಲ್ಸಿ ಪರೀಕ್ಷೆಯನ್ನು 51 ಕೇಂದ್ರಗಳಲ್ಲಿ 14,643 ವಿದ್ಯಾರ್ಥಿಗಳು ಬರೆದಿದ್ದರು.

2014: ಪಿಯುಸಿ ಡಿಬಾರ್‌!
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ.ಪೂ. ಶಿಕ್ಷಣ ಇಲಾಖೆ ವಿವಿಧ ಜಾಗೃತ ದಳಗಳ ನೇಮಕ ಮಾಡಿಕೊಂಡು ಪರೀಕ್ಷೆಯ ಮೇಲೆ ವಿಶೇಷ ನಿಗಾ ವಹಿಸುತ್ತಿದೆ. ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಿಗೂ ಸಿಸಿ ಕೆಮರಾ, ಕೇಂದ್ರಗಳ ಸುತ್ತಲೂ ಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ಥೆ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊನೆಯ ಬಾರಿ ಡಿಬಾರ್‌ ಪ್ರಕರಣ ವರದಿಯಾದದ್ದು 2014ರಲ್ಲಿ; ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿತ್ತು. ಆ ಬಳಿಕ ಯಾವುದೇ ವಿದ್ಯಾರ್ಥಿ ಡಿಬಾರ್‌ ಆಗಿಲ್ಲ. ಎಸೆಸೆಲ್ಸಿ ಪರೀಕ್ಷೆಯಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಡಿಬಾರ್‌ ಆಗಿಲ್ಲ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಪರೀಕ್ಷೆಯ ಪಾವಿತ್ರ್ಯ ಮಣ್ಣಿನ ಗುಣ
ಪ್ರತಿ ಪರೀಕ್ಷೆಯಲ್ಲಿ ಪಾವಿತ್ರ್ಯ ಕಾಪಾಡಿಕೊಂಡು ಬರುವುದು ನಮ್ಮ ಜಿಲ್ಲೆಯ ಮಣ್ಣಿನ ಗುಣವೇ ಆಗಿದೆ. ಇಲ್ಲಿನ ಶಿಕ್ಷಕರು ಪರೀಕ್ಷೆಗಳಲ್ಲಿ ಅವ್ಯವಹಾರ ನಡೆಯಲು ಪ್ರೋತ್ಸಾಹ ನೀಡುತ್ತಿಲ್ಲ. ಜತೆಗೆ ಇಲಾಖೆ ಕೂಡ ಎಸೆಸೆಲ್ಸಿ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಜಾಗೃತ ದಳ, ವೀಕ್ಷಕರು, ಸಿಸಿ ಕೆಮರಾಗಳ ಅಳವಡಿಕೆಯಂತಹ ಕ್ರಮಗಳನ್ನು ಕೈಗೊಂಡಿರುತ್ತದೆ. 
ವೈ. ಶಿವರಾಮಯ್ಯ, ಡಿಡಿಪಿಐ

ಹೊಂದಾಣಿಕೆಯ ಕಾರ್ಯ 
ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಂಶುಪಾಲರು ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಕೆಲಸ ಮಾಡಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶ ನೀಡುತ್ತಿಲ್ಲ. ಜತೆಗೆ ಸೂಕ್ತ ರೀತಿಯ ಫ್ಲೆಯಿಂಗ್‌ ಸ್ಕ್ವಾಡ್‌-ಸಿಟ್ಟಿಂಗ್‌ ಸ್ಕ್ವಾಡ್‌ಗಳ ಮೂಲಕ ಅವ್ಯವಹಾರ ನಿಯಂತ್ರಣ ಕಾರ್ಯ ನಡೆಯುತ್ತದೆ. 
 ಎಲ್ವಿರಾ ಫಿಲೋಮಿನಾ, ಪ್ರಭಾರ ಡಿಡಿಪಿಯು

Advertisement

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next