ಬೆಂಗಳೂರು: ಆರ್‌ಸಿಬಿಯ ಅಗ್ರ ಕ್ರಮಾಂಕದ ಬ್ಯಾಟರ್ಸ್ ಶೀಘ್ರವೇ ಸಿಡಿದು ನಿಲ್ಲಲಿದ್ದಾರೆ ಎಂದು ಕೋಚ್ ಆ್ಯಂಡಿ ಫ್ಲವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 2 ಅರ್ಧ ಶತಕಗಳಿಂದ ಮಿಂಚಿದ್ದನ್ನು ಹೊರತುಪಡಿಸಿದರೆ ಉಳಿದವರಿಂದ ಛಾತಿಗೆ ತಕ್ಕ ಪ್ರದರ್ಶನ ಕಂಡು ಬಂದಿಲ್ಲ. ಡು ಪ್ಲೆಸಿಸ್, ಮ್ಯಾಕ್ಸ್‌ವೆಲ್, ಗ್ರೀನ್, ಪಾಟಿದಾರ್ ಈ ಸಾಲಿನಲ್ಲಿದ್ದಾರೆ. ದಿನೇಶ್ ಕಾರ್ತಿಕ್, ಅನುಜ್ ರಾವತ್ ಒಂದೆರಡು ಇನ್ನಿಂಗ್ಸ್ ಗಳಲ್ಲಿ ಪರಾÌಗಿಲ್ಲ ಎಂಬಂಥ ಸಾಧನೆಗೈದಿದ್ದಾರೆ.
“ನಮ್ಮ ಟಾಪ್-5 ಬ್ಯಾಟರ್ ಇನ್ನಷ್ಟೇ ಸಿಡಿದು ನಿಲ್ಲಬೇಕಿದೆ. ಒಮ್ಮೆ ಇವರು ಬಿರುಸಿನ ಆಟಕ್ಕಿಳಿದರೆ ನಾವು ದೊಡ್ಡ ಮೊತ್ತ ದಾಖಲಿಸುತ್ತ ಹೋಗುವುದರಲ್ಲಿ ಅನುಮಾನವಿಲ್ಲ. ಇವರು ಶೀಘ್ರವೇ ಬಿರುಸಿನ ಆಟಕ್ಕೆ ಮುಂದಾಗುವರೆಂಬ ವಿಶ್ವಾಸವಿದೆ. ಲಕ್ನೋ ಎದುರಿನ ತವರಿನ ಪಂದ್ಯ ಇದಕ್ಕೊಂದು ವೇದಿಕೆ ಆಗಬೇಕಿದೆ’ ಎಂಬುದಾಗಿ ಆ್ಯಂಡಿ ಫ್ಲವರ್ ಹೇಳಿದರು.
“ಗಾತ್ರದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ ಬೌಂಡರಿ ರೇಖೆ ಬಹಳ ಚಿಕ್ಕದು. ಕೆಕೆಆರ್ ವಿರುದ್ಧ ನಾವು 184 ರನ್ ಗಳಿಸಿದರೂ ಇದನ್ನು 17 ಓವರ್‌ಗಳಲ್ಲೇ ಹಿಂದಿಕ್ಕಲಾಯಿತು. ಹೀಗಾಗಿ ಇದಕ್ಕೂ ಹೆಚ್ಚಿನ ಮೊತ್ತ ಪೇರಿಸಬೇಕಾದ ಅಗತ್ಯವಿದೆ’ ಎಂದರು.
ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಆರ್‌ಸಿಬಿ ಪಾಲಿಗೆ ಅದೃಷ್ಟದ ತಾಣವೇನೂ ಅಲ್ಲ. ಇಲ್ಲಿ ಆಡಿದ 84 ಪಂದ್ಯಗಳಲ್ಲಿ ಬೆಂಗಳೂರು ತಂಡ ಗೆದ್ದದ್ದು 40ರಲ್ಲಿ ಮಾತ್ರ. ಉಳಿದಂತೆ 41 ಪಂದ್ಯಗಳಲ್ಲಿ ಸೋತಿದೆ, 3 ಪಂದ್ಯಗಳು ರದ್ದುಗೊಂಡಿವೆ.