ಕರಾವಳಿ ಪ್ರದೇಶದಲ್ಲಿ ಆಟಿ ತಿಂಗಳು (ಆಷಾಡ ತಿಂಗಳು) ಜನಜೀವನ ಮತ್ತು ಪ್ರಕೃತಿಯ ಸಮೃದ್ಧತೆಯ ದೃಷ್ಟಿಯಿಂದ ಬಹು ವಿಶೇಷವಾದದ್ದು. ಈ ತಿಂಗಳು ಇಲ್ಲಿನ ಜನರ ಭವಿಷ್ಯವನ್ನು ನಿರ್ಧರಿಸುವ ಮತ್ತು ಆಯುಷ್ಯವನ್ನು ಹೆಚ್ಚಿಸುವ ಕಾಲವೆನ್ನುತ್ತಾರೆ. ಯಾಕೆಂದರೆ ಕೃಷಿಯನ್ನೇ ನಂಬಿರುವ ಜನರು ಆಟಿ ತಿಂಗಳು ಆರಂಭವಾಗುವ ಮೊದಲು ಕೃಷಿ ಕೆಲಸವನ್ನು ಮುಗಿಸಿ ಮನೆ ಒಳಗೆ ಸೇರಿರುತ್ತಾರೆ ಅವರಿಗೆ ಕೃಷಿಗೆ ಪರ್ಯಾಯವಾಗಿ ಬೇರೆ ಕೆಲಸವಿಲ್ಲ. ಅಲ್ಲದೆ ಈ ಸಮಯದಲ್ಲಿ ಬಿಡದೆ ಸುರಿಯುವ ಮಳೆ, ಅಬ್ಬರಿಸುವ ಗುಡುಗು ಜನರನ್ನು ಮನೆಯಿಂದ ಹೊರಗಡೆ ಬರಲು ಬಿಡುವುದಿಲ್ಲ. ಒಂದೆಡೆ ಕೆಲಸವಿಲ್ಲ ಮತ್ತೊಂದೆಡೆ ಹೊರಗಡೆ ಹೋಗುವಂತಿಲ್ಲ ಒಟ್ಟಾರೆ ಈ ತಿಂಗಳಲ್ಲಿ ಜನರಿಗೆ ಜೀವನ ಸಾಗಿಸುವುದು ಬಹಳ ಕಷ್ಟ.
ಇದನ್ನೂ ಓದಿ : ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ
ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಲವಿದು. ಮಣ್ಣು ತಂಪಾಗಿ ಫಲವತ್ತತೆಯಿಂದ ಕೂಡಿರುತ್ತದೆ. ಜನರಿಗೆ ಈ ಸಂದರ್ಭದಲ್ಲಿ ಅವರ ಹಸಿವನ್ನು ನೀಗಿಸುವುದು ಭೂ ಮಾತೆಯ ಮಡಿಲಲ್ಲಿ ದೊರೆಯುವ ಕೆಸುವಿನ ಎಲೆ, ಹಲಸಿನ ಹಣ್ಣಿನ ಬೀಜಗಳು, ನೀರಲ್ಲಿ ಹಾಕಿಟ್ಟ ಹಲಸಿನ ಸೊಳೆ(ಪಚ್ವಿರ್), ಗೂಂಜಿ ಹೀಗೆ ಸುತ್ತಮುತ್ತಲಿನಲ್ಲಿ ದೊರೆಯುವ ಗೆಡ್ಡೆ ಗೆಣಸುಗಳು, ಸೊಪ್ಪುಗಳು. ಈ ತಿನಸುಗಳು ಜನರ ಆರೋಗ್ಯವನ್ನೂ ವೃದ್ಧಿಸುತ್ತದೆ. ಆಟಿ ಅಮವಾಸ್ಯೆ ಒಂದು ರೀತಿಯಲ್ಲಿ ಇಲ್ಲಿಯ ಜನರಿಗೆ ಆರೋಗ್ಯ ದಿನವಿದ್ದಂತೆ ಈ ದಿನ ಭೂಮಂಡಲದಲ್ಲಿರುವ ಎಲ್ಲಾ ಔಷಧೀಯ ಗುಣಗಳು ಹಾಳೆಯ (ಪಾಲೆದ ಮರ) ಮರದಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ ಈ ದಿನ ಸೂರ್ಯೋದಯ ಆಗುವ ಮೊದಲು ಕಲ್ಲಿನಿಂದ ಹಾಳೆಯ ಕೆತ್ತೆಯನ್ನು ಕೆತ್ತಿ ತಂದು ಅದನ್ನು ಕಷಾಯ ಮಾಡಿ ಕುಡಿಯುತ್ತಾರೆ. ಇದು ವರ್ಷವಿಡೀ ದೇಹಕ್ಕೆ ಬೇಕಾಗಿರುವ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎನ್ನುತ್ತಾರೆ.
‘ಆಟಿಯು ಆನೆಯ ನಡಿಗೆಯಂತೆ’ ಎನ್ನುವ ಮಾತಿದೆ. ಅಂದರೆ ಜನರು ಕೆಲಸವಿಲ್ಲದೆ ಇರುವುದರಿಂದ ಸಮಯವೇ ಕಳೆಯುವುದಿಲ್ಲ ಎನ್ನುವ ಅರ್ಥ. ಈ ಸಂದರ್ಭದಲ್ಲಿ ಮನೆಯೊಳಗೆ ಇರುವ ಮನೆ ಮಂದಿಯ ನಡುವೆ ಇನ್ನಷ್ಟು ಬಾಂಧವ್ಯದ ಬೆಸುಗೆ ಬೆಳೆಸುವುದೇ ಚೆನ್ನಮಣೆಯಂತಹ ಜನಪದ ಆಟಗಳು. ಈ ರೀತಿಯ ಬೇರೆ ಬೇರೆ ಆಟಗಳನ್ನು (ಒಳಾಂಗಣ ಆಟ) ಆಡುತ್ತಾ ದಿನ ಕಳೆಯುತ್ತಾರೆ. ಆಟಿ ತಿಂಗಳ ಮೊದಲು ಮತ್ತು ನಂತರದ ದಿನಗಳಲ್ಲಿ ಜನರು ಬೇಸಾಯದ ಕೆಲಸದಲ್ಲೇ ತೊಡಗಿರುವುದರಿಂದ ಮನೆಯೊಳಗಿನ ಹೆಚ್ಚಿನ ಕೆಲಸಕ್ಕೆ ಸಮಯ ದೊರಕುವುದಿಲ್ಲ. ಆದ್ದರಿಂದ ಆಟಿ ಹೊರಗಡೆ ಹಾಕುವ ಪದ್ಧತಿ ಇದೆ. ಅಂದರೆ ಈ ತಿಂಗಳಲ್ಲಿ ಒಂದು ದಿನ ಮನೆಯ ಅಟ್ಟದಿಂದ ಹಿಡಿದು ಕೊಟ್ಟಿಗೆಯವರೆಗೆ ಸ್ವಚ್ಛತಾ ಕೆಲಸವನ್ನು ಮಾಡುತ್ತಾರೆ.
ಇನ್ನು ಈ ತಿಂಗಳಲ್ಲಿ ನಂಬಿಕೆ, ಆರಾಧನೆಯ ವಿಚಾರಕ್ಕೆ ಬಂದರೆ ದೈವ-ದೇವರ ಆರಾಧನೆ ಇರುವುದಿಲ್ಲ. ದೇವರು ಮಾಂತ್ರಿಕ ಶಕ್ತಿಯ ಪ್ರತೀಕವಾಗಿ ಆಟಿ ಕಳಂಜನನ್ನು ಭೂಮಿಗೆ ಕಳುಹಿಸುತ್ತಾರೆ ಎನ್ನುವರು. ಆಟಿ ಕಳಂಜ ಮನೆಮನೆಗೆ ಬರುತ್ತಾ, ಊರಿನ ರೋಗ ರುಜಿನಗಳನ್ನು, ಅನಿಷ್ಟಗಳನ್ನು ಓಡಿಸುತ್ತಾನೆ ಎಂಬ ನಂಬಿಕೆಯಿದೆ.
ಹೀಗೆ ಆಟಿ ತಿಂಗಳು ಕರಾವಳಿಯ (ತುಳುನಾಡು) ಜನರಿಗೆ ಕಷ್ಟದ ಕಾಲವಾದರೂ ಪ್ರಕೃತಿಗೆ ಸಮೃದ್ಧತೆಯ ಸಮಯವಿದು. ಒಂದು ರೀತಿ ಸುಖ ದುಃಖಗಳ ಸಮ್ಮಿಲನವೇ ಈ ಆಟಿ ತಿಂಗಳು.
ನಳಿನಿ ಎಸ್ ಸುವರ್ಣ
ಆಳ್ವಾಸ್ ಕಾಲೇಜ್ ಮೂಡುಬಿದಿರೆ.
ಇದನ್ನೂ ಓದಿ : ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಬ್ಯಾಂಕ್ ಗಳು ಸಹಕರಿಸಬೇಕು : ಪಿಣರಾಯಿ ವಿಜಯನ್