Advertisement
ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆಯಾಗಿ ಸರಕಾರ ರಚಿಸುವ ಮೂಲಕ ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಿಸುವುದು ಸಾಧ್ಯವಾದರೂ, ಸ್ಪಷ್ಟ ಜನಾದೇಶವಿಲ್ಲದೆ ಅಥವಾ ಜನಾದೇಶಕ್ಕೆ ವಿರುದ್ಧವಾಗಿ ಅವರು ರಾಜ್ಯದಲ್ಲಿ ಆಡಳಿತ ನಡೆಸುವಂತಾಗಿದೆ. ಹಾಗೆ ನೋಡಿದರೆ ಬಿಜೆಪಿಯ ಕಥೆಯೂ ಅದೇ. ಅದು ಈ ಎರಡು ಪಕ್ಷಗಳಿಗಿಂತ ಹೆಚ್ಚು ಜನರ ನಂಬಿಕೆಯನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ದರೂ ಅಧಿಕಾರ ನಡೆಸುವಷ್ಟು ಸ್ಪಷ್ಟ ಜನಾದೇಶವನ್ನು ಪಡೆದಿಲ್ಲ. ಅದೂ ಅಲ್ಲದೆ, ಬೇರೆ ಪಕ್ಷಗಳ ಚುನಾಯಿತ ಜನಪ್ರತಿ ನಿಧಿಗಳು ತಮ್ಮ ಮತದಾರರನ್ನು ವಂಚಿಸಿ, ಚುನಾವಣಾ ಅಕ್ರಮ ಎಸಗುವ ಅಥವಾ ಪಕ್ಷಾಂತರ ನಡೆಸುವ ಮೂಲಕ ತನ್ನ ಸರಕಾರವನ್ನು ಬೆಂಬಲಿಸುವರೆಂದು ನಿರೀಕ್ಷಿಸಿ, ನಗೆಪಾಟಲಿಗೂ ಈಡಾಯಿತು.
Related Articles
ವೇಳೆಗೆ ರಾಜ್ಯ ಪಾಲ ವಜುಭಾಯಿ ವಾಲಾ ಅವರು ಕೆ.ಜಿ. ಬೋಪಯ್ಯ ಅವರನ್ನು ಪ್ರಸಕ್ತ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿದರು. ಕೋಳಿವಾಡರು ವ್ಯತಿರಿಕ್ತ ತೀರ್ಪನ್ನೇನಾದರೂ ಕೊಟ್ಟಿದ್ದರೆ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಮೂವರು ಶಾಸಕರಿಗೆ ಸಂಕಷ್ಟ ತರುತ್ತಿತ್ತು.
Advertisement
ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ ಹಾಗೂ ಭೀಮಾ ನಾಯ್ಕ ಅವರು 6 ವರ್ಷ ಅನರ್ಹತೆಯ ಶಿಕ್ಷೆ ಎದುರಿಸ ಬೇಕಾಗುತ್ತಿತ್ತು. ಆಗ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾ ರದ ಬಹುಮತದಲ್ಲೂ ಕುಸಿಯುತ್ತಿತ್ತು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಇನ್ನೂ ನಾಲ್ವರು ಚುನಾವಣೆಯಲ್ಲಿ ಸೋತಿದ್ದರಿಂದ ಅವರನ್ನು ಅನರ್ಹ ಗೊಳಿಸಿದ್ದರೂ ಹೆಚ್ಚಿನ ಪರಿಣಾಮವೇನೂ ಆಗುತ್ತಿರಲಿಲ್ಲ. ವಿಶೇಷವೆಂದರೆ, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ವತಃ ಕೆ.ಬಿ. ಕೋಳಿವಾಡರೂ ಪರಾಭವ ಅನುಭವಿಸಿ ದವರು. ಭವಿಷ್ಯ ದಲ್ಲಿ ಅವರನ್ನು “ಕುರ್ಚಿ ಬಿಸಿ ಮಾಡಿ ಹೋದ ಸ್ಪೀಕರ್’ ಎಂದಷ್ಟೇ ಜನ ನೆನಪಿಟ್ಟುಕೊಂಡಾರು.
ದೇಶ ಹಾಗೂ ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿರುವ ಸಮ್ಮಿಶ್ರ ಸರಕಾರಗಳ ಇತಿಹಾಸವನ್ನು ಗಮನಿಸಿದರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಮೈತ್ರಿಯನ್ನು ಹಾಳು ಮಾಡಿದ ಕುಖ್ಯಾತಿಯನ್ನೇ ಹೊಂದಿರುವುದನ್ನು ಗುರುತಿಸ ಬಹುದು. ಆಡಳಿತವನ್ನು ಮಕ್ಕಳಾಟಿಕೆಯಾಗಿ ಪರಿಭಾವಿಸಿದ ಣಈ ಎರಡೂ ಪಕ್ಷಗಳು ತಂಡ ಸ್ಫೂರ್ತಿಯನ್ನು ಎಂದೂ ಪ್ರದರ್ಶಿಸಲೇ ಇಲ್ಲ. ಸಮ್ಮಿಶ್ರ ಸಂಸ್ಕೃತಿಯೇ ಕರ್ನಾಟಕದಲ್ಲಿ ಇಲ್ಲ.
2006ರ ಜನವರಿಯಲ್ಲಿ ತಮ್ಮದೇ ಪಕ್ಷದ (ಜೆಡಿಎಸ್) ವಿರುದ್ಧ ಬಂಡಾಯ ವೆದ್ದ ಎಚ್.ಡಿ. ಕುಮಾರಸ್ವಾಮಿ, ಧರ್ಮ ಸಿಂಗ್ ಸರಕಾರ ಉರುಳಲು ಕಾರಣರಾದರು. ತಲಾ 20 ತಿಂಗಳು ಮುಖ್ಯಮಂತ್ರಿ ಸ್ಥಾನ ಹಂಚಿಕೊಂಡು ಎರಡೂ ಪಕ್ಷಗಳು ಆಡಳಿತ ನಡೆಸಬೇ ಕೆಂಬ ಒಪ್ಪಂದವನ್ನು ಮುರಿದರು. ಕಾಂಗ್ರೆಸ್‌ನಿಂದ “ವಿಚ್ಛೇದನ’ ಪಡೆದ ಮೇಲೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ, ಒಪ್ಪಂದದಂತೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುವ ಹೊತ್ತಿಗೆ ಜೆಡಿಎಸ್ ಅವರ ಕಾಲ ಕೆಳಗಿನ ರತ್ನಕಂಬಳಿ ಎಳೆದು ಕೆಡವಿತು.
ಕೇವಲ ಏಳು ದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, ವಿಶ್ವಾಸಮತವನ್ನೂ ಯಾಚಿಸದೆ 2007ರ ನವೆಂಬರ್ 19ರಂದು ರಾಜೀನಾಮೆ ನೀಡಿ ನಿರ್ಗಮಿಸಿ ದರು. ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಮುಂದೆ ರಾಷ್ಟ್ರಪತಿ ಭವನದಲ್ಲಿ ಬಿಜೆಪಿಯ ಶಾಸಕರೊಂದಿಗೆ ತನ್ನ ಶಾಸಕರ ಪರೇಡ್ ಮಾಡಿಸಿ, ಸಂಖ್ಯಾಬಲ ಪ್ರದರ್ಶಿಸಿದ್ದ ಜೆಡಿಎಸ್, ಬೆಂಗಳೂರಿಗೆ ಮರಳುವಷ್ಟರಲ್ಲಿ ನಿಲುವು ಬದಲಿಸಿ, ಬಿಜೆಪಿಗೆ ಬೆಂಬಲ ನೀಡುವುದಿಲ್ಲವೆಂದು ಘೋಷಿಸಿತು!
ಸಮ್ಮಿಶ್ರ ಸರಕಾರಗಳನ್ನು ನಡೆಸುವ ವಿಚಾರದಲ್ಲಿ ಇದು ಜೆಡಿಎಸ್‌ನ ಕಳಪೆ ಸಾಧನೆ. ಮುಂದಿನ ಐದು ವರ್ಷಗಳ ಕಾಲವಾದರೂ ಜೆಡಿಎಸ್ ನಾಯಕರು ಜವಾಬ್ದಾರಿಯಿಂದ ವರ್ತಿಸಿ, ಈ ಮೈತ್ರಿಯನ್ನಾದರೂ ಯಶಸ್ವಿಗೊಳಿಸಲಿ ಎಂಬುದೇ ರಾಜ್ಯದ ಜನರ ನಿರೀಕ್ಷೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಲ್ಲಿ ಈ ನಾಟಕೀಯತೆ ಇದೆ. ಮೋದಿ ಹಾಗೂ ಅಮಿತ್ ಶಾ ವಿರೋಧಿ ಅಂಶ ಹಾಗೂ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಂತ್ರವೇ ಹಳೆಯ ಕಾಲದಲ್ಲಿ ಬಡಗಿಗಳು ಮರಗಳನ್ನು ಜೋಡಿಸಲು ಬಳಸುತ್ತಿದ್ದ “ಮರವಜ್ರ’ ಎಂಬ ಅಂಟಿನಂತೆ ಕೆಲಸ ಮಾಡಿ, ಎರಡೂ ಪಕ್ಷಗಳ ನಡುವೆ ಮೈತ್ರಿಯನ್ನು ಬೆಸೆದಿದೆ. 1970ರ ದಶಕದ ವರೆಗೆ ಕಾಂಗ್ರೆಸೇತರ ಪಕ್ಷಗಳು ಒಗ್ಗೂಡಿದಂತೆ ಈಗ ಬಿಜೆಪಿಯೇತರ ಪಕ್ಷಗಳು ಒಂದಾಗುತ್ತಿವೆ. ರಾಜಕಾರಣಿಗಳ ತಾವು “ಸೆಕ್ಯೂಲರ್’ ಹಾಗೂ “ಸೋಷಲಿಸ್ಟ್’ ಎಂಬ ಹೇಳಿಕೆಯನ್ನು ಈಗ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಪಂಚ ಹಾಗೂ ಸಪ್ತ ತಾರಾ ಹೊಟೇಲ್, ರೆಸಾರ್ಟ್‌ಗಳಲ್ಲಿ ತಂಗಿರುವ ನಮ್ಮ ಶಾಸಕರಿಂದ ಸಮಾಜವಾದವನ್ನು ನಿರೀಕ್ಷಿಸುವುದಾದರೂ ಹೇಗೆ ಸಾಧ್ಯ? ತಮ್ಮ ಶಾಸಕರನ್ನು ಸಾಧಾರಣ ಬಜೆಟ್‌ನ ಹೊಟೇಲ್ ಅಥವಾ ಸರಕಾರಿ ಅತಿಥಿ ಗೃಹಗಳಲ್ಲಿ ಉಳಿಸಿಕೊಂಡಿದ್ದರೆ ರಾಜಕೀಯ ಪಕ್ಷಗಳ ನಾಯಕರು ಸಮಾಜವಾದದ ಬಗ್ಗೆ ಮಾತನಾಡಬಹುದಿತ್ತೇನೋ. ಕೇರಳ ಮಾದರಿಯ ಮೈತ್ರಿಗಳು
ಸಮ್ಮಿಶ್ರ ಸರಕಾರಗಳನ್ನು ನಡೆಸುವ ವಿಚಾರದಲ್ಲಿ ಕರ್ನಾಟಕವು ತನ್ನ ನೆರೆಯ ರಾಜ್ಯವಾದ ಕೇರಳದಿಂದ ಸಾಕಷ್ಟು ಕಲಿಯಬೇಕಿದೆ. ಆ ರಾಜ್ಯದಲ್ಲಿ ಸರಳ ಬಹುಮತವಷ್ಟೇ ಇದ್ದ ಮೈತ್ರಿ ಸರಕಾರಗಳೂ ಉತ್ತಮ ಆಡಳಿತ ನೀಡಿವೆ. ಪಕ್ಷಗಳು ನೆಲೆಗಳನ್ನು ಬದಲಿಸಿರಬಹುದು. ಆದರೆ, ತಣ್ತೀ ಸಿದ್ಧಾಂತಗಳನ್ನು ಗೌರವಿಸುವ ಅಲ್ಲಿನ ಶಾಸಕರು ತಮ್ಮ ನಿಷ್ಠೆಯನ್ನು ಎಂದಿಗೂ ಬದಲಿಸಲಿಲ್ಲ. ಸಂಯುಕ್ತ ರಂಗದ ನಾಯಕ ದಿ| ಚೇಲತ್ ಅಚ್ಯುತ ಮೆನನ್ ಅವರು 1970ರಿಂದ 1977ರವರೆಗೆ ಕೇರಳದ ಮುಖ್ಯಮಂತ್ರಿ ಯಾಗಿದ್ದರು. ಕೆಲವು ವರ್ಷಗಳವರೆಗೆ ಅಲ್ಲಿನ ಎಡರಂಗ ಸರಕಾರ ಹೌದೋ ಅಲ್ಲವೋ ಎಂಬಂತಹ ಬಹುಮತವನ್ನು ಹೊಂದಿತ್ತು. ಸ್ಪಷ್ಟ ಬಹುಮತವಿದ್ದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 1989ರಿಂದ 94ರ ಅವಧಿಯಲ್ಲಿ ಸ್ಥಿರ ಸರಕಾರ ನೀಡುವಲ್ಲಿ ವಿಫಲವಾಯಿತು. ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಅಭಿಮಾನಿಗಳು ನೆನಪಿಸಿಕೊಳ್ಳಲೂ ಬಯಸದ ಪಿ.ವಿ. ನರಸಿಂಹ ರಾಯರು 1991ರ ಜೂನ್ ತಿಂಗಳಿಂದ 1993ರವರೆಗೆ ಅಲ್ಪಮತದ ಸರಕಾರವನ್ನೇ ಯಾವುದೇ ಸಮಸ್ಯೆಯಿಲ್ಲದಂತೆ ಮುನ್ನಡೆಸಿದ್ದರು. ಮೇ 12ರಂದು ನಡೆದ ಚುನಾವಣೆಯಲ್ಲಿ ಜನರಿಂದ ತಿರಸ್ಕೃತ ಗೊಂಡ ಕಾಂಗ್ರೆಸ್ ಪಕ್ಷದ ಶಾಸಕರು ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆ ತೂರಿಬಂದಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾ ಜಯ ಅನುಭವಿಸಿದ ಸಿದ್ದರಾಮಯ್ಯ ಅವರಲ್ಲದೆ, ಅವರ ಸಂಪುಟದ 16 ಸಚಿವರು ಚುನಾವಣೆಯಲ್ಲಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಇದು ಕಾಂಗ್ರೆಸ್ ಬಗೆಗೆ ಜನರ ತಿರಸ್ಕಾರವ ಲ್ಲವೇ? ಈ ಹಿನ್ನೆಲೆಯಲ್ಲಿ, ಜೆಡಿಎಸ್ ಸರಕಾರ ರಚಿಸುವುದಿದ್ದರೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಬೇಕಿತ್ತು ಎಂಬ ಅಭಿಪ್ರಾಯವೂ ಇದೆ. ಆದರೆ, ಜೆಡಿಎಸ್ ಶಾಸಕಾಂಗ ಪಕ್ಷಕ್ಕೆ ಆಡಳಿತ ನಡೆಸುವಲ್ಲಿ ಅನುಭವದ ಕೊರತೆ ಇದ್ದು, ಹೇಗೆ ನಿಭಾಯಿಸುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಿದ್ದರಾಮಯ್ಯ ಬಹಳ ಹಿಂದೆಯೇ ಪಕ್ಷ ತ್ಯಜಿಸಿದ್ದು, ಎಂ.ಸಿ. ನಾಣಯ್ಯ ಅವರ ನಿವೃತ್ತಿ, ಎಂ.ಪಿ. ಪ್ರಕಾಶ್ ಅವರ ನಿಧನ ಹಾಗೂ ಬಸವಕಲ್ಯಾಣದಲ್ಲಿ ಸೋತ ಪಿ.ಜಿ.ಆರ್. ಸಿಂಧ್ಯಾ ಅವರ ಕಾರಣದಿಂದಾಗಿ ಜೆಡಿಎಸ್ ಈಗ ಆಡಳಿತದ ದೃಷ್ಟಿಯಿಂದ ದುರ್ಬಲವಾಗಿದೆ. ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿ ಜೆಡಿಎಸ್ ಸರಕಾರ ರಚಿಸುತ್ತಿದ್ದರೆ, ಅದು ದೇವೇಗೌಡರ ಮಾರ್ಗದರ್ಶನದಲ್ಲಿ ನಡೆಯುವ ಕುಮಾರಸ್ವಾಮಿ – ರೇವಣ್ಣ ಅವರ ಆಡಳಿತವಾಗಿಯೇ ಉಳಿಯುತ್ತಿತ್ತು ಎಂಬುದಂತೂ ಸ್ಪಷ್ಟ. – ಅರಕೆರೆ ಜಯರಾಮ್