ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ ಬಿಸಿಸಿಐನಲ್ಲಿ ಮತ್ತೂಂದು ಸುತ್ತಿನ ಒಳಜಗಳ ಆರಂಭವಾಗಿದೆ. ಭಾರತ ಪ್ರವಾಸಕ್ಕೆ ಆಗಮಿಸಲಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಒಂದು ಹಗಲು-ರಾತ್ರಿ ಟೆಸ್ಟ್ ಆಡಿಸಲು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿರ್ಧರಿಸಿದ್ದಾರೆ. ತಮ್ಮ ಗಮನಕ್ಕೂ ತಾರದೇ ಕೆಲವೇ ಕೆಲವರು ಕುಳಿತು ಇಂಥ ನಿರ್ಧಾರ ಮಾಡಿದ್ದಾರೆಂದು ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿ ವಿನೋದ್ ರಾಯ್ ಹರಿಹಾಯ್ದಿದ್ದಾರೆನ್ನಲಾಗಿದೆ. ಜತೆಗೆ ತಾತ್ಕಾಲಿಕವಾಗಿ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡಿಸುವುದನ್ನು ತಡೆ ಹಿಡಿದಿದ್ದಾರೆಂದು ಹೇಳಲಾಗಿದೆ.
“ನನಗೆ ಕ್ರಿಕೆಟ್ ಗೊತ್ತಿಲ್ಲ ಅನ್ನುವುದು ಸರಿ. ನಿಮಗೆ ನನಗಿಂತ ಹೆಚ್ಚಿನ ಕ್ರಿಕೆಟ್ ಜ್ಞಾನವಿದೆ ಎನ್ನುವುದೂ ಸರಿ. ಆದರೆ ಡಯಾನಾ ಎಡುಲ್ಜಿ ಅವರಿಗೆ ನಿಮ್ಮೆಲ್ಲರಿಗಿಂತ ಹೆಚ್ಚಿನ ಕ್ರಿಕೆಟ್ ಜ್ಞಾನವಿದೆ. ಆದರೂ ನಮ್ಮೊಂದಿಗೆ ಚರ್ಚಿಸದೆ ನೀವು ಕೆಲವೇ ವ್ಯಕ್ತಿ ಗಳು ಕುಳಿತು ಇಂಥ ಮಹತ್ವದ ನಿರ್ಧಾರ ತೆಗೆದುಕೊಂಡಿರುವುದು ಎಷ್ಟು ಸರಿ?’ ಎಂದು ವಿನೋದ್ ರಾಯ್ ಆಕ್ಷೇಪಿಸಿದ್ದಾರೆ ಎಂದು ವರದಿಯಾಗಿದೆ.
ಅತ್ಯಂತ ಮಹತ್ವದ ನಿರ್ಧಾರವನ್ನು ಕೆಲವೇ ಕೆಲವರೊಂದಿಗೆ ಚರ್ಚಿಸಿ ನಿರ್ಧರಿಸಿರುವ ಕುರಿತು ವಿನೋದ್ ಬೇಸರಿಸಿದ್ದಾರೆ. ಅಮಿತಾಭ್ ಚೌಧರಿ ಕೇವಲ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿಶಾಸ್ತ್ರಿ, ಸಿಇಒ ರಾಹುಲ್ ಜೊಹ್ರಿ ಅವರೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದಾರೆ. ಇಂಥ ಮಹತ್ವದ ನಿರ್ಧಾರಕ್ಕೂ ಮುನ್ನ ಆಟಗಾರರ ದೇಹಸ್ಥಿತಿ ಹಗಲು-ರಾತ್ರಿ ಟೆಸ್ಟ್‌ಗೆ ಹೊಂದಿಕೊಳ್ಳುತ್ತದೆಯೇ ಎನ್ನು ವುದು ಗಮನಿಸಬೇಕು ಎನ್ನುವುದು ವಿನೋದ್ ಅಭಿಪ್ರಾಯ.
ಪ್ರೇಕ್ಷಕರನ್ನು ಸೆಳೆಯಲು…
ಮತ್ತೂಂದು ಕಡೆ ಈ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಮಿತಾಭ್ ಚೌಧರಿ, ಟೆಸ್ಟ್ ಕ್ರಿಕೆಟ್‌ಗೆ ಕುಸಿದಿರುವ ಪ್ರೇಕ್ಷಕರ ಆಸಕ್ತಿಯ ಬಗ್ಗೆ ಉಲ್ಲೇಖೀಸಿ ದ್ದಾರೆ. ಭಾರತ-ಶ್ರೀಲಂಕಾ ಪಂದ್ಯದ ವೇಳೆ ಪ್ರೇಕ್ಷಕರ ಸಂಖ್ಯೆ ಪಾತಾಳಕ್ಕೆ ಕುಸಿದಿತ್ತು. ಇದನ್ನು ಜನಪ್ರಿಯ ಗೊಳಿಸಬೇಕಾದರೆ ಹಗಲು-ರಾತ್ರಿ ಪಂದ್ಯ ಅಗತ್ಯವೆನ್ನುವುದು ಅವರ ಅಭಿಪ್ರಾಯ.
ಈ ಬಗ್ಗೆ ಸಲಹೆ ನೀಡಿರುವ ರವಿಶಾಸ್ತ್ರಿ, ಪಂದ್ಯವನ್ನು ಮಧ್ಯಾಹ್ನ 2ರಿಂದ ಶುರು ಮಾಡಲು ಹೇಳಿದ್ದಾರೆ. ಹೀಗಾದರೆ ರಾತ್ರಿ ಬಹಳ ಹೊತ್ತು ಆಡಬೇಕಾಗುವುದಿಲ್ಲ. ಜತೆಗೆ ದ್ವಿತೀಯ ದರ್ಜೆಯ ತಂಡದ ವಿರುದ್ಧ ಆಡುವಾಗ ದ್ವಿತೀಯ ಹಂತದ ನಗರಗಳನ್ನೇ ಟೆಸ್ಟ್‌ಗೆ ಆಯ್ಕೆ ಮಾಡಲು ಸೂಚಿಸಿದ್ದಾರೆ.