Advertisement

ರಾಜ್ಯಕ್ಕೆ ಕೋಲ್‌ ಶಾಕ್‌

06:00 AM Dec 02, 2017 | Team Udayavani |



Advertisement

ಬೆಂಗಳೂರು: ಮಹಾರಾಷ್ಟ್ರದಿಂದ ಕಲ್ಲಿದ್ದಲು ಖರೀದಿಗೆ ಮುಂದಾಗಿರುವ ಕರ್ನಾಟಕ ರಾಜ್ಯಕ್ಕೆ ಇದೀಗ ಕೇಂದ್ರ ಸರ್ಕಾರ “ನೋಟಿಸ್‌ ಶಾಕ್‌’ ನೀಡಿದೆ.

ಕಲ್ಲಿದ್ದಲು ಹಂಚಿಕೆ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ, “”ನಿಮಗೆ ಕಲ್ಲಿದ್ದಲು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಬಾರದೇಕೆ?ಎಂದು ಕೇಂದ್ರ ಸರ್ಕಾರ ನೋಟಿಸ್‌ ನೀಡಿರುವುದು ರಾಜ್ಯ ಸರ್ಕಾರವನ್ನು ಗಾಬರಿಗೊಳಿಸಿದೆ. ಈ ವಿಷಯವನ್ನು ಸ್ವತಃ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಕೇಂದ್ರದ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌, “”ಮಹಾರಾಷ್ಟ್ರದಿಂದ ಕಲ್ಲಿದ್ದಲು ಪಡೆಯುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕಲ್ಲು ಹಾಕಿದೆ. ಕಲ್ಲಿದ್ದಲು ಸರಬರಾಜನ್ನು ಏಕೆ ಸ್ಥಗಿತಗೊಳಿಸಬಾರದು ಎಂದು ನೋಟಿಸ್‌ ಕಳುಹಿಸಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಬಗ್ಗೆ ಮಲತಾಯಿ ಧೋರಣೆಯ ಸಂದೇಶ ರವಾನೆ ಮಾಡುತ್ತಿದೆ. ಇದು ನಮಗೆ ಶಾಕ್‌ ಮೂಡಿಸಿದೆ ಎಂದು ಹೇಳಿದ್ದಾರೆ.

ಒಪ್ಪಂದದಂತೆ ರಾಜ್ಯಕ್ಕೆ ದೊರೆಯಬೇಕಾದ ಕಲ್ಲಿದ್ದಲನ್ನು ಕೇಂದ್ರ ಸರ್ಕಾರ ನಮಗೆ ನೀಡಲಿ, ಕಲ್ಲಿದ್ದಲು ವಿಷಯದಲ್ಲಿ ನಾವು ಯಾವುದೇ ರಾಜಕೀಯ ಮಾಡುತ್ತಿಲ್ಲ. ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆ ಇರುವುದರಿಂದ ಡಿಸೆಂಬರ್‌ 7, 8ರಂದು ದೆಹಲಿಯಲ್ಲಿ ನಡೆಯುವ ಇಂಧನ ಸಚಿವರ ಸಮ್ಮೇಳನದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ. ರಾಜ್ಯದಲ್ಲಿನ ಸಮಸ್ಯೆ ನೀಗಿಸಲು ವಿದೇಶದಿಂದ ಕಲ್ಲಿದ್ದಲು ಖರೀದಿ ಮಾಡಲು ಪ್ರಯತ್ನ ನಡೆದಿದೆ ಎಂದರು.

Advertisement

ಲೋಡ್‌ ಶೆಡ್ಡಿಂಗ್‌ ಇಲ್ಲ: ರಾಜ್ಯದಲ್ಲಿ ಕಲ್ಲಿದ್ದಲು ಸಮಸ್ಯೆಯಾದರೂ ಬೇಸಿಗೆಯಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ಅದಾನಿ ಕಂಪನಿಯಿಂದ ಹೆಚ್ಚುವರಿ ವಿದ್ಯುತ್‌ ಖರೀದಿ ಮಾಡುವ ಪ್ರಯತ್ನ ಮಾಡಿದ್ದೇವೆ. ಈಗಾಗಲೇ 1 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ನೀಡುತ್ತಿದ್ದಾರೆ. ಕಲ್ಲಿದ್ದಲು ಇರುವ ಸಂಸ್ಥೆಗಳು ಸಾಮರ್ಥಯ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಅದಾನಿ ಕಂಪನಿಗೂ ಉತ್ಪಾದನೆ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಹೀಗಾಗಿ ಅವರಿಂದ ಹೆಚ್ಚುವರಿ ವಿದ್ಯುತ್‌ ಖರೀದಿ ಮಾಡಲು ಚಿಂತನೆ ಮಾಡಿದ್ದೇವೆ ಎಂದು ಹೇಳಿದರು.

ನಾವು ವಿದ್ಯುತ್‌ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರತ್ಯೇಕ ಕಾರಿಡಾರ್‌ ಕೊಡಿಸಿ ಕೇಂದ್ರದ ಗ್ರಿಡ್‌ನಿಂದ 2.50 ರೂ. ದರದಲ್ಲಿ ವಿದ್ಯುತ್‌ ಕೊಡಿಸಿದರೆ ಸ್ವಾಗತಿಸುತ್ತೇನೆ. ಈ ಸಂಬಂಧ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದೇನೆ. ಅವರು ಹೇಳಿದ ಬೆಲೆಗೆ ವಿದ್ಯುತ್‌ ಕೊಡಿಸಿದರೆ, ಖರೀದಿಸಲು ನಾವು ಸಿದ್ದರಿದ್ದೇವೆ ಎಂದು ಡಿಕೆಶಿ ಹೇಳಿದರು.

ಕೇಂದ್ರ ಸರ್ಕಾರ ರಾಜಕಾರಣ ಮಾಡದೇ ರಾಜ್ಯಕ್ಕೆ ಕಲ್ಲಿದ್ದಲು ಸರಬರಾಜು ಮಾಡಬೇಕು. ಕಲ್ಲಿದ್ದಲು ಪೂರೈಸಲು  ಕೇಂದ್ರ ಸರ್ಕಾರ ಅಸಹಕಾರ  ನೀಡುತ್ತಿದೆ.
– ಡಿ.ಕೆ. ಶಿವಕುಮಾರ್‌, ಇಂಧನ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next