Advertisement

Examಕರಾವಳಿಯ ಕೈ ತಪ್ಪಿದ ಕೆ-ಸೆಟ್‌ ಕೇಂದ್ರ: 23 ವಿಷಯಗಳಿಗೆ ಪರೀಕ್ಷೆ ಬೆಂಗಳೂರಿನಲ್ಲಿ ಮಾತ್ರ

01:12 AM Sep 28, 2023 | Team Udayavani |

ಮಂಗಳೂರು: ಮುಖ್ಯಮಂತ್ರಿಯವರ ಜನತಾ ದರ್ಶನಕ್ಕೆ ಗ್ರಾಮೀಣ ಭಾಗದ ಜನರು ಬೆಂಗಳೂರಿಗೆ ಬರುವುದು ಕಷ್ಟ ಎಂಬ ಕಾರಣಕ್ಕೆ ಜಿಲ್ಲಾ ಮಟ್ಟದಲ್ಲೇ ಜನತಾ ದರ್ಶನ ಏರ್ಪಡಿಸಲಾಗಿದೆ. ಆದರೆ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಕೆ-ಸೆಟ್‌ ಪರೀಕ್ಷೆಯನ್ನು ಮಾತ್ರ ಬೆಂಗಳೂರಿನಲ್ಲಿ ಮಾಡುವ ಮೂಲಕ ಪರೀಕ್ಷಾರ್ಥಿಗಳು ರಾಜಧಾನಿಗೆ ಅಲೆಯುವಂತೆ ಮಾಡಲಾಗಿದೆ!

Advertisement

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತ ಪರೀಕ್ಷೆ (ಕೆ-ಸೆಟ್‌) ಮುಂದಿನ ತಿಂಗಳು ನಡೆಯಲಿದೆ. ಒಟ್ಟು 41 ವಿಷಯಗಳಿಗೆ ಪರೀಕ್ಷೆ ಇದ್ದು, 18 ವಿಷಯಗಳಿಗೆ ಮಂಗಳೂರು ಸಹಿತ 8 ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಾಗಿದೆ. ಆದರೆ 23 ವಿಷಯಗಳ ಪರೀಕ್ಷೆಗೆ ಬೆಂಗಳೂರಿನಲ್ಲಿ ಮಾತ್ರ ಕೇಂದ್ರವಿದ್ದು, ಕರಾವಳಿಯ ಅಭ್ಯರ್ಥಿಗಳು ರಾಜಧಾನಿಗೇ ತೆರಳಬೇಕಾಗಿದೆ. ಇದರಿಂದ ಹಣ, ಸಮಯ ಎರಡೂ ವ್ಯಯವಾಗುತ್ತದೆ ಎಂಬುದು ಅಭ್ಯರ್ಥಿಗಳ ಆಕ್ಷೇಪ.

ಮೈಸೂರು ವಿ.ವಿ.ಯು ಕೆ-ಸೆಟ್‌ ಪರೀಕ್ಷೆ ನಡೆಸುವಾಗ ಯುಜಿಸಿ ಮಾರ್ಗಸೂಚಿಯಂತೆ ಎಲ್ಲ ವಿಷಯಗಳಿಗೂ ಆಯಾ ಜಿಲ್ಲೆಯಲ್ಲೇ ಪರೀಕ್ಷೆ ಬರೆಯಲು ಅವಕಾಶವಿತ್ತು. ಪ್ರಸ್ತುತ ಕೆಲವು ವಿಷಯಗಳ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ಇರಿಸಿರುವುದರಿಂದ ಅಭ್ಯರ್ಥಿಗಳು ಬೆಂಗಳೂರಿಗೆ ತೆರಳುವ ಅನಿವಾರ್ಯ ಸೃಷ್ಟಿಯಾಗಿದೆ. ಮೊದಲೆಲ್ಲ ಮಂಗಳೂರಿನಲ್ಲೇ ಕೇಂದ್ರ ಇತ್ತು. ಈಗ ಅಭ್ಯರ್ಥಿಗಳಿಗೆ ಕಷ್ಟವಾಗಿದೆ ಎಂದು ಮಂಗಳೂರಿನ ಅಮುಕ್‌ ಅಧ್ಯಕ್ಷ ಪ್ರೊ| ಗಣೇಶ್‌ ಪೈ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಯಾವೆಲ್ಲ ಪರೀಕ್ಷೆ ಬೆಂಗಳೂರಿನಲ್ಲಿ?
ಭೂಗೋಳ ಶಾಸ್ತ್ರ, ಪ್ರವಾಸೋದ್ಯಮ ಆಡಳಿತ ಹಾಗೂ ನಿರ್ವಹಣೆ, ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ, ಮನೋವಿಜ್ಞಾನ, ಅಪರಾಧ ಶಾಸ್ತ್ರ, ಕಾನೂನು, ಸಂಸ್ಕೃತ, ಜಾನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಪರಿಸರ ವಿಜ್ಞಾನ, ಗೃಹ ವಿಜ್ಞಾನ, ವಿದ್ಯುನ್ಮಾನ ವಿಜ್ಞಾನ, ಭೂವಿಜ್ಞಾನ, ಪುರಾತತ್ವ ಶಾಸ್ತ್ರ, ಮಾನವ ಶಾಸ್ತ್ರ, ಮರಾಠಿ, ತತ್ವಶಾಸ್ತ್ರ, ಮಹಿಳಾ ಅಧ್ಯಯನ, ಭಾಷಾ ಜ್ಞಾನ, ಪ್ರದರ್ಶನ ಕಲೆಗಳು, ಸಂಗೀತ, ದೃಶ್ಯ ಕಲೆ ಪರೀಕ್ಷೆಗಳನ್ನು ಬೆಂಗಳೂರಿನಲ್ಲಿ ಏರ್ಪಡಿಸಲಾಗುತ್ತಿದೆ.

ಕಳೆದ ಬಾರಿ ಕೆಲವು ವಿಷಯಗಳಿಗೆ 100ಕ್ಕೂ ಕಡಿಮೆ ಅಭ್ಯರ್ಥಿಗಳು ಇದ್ದ ಕಾರಣ ಈ ಬಾರಿ ಅಂತಹ ವಿಷಯಗಳ ಪರೀಕ್ಷೆಯನ್ನು ಮಾತ್ರ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕೆಲವು ಕಡೆ 10-12 ಅಭ್ಯರ್ಥಿಗಳು ಇರುತ್ತಾರೆ. ಅಂತಹ ಕಡೆ ಪ್ರತ್ಯೇಕ ಪರೀಕ್ಷಾ ಕೇಂದ್ರ ನಡೆಸುವುದು ಕಷ್ಟ.
– ಎಸ್‌. ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು

Advertisement

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next