ಹೊಸದಿಲ್ಲಿ: ಹರ್ಯಾಣದ ಸೋನೆಪತ್‌ನಲ್ಲಿ ಬುಧವಾರ ನಡೆದಿದ್ದ ಭೀಕರ ಶೂಟೌಟ್ ಪ್ರಕರಣದ ಮುಖ್ಯ ಆರೋಪಿ ಪವನ್ ಬರಕ್ ಮತ್ತು ಸಚಿನ್ ದಹಿಯಾ ಬಂಧನಕ್ಕೊಳಗಾಗಿದ್ದಾರೆ.
ದಿಲ್ಲಿಯ ವಿಶೇಷ ಪೊಲೀಸ್ ತಂಡ ಇಬ್ಬರನ್ನೂ ಶುಕ್ರವಾರ ವಶಕ್ಕೆ ತೆಗೆದು ಕೊಂಡಿದೆ. ಘಟನೆಯ ಅನಂತರ ಇಬ್ಬರೂ ಪರಾರಿಯಾಗಿದ್ದರು. ಈ ಪೈಕಿ ಸಚಿನ್ ದಹಿಯಾ ಈ ಹಿಂದೆಯೂ ಇಂಥದ್ದೇ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈಗ ಬೆಳಕಿಗೆ ಬಂದಿದೆ.
ಕೋಚ್ ಪವನ್ ಬಳಿಯಿಂದ ಪರವಾನಿಗೆ ಹೊಂದಿರುವ ಒಂದು ರಿವಾಲ್ವರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಶೂಟೌಟ್ ಪ್ರಕರಣ ಹರ್ಯಾಣದ ಸೋನೆಪತ್‌ನಲ್ಲಿನ ಹಲಾಲ್ಪುರದಲ್ಲಿ ರುವ ಶೂಟಿಂಗ್ ಅಕಾಡೆಮಿಯಲ್ಲಿ ಬುಧವಾರ ನಡೆದಿತ್ತು. ಸ್ವತಃ ಪವನ್ ಅವರಿಂದ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕುಸ್ತಿಪಟು ನಿಶಾ ದಹಿಯಾ, ಅವರ ಸಹೋದರ ಸೂರಜ್ ಅವರನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈ ವೇಳೆ ನಿಶಾ ತಾಯಿ ಗುಂಡೇಟಿಗೆ ಒಳಗಾದರೂ ಬದುಕಿ ಉಳಿದಿದ್ದಾರೆ.
ತಾಯಿಯ ಹೇಳಿಕೆ:
ಈ ಕೃತ್ಯಗಳನ್ನೆಲ್ಲ ಎಸಗಿದ್ದು ಪವನ್, ತನಗೆ ಪವನ್ ಕಿರುಕುಳ ನೀಡುತ್ತಿದ್ದಾರೆ ಎಂದು ನಿಶಾ ಹೇಳಿದ್ದೇ ಇದಕ್ಕೆಲ್ಲ ಕಾರಣ ಎಂದು ನಿಶಾ ಅವರ ತಾಯಿ ಹೇಳಿಕೆ ನೀಡಿದ್ದಾರೆ.