Advertisement

Mangaluru: ಮೈನವಿರೇಳಿಸಿದ ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ

11:11 AM Feb 24, 2024 | Team Udayavani |

ಮಂಗಳೂರು: ಆಕಾಶದಲ್ಲಿ ಹೆಲಿಕಾಪ್ಟರ್‌, ಡೋರ್ನಿಯರ್‌ಗಳು, ಸಮುದ್ರದಲ್ಲಿ ಹಡಗುಗಳು, ಇಂಟರ್‌ ಸೆಪ್ಟರ್‌, ಗಸ್ತು ನೌಕೆಗಳು…. ನೀರಿನಲ್ಲಿ ಮುಳುಗುತ್ತಿದ್ದವರ ರಕ್ಷಣೆ, ಹಡಗಿಗೆ ತಗಲಿದ ಬೆಂಕಿಯನ್ನು ನಂದಿಸುವುದು, ಶಂಕಾಸ್ಪದ ಹಡಗುಗಳ ಮೇಲೆ ನಿಗಾ, ಕಡಲ್ಗಳ್ಳರ ಹಡಗಿನ ಪತ್ತೆ, ದಾಳಿ, ವಶ…

Advertisement

ಇವು ನವಮಂಗಳೂರು ಬಂದರಿನಿಂದ 15 ನಾಟಿಕಲ್‌ ಮೈಲು ದೂರದ ಸಮುದ್ರದಲ್ಲಿ ಶುಕ್ರವಾರ ನಡೆದ ಭಾರತೀಯ ತಟರಕ್ಷಣ ಪಡೆಯ (ಕೋಸ್ಟ್‌ಗಾರ್ಡ್‌) ಸಾಹಸಮಯ ಕಾರ್ಯಾಚರಣೆಗಳು.

“ಕೋಸ್ಟ್‌ಗಾರ್ಡ್‌ ರೈಸಿಂಗ್‌ ಡೇ’ ಪ್ರಯುಕ್ತ ಶುಕ್ರವಾರ ಸರಿಸುಮಾರು ಎರಡೂವರೆ ಗಂಟೆ ಕಾಲ ನಡೆದ ಅಣಕು ಕಾರ್ಯಾಚರಣೆ ರೋಮಾಂಚನ ವನ್ನುಂಟು ಮಾಡಿತು. ತಟರಕ್ಷಣ ಪಡೆಯ ಸಾಮರ್ಥ್ಯ, ಕಾರ್ಯಕ್ಷಮತೆಯನ್ನು ಪ್ರಸ್ತುತಪಡಿಸಿತು.

ವೈವಿಧ್ಯಮಯ ಕಸರತ್ತು

ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ಹೆಲಿಕಾಪ್ಟರ್‌ ಮೂಲಕ ಪತ್ತೆ ಹಚ್ಚಿ ಸುಮಾರು ಅರ್ಧ ತಾಸಿನ ಕಾರ್ಯಾಚರಣೆಯಲ್ಲಿ (ಸರ್ಚ್‌ ಆ್ಯಂಡ್‌ ರೆಸ್ಕ್ಯೂ -ಸಾಸ್‌) ರಕ್ಷಿಸಲಾಯಿತು. ಅನಂತರ ಮತ್ತೋರ್ವನನ್ನು ಸ್ಪೀಡ್‌ಬೋಟ್‌ ಮೂಲಕ ರಕ್ಷಿಸಲಾಯಿತು.

Advertisement

ಸಮುದ್ರ ಮಧ್ಯೆ ಹಡಗಿನಲ್ಲಿ ಬೆಂಕಿ ಅವಘಡ ಸಂದರ್ಭ ನಡೆಸುವ ಕಾರ್ಯಾಚರಣೆಯ ಮಾದರಿಯಲ್ಲಿ ವಿಕ್ರಮ್‌ ಹಡಗಿನಲ್ಲಿದ್ದ ಬೃಹತ್‌ ನೀರಿನ ಸ್ಪ್ರಿಂಕ್ಲರ್‌ನಿಂದ ಸುಮಾರು ಒಂದು ಕಿ.ಮೀ. ದೂರಕ್ಕೆ ನೀರು ಹಾಯಿಸಲಾಯಿತು.

ಕಡಲ್ಗಳ್ಳರ ಹಡಗಿನ ಪತ್ತೆ, ಗುಂಡು ಹಾರಾಟ ಇತ್ಯಾದಿ ಬೆಳಗ್ಗೆ 11ರಿಂದ ಸುಮಾರು 1.30ರ ವರೆಗೆ ನಡೆಯಿತು. ಕಾರ್ಯಾಚರಣೆಯಲ್ಲಿ 2 ಇಂಟರ್‌ ಸೆಪ್ಟರ್‌ಗಳು, 2 ಡೋರ್ನಿಯರ್‌ಗಳು (ವಿಮಾನ), ಒಂದು ಅತ್ಯಾಧುನಿಕ ಹೆಲಿಕಾಪ್ಟರ್‌, 6 ಹಡಗುಗಳು, ಒಂದು ಕಡಲಾಚೆಯ ಗಸ್ತು ಹಡಗು (ಆಫ್ ಶೋರ್‌ ಪ್ಯಾಟ್ರೊಲ್‌ ವೆಸೆಲ್‌- ಒಪಿವಿ), 3 ವೇಗದ ಗಸ್ತು ನೌಕೆ (ಫಾಸ್ಟ್‌ ಪ್ಯಾಟ್ರಲ್‌ ವೆಸೆಲ್‌- ಎಫ್ಪಿವಿ)ಗಳು ಪಾಲ್ಗೊಂಡವು.

ರಾಜ್ಯಪಾಲರಿಂದ ವೀಕ್ಷಣೆ

ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ತಟರಕಣ ಪಡೆಯ ಹಡಗಿನಲ್ಲಿ ಕುಳಿತು ಕಾರ್ಯಾಚರಣೆಯನ್ನು ವೀಕ್ಷಿಸಿ ಶ್ಲಾಘಿಸಿದರು.

ಕರ್ನಾಟಕ ಕೋಸ್ಟ್‌ ಗಾರ್ಡ್‌ ಕಮಾಂಡರ್‌ ಪ್ರವೀಣ್‌ ಕುಮಾರ್‌ ಮಿಶ್ರಾ, ಕಮಾಂಡಿಂಗ್‌ ಅಫೀಸರ್‌ ಹಾಗೂ ಡಿಐಜಿ ಅಶೋಕ್‌ ಕುಮಾರ್‌ ಭಾಮ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆನಂದ್‌ ಪಾಲ್ಗೊಂಡರು.

“ಸಾಹಸಮಯ ಅನುಭವ

ಬಿಹಾರ ಕೋಸ್ಟ್‌ಗಾರ್ಡ್‌ ಅಧಿಕಾರಿ ಯೋರ್ವರು ಮಾತನಾಡಿ, “30 ವರ್ಷ ಗಳಿಂದ ಕೋಸ್ಟ್‌ಗಾರ್ಡ್‌ನಲ್ಲಿದ್ದು, ಪಾರಾದೀಪ್‌, ವಿಶಾಖಪಟ್ಟಣ, ಗಾಂಧಿ ನಗರ ಮೊದಲಾದೆಡೆ ಸೇವೆ ಸಲ್ಲಿಸಿ ಮಂಗಳೂರಿನಲ್ಲಿದ್ದೇನೆ. ಕೋಸ್ಟ್‌ಗಾರ್ಡ್‌ ನಲ್ಲಿ ಕೆಲಸವೆಂದರೆ ಸಾಹಸಮಯ ಅನುಭವ ಮಾತ್ರವಲ್ಲದೆ ಪ್ರಕೃತಿಯೊಂ ದಿಗಿನ ಒಡನಾಟ’ ಎಂದರು.

“ಕೋಸ್ಟ್‌ಗಾರ್ಡ್‌ನ ಈ ಅದ್ಭುತ ಸಾಹಸಮಯ ಕವಾಯತು ನೋಡುವ ಮೊದಲ ಅವಕಾಶ ನನ್ನದಾಯಿತು. ದೇಶದ ಕಡಲು ರಕ್ಷಣೆಯಲ್ಲಿ ಕೋಸ್ಟ್‌ ಗಾರ್ಡ್‌ ಪಾತ್ರ ಬಹುಮುಖ್ಯವಾಗಿದ್ದು, ನಮ್ಮ ಕೋಸ್ಟ್‌ಗಾರ್ಡ್‌ ನಮ್ಮ ಹೆಮ್ಮೆ’ ಎಂದು ಪಂಜಾಬ್‌ ನಿವಾಸಿ ಅಮಿತಾ ಶರ್ಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next