Advertisement

ಕರಾವಳಿ ಬಸ್‌ ಮಾಲಕರ ಅಸಮಾಧಾನ: ತೆರಿಗೆ ವಿನಾಯಿತಿಯಿಂದ ಪ್ರಯೋಜನವಿಲ್ಲ

10:04 AM May 20, 2020 | mahesh |

ಮಂಗಳೂರು: ರಾಜ್ಯ ಸರಕಾರವು ಖಾಸಗಿ ಬಸ್‌ಗಳ ರಸ್ತೆ ತೆರಿಗೆಯಲ್ಲಿ ವಿನಾಯಿತಿ ಘೋಷಿಸಿದ್ದರೂ ಕರಾವಳಿ ಬಸ್‌ ಮಾಲಕರು ಮಾತ್ರ ಈ ವಿನಾಯಿತಿಯಿಂದ ಏನೂ ಲಾಭವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬಸ್‌ಗಳು ರಸ್ತೆಗಿಳಿದಿಲ್ಲ. ಶೇ. 95ರಷ್ಟು ಮಾಲಕರು ಬಸ್‌ಗಳನ್ನು ಆರ್‌ಟಿಒಗೆ ಸರಂಡರ್‌ ಮಾಡಿದ್ದಾರೆ. ಇದೇ ಕಾರಣಕ್ಕೆ ಸಹಜವಾಗಿಯೇ ಬಸ್‌ ಮಾಲಕರಿಗೆ ತೆರಿಗೆಯಲ್ಲಿ ವಿನಾಯಿತಿ ದೊರಕುತ್ತದೆ. ಹೀಗಿದ್ದಾಗ ಸರಕಾರ ತೆರಿಗೆ ವಿನಾಯಿತಿ ಘೋಷಿಸಿದರೂ ಅದರ ಲಾಭ ಬಸ್‌ ಮಾಲಕರಿಗಾಗದು’ ಎಂದಿದ್ದಾರೆ.

ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಪ್ರತಿಕ್ರಿಯಿಸಿ, “ಸದ್ಯ ಬಸ್‌ ಮಾಲಕರಿಗೆ ಯಾವುದೇ ಆದಾಯದ ಮೂಲ ಇಲ್ಲದಿರುವು ದರಿಂದ ಮುಂದಿನ ಆರು ತಿಂಗಳ ಕಾಲ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಶೇ. 50ಕ್ಕೆ ಕಡಿತಗೊಳಿಸುವಾಗ ಪ್ರಯಾಣ ದರವನ್ನು ಹೆಚ್ಚಿಸುವುದು ಅನಿವಾರ್ಯ’ ಎಂದಿದ್ದಾರೆ.

ಮಂಗಳೂರು ಸಾರಿಗೆ ಇಲಾಖೆ ಯಲ್ಲಿ ಮಂಗಳವಾರ ಆರ್‌ಟಿಒ ಜತೆ ಬಸ್‌ ಮಾಲಕರು ಸಭೆ ನಡೆಸಿ ಬೇಡಿಕೆ ಮುಂದಿಟ್ಟಿದ್ದಾರೆ. ಮೇ ಅಂತ್ಯದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯುವುದು ಅನುಮಾನ ಎಂದು ಬಸ್‌ ಮಾಲಕರೊಬ್ಬರು ತಿಳಿಸಿದ್ದಾರೆ.

ಉಡುಪಿ: ಖಾಸಗಿ ಬಸ್‌ ಓಡಾಟ ಇಂದು ನಿರ್ಧಾರ
ಉಡುಪಿ: ರಾಜ್ಯ ಸರಕಾರವು ಖಾಸಗಿ ಬಸ್‌ ಮಾಲಕರ ಬೇಡಿಕೆಗಳಿಗೆ ಸ್ಪಂದಿಸಿದ್ದು, 2 ತಿಂಗಳ ತೆರಿಗೆ ವಿನಾಯಿತಿ ಕಲ್ಪಿಸಿದೆ. ಎಂದಿನಂತೆ ಬಸ್‌ ಓಡಿಸುವ ಬಗ್ಗೆ ಬುಧವಾರ ತೀರ್ಮಾನವಾಗಲಿದೆ ಎಂದು ಕೆನರಾ ಬಸ್‌ ಮಾಲಕರ ಸಂಘದ ಉಪಾಧ್ಯಕ್ಷ ಸದಾನಂದ ಛಾತ್ರ ತಿಳಿಸಿದ್ದಾರೆ. ಖಾಸಗಿ ಬಸ್‌ ಮಾಲಕರು ಹಲವಾರು ಬೇಡಿಕೆಗಳನ್ನು ಮುಂದಿರಿಸಿದ್ದರು. ಅದರಲ್ಲಿ ಎಪ್ರಿಲ್‌, ಮೇ ತಿಂಗಳ ತೆರಿಗೆ ವಿನಾಯಿತಿ ಮಾಡಲಾಗಿದೆ. ಬುಧವಾರದಿಂದ ಕೆಲವು ಖಾಸಗಿ ಬಸ್‌ಗಳು ಬೆಂಗಳೂರು, ಮೈಸೂರು ಭಾಗಗಳಿಗೆ ಸಂಚಾರ ಮಾಡಲಿವೆ. ಎಕ್ಸ್‌ ಪ್ರಸ್‌, ಸಿಟಿ, ಸರ್ವೀಸು ಬಸ್ಸುಗಳ ಬಗ್ಗೆಯೂ ತೀರ್ಮಾನವಾಗುವ ಸಾಧ್ಯತೆಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next