ಬೆಂಗಳೂರು: ಕಂಬಳ ನೋಡಿ ಮಳಿಗೆಯತ್ತ ಮುಖ ಮಾಡಿದರೆ ಸಾಕು, ಎತ್ತ ನೋಡಿದರೂ ಕರಾವಳಿ ಶೈಲಿಯ ಖಾದ್ಯಗಳ ಲೋಕ….ಮೀನುಗಳ ಫ್ರೈ ಪರಿಮಳ, ಬಲೆ ಬಲೆ ಕುಡ್ಲದ ಕೊರಿ ರೊಟ್ಟಿ ಉಂಡು (ಬನ್ನಿ ಬನ್ನಿ ಮಂಗಳೂರು ಕೋರಿ ರೊಟ್ಟಿ) ಎನ್ನುವ ಕೂಗುಗಳು ಜನರನ್ನು ಒಮ್ಮೆ ಕರಾವಳಿ ಖಾದ್ಯಗಳ ಮುಖ ಮಾಡುವಂತೆ ಮಾಡುತ್ತಿತ್ತು.
ಊಹಿಸಲು ಅಸಾಧ್ಯವಾದ ಕರಾವಳಿಯ ಪ್ರಸಿದ್ಧ ಗ್ರಾಮೀಣ ಕ್ರೀಡಾ ಉತ್ಸವವಾದ ಕಂಬಳವನ್ನು ಸಿಲಿಕಾನ್ ಸಿಟಿಗೆ ಪರಿಚಯಿಸುವ ಜತೆಗೆ ಅಲ್ಲಿಯ ವಿಶೇಷ ತಿಂಡಿ-ತಿನಿಸು(ವೆಜ್-ನಾನ್ ವೆಜ್)ಗಳೂ ಸಹ ಬೆಂಗಳೂರಿನ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕರಾವಳಿ ಎಂದರೆ ಸಾಕು ಥಟ್ ಅಂತ ನೆನಪಾಗೋದು ತರಾವರಿ ಮೀನುಗಳ ಫ್ರೈ, ಏಡಿ ಫ್ರೈ, ಕುಚಲಕ್ಕಿ ಅನ್ನ, ನೀರು ದೋಸೆ, ಕೋಳಿ ರೊಟ್ಟಿ… ಫುಡ್ ಸ್ಟಾಲ್ ಕಡೆ ಹೆಜ್ಜೆ ಹಾಕಿದರೆ, ಎತ್ತ ನೋಡಿದರೂ ದಕ್ಷಿಣ್, ಕೋಸ್ಟಲ್ ವೇವ್ಸ್, ಮಂಗಳೂರು ಸ್ಪೆಷಲ್ ಶಕ್ತಿ ಫುಡ್, ಕೋಸ್ಟಲ್ ಕಿಚನ್, ಮಂಗಳೂರು ಮಸಾಲ ಎಂಬ 30ಕ್ಕೂ ಹೆಚ್ಚು ವಿವಿಧ ಹೆಸರಿನ ಕರಾವಳಿ ಆಹಾರ ಮಳಿಗೆಗಳೇ ಕಣ್ಣಿಗೆ ಕಾಣುತ್ತವೆ. ಬೆಂಗಳೂರಿನಲ್ಲಿ ವಾಸವಾಗಿರುವ ಕರಾವಳಿ ಜನರು ಮಾತ್ರವಲ್ಲದೇ ಇನ್ನಿತರೆ ಪ್ರದೇಶದ ಮಂದಿಯೂ ಕರಾವಳಿ ಶೈಲಿಯ ಊಟಕ್ಕೆ ಫಿದಾ ಆಗಿದ್ದರು. ಕುಚಲಕ್ಕಿ ಜತೆಗೆ ಮೀನು ಸಾರು ಇದ್ದರೆ ಸಾಕು ಎನ್ನುತ್ತಿದ್ದರು ನೆರೆದಿದ್ದ ಕರಾವಳಿಯವರು.
ಸಮುದ್ರದಲ್ಲಿ ಹಿಡಿದ ಮೀನುಗಳು ತುಂಬಾ ಫ್ರೆಶ್ ಆಗಿ ಮತ್ತು ರುಚಿಕಟ್ಟಾಗಿ ಇರುತ್ತವೆ. ಮಂಗಳೂರಿಗೆ ಹೋದಾಗ ಮಿಸ್ ಇಲ್ಲದೇ ಮೀನಿನ ಊಟ ಮಾಡಿ ಬರುತ್ತಿದ್ದೆ. ಆದರೆ, ಈಗ ಬೆಂಗಳೂರಿನಲ್ಲೇ ಸಮುದ್ರ ಮೀನುಗಳಿಂದ ಮಾಡಿದ ವಿವಿಧ ಖಾದ್ಯಗಳನ್ನು ಸೇವಿಸಿ ತುಂಬಾ ಖುಷಿ ಆಯ್ತು ಎನ್ನುತ್ತಾರೆ ಜಯನಗರದ ಮಹಾಂತೇಶ್.
ವಿಶೇಷ ಖಾದ್ಯ, ತಿನಿಸುಗಳು: ಕೋಳಿ ಸುಕ್ಕಾ, ಪುಳಿಮುಂಚಿ, ಗೋಳಿಬಜೆ, ಮಂಗಳೂರು ಬನ್ಸ್, ಪುಂಡಿ, ಪತ್ರೋಡೆ, ಕೊಟ್ಟೆ ಕಡುಬು, ನೀರಾ, ನೀರ್ ದೋಸೆ, ಅಂಜಲ್, ಬಂಗಡೆ, ಕಾಣೆ, ಪಾಮ್ ಪ್ಲೇಟ್, ಸೀಗಡಿ, ಏಡಿ, ಕಚೋರಿ, ಬೊಂಡಾಸ್, ಮರವಾಯಿ, ಬೂತಾಯಿ, ಸಿಲ್ವರ್ ಫಿಶ್ ಫ್ರೈ, ಕುಚ್ಲಕ್ಕಿ, ಕೋರಿ ರೊಟ್ಟಿ, ಗಡ್‌ಬಡ್ ಐಸ್‌ಕ್ರೀಂ, ಮಂಗಳೂರು ಸ್ಪೆಷಲ್ ಚುರುಮುರಿ, ಚಕ್ಕುಲಿ ಇತ್ಯಾದಿ. ಮಂಗಳೂರು ಸ್ಪೇಷಲ್ ಚುರುಮುರಿ, ಕರಾವಳಿ ಸ್ಪೇಷಲ್‌ನ ಎಲ್ಲಾ ಮೀನುಗಳ ತವಾ ಫ್ರೈಗಳಿಗೆ ಬೇಡಿಕೆ ಹೆಚ್ಚಿದೆ.
ಶನಿವಾರ ದಿನದ 24 ಗಂಟೆಗಳ ಮಳಿಗೆ ತೆರೆದಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಭಾನುವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ನಿರೀಕ್ಷೆಯಿದೆ.
ವಂಡರ್ ಕಂಬಳ, ಮೂಡ್ಲುಕಟ್ಟೆ ಕಂಬಳ ಸೇರಿದಂತೆ ಹಲವು ಕಂಬಳ ನೋಡಿದ್ದೇನೆ. ಆದರೆ ಈಗ ಮಕ್ಕಳು, ಮೊಮ್ಮಕ್ಕಳಿಗೆ ಈ ಕಂಬಳ ಹೊಸದು. ಅವರಿಗೆ ಕಂಬಳ ತೋರಿಸಿಕೊಂಡು ಕರಾವಳಿ ಶೈಲಿಯ ಆಹಾರ ಸೇವಿಸಲೆಂದು ಬಂದಿದ್ದೇವೆ.
–ಹನ್ಸಲ್, ಕರಾವಳಿ ತಿನಿಸುಗಳ ವ್ಯಾಪಾರಿ. ಅನಂತ್, ಕೋರಮಂಗಲ (ಮೂಲ ಕುಂದಾಪುರ)
–ಭಾರತಿ ಸಜ್ಜನ್