Advertisement

ವಿಮಾನವೇನು ಅಭಿವ್ಯಕ್ತಿ ವೇದಿಕೆಯೇ?: ನಿಯಮಗಳ ಗೌರವಿಸಿ

06:00 AM Sep 05, 2018 | |

ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳುಸಲೈ ಸುಂದರರಾಜನ್‌ ಪ್ರಯಾಣಿಸುತ್ತಿದ್ದ ವಿಮಾನದಲ್ಲಿದ್ದ ಲೂಯಿಸ್‌ ಸೋಫಿಯಾ ಎಂಬ ವಿದ್ಯಾರ್ಥಿನಿಯ ಬಂಧ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಸೋಫಿಯಾ ವಿಮಾನದಲ್ಲಿ ಬಿಜೆಪಿ ಮುಖಂಡರನ್ನು ನೋಡಿದ್ದೇ ಏಕಾಏಕಿ ಕೇಂದ್ರ ಸರ್ಕಾರ/ ಬಿಜೆಪಿಯ ವಿರುದ್ಧ ಘೋಷಣೆ ಕೂಗಿದ್ದಾಳೆ. ನಂತರ ಆಕೆಯ ಬಂಧನವಾಗಿ, ಈಗ  ಜಾಮೀನು ನೀಡಲಾಗಿದೆ. ಆದರೆ ಈ ಪ್ರಕರಣಕ್ಕೆ ವಿಪಕ್ಷಗಳು ಮತ್ತು ಕೆಲವು ಮಾಧ್ಯಮಗಳು ರಾಜಕೀಯ ಸ್ಪರ್ಷ ನೀಡಲು ಪ್ರಯತ್ನಿಸುತ್ತಿರುವುದು ಖಂಡನೀಯ. 

Advertisement

ಪ್ರಯಾಣಿಕರಾದವರು ವಿಮಾನ ಪ್ರಯಾಣದ ವೇಳೆ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ಸೋಫಿಯಾ ಪ್ರಯಾಣದ ನಿಯಮ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಆಕೆಯನ್ನು ಪೊಲೀಸರು ಬಂಧಿಸಿದ್ದು “ಸಾರ್ವಜನಿಕರಿಗೆ ತೊಂದರೆ’, “ಹೆದರಿಕೆ ಹುಟ್ಟಿಸುವ ಪ್ರಯತ್ನ’ ಎಂಬ ಆರೋಪದಲ್ಲಿ. ವಿಮಾನ ಪ್ರಯಾಣದ ವೇಳೆ ಹರಿತವಾದ ಆಯುಧ ಮತ್ತು ನಿಷೇಧಿತ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಮತ್ತು ಪ್ರಯಾಣಿಕರಾದವರು ಹೇಗೆ ವರ್ತಿಸಬೇಕು ಎಂಬ ನಿಯಮಗಳ ಬಗ್ಗೆ ನಾಗರಿಕ ವಿಮಾನ ಯಾನ ಭದ್ರತಾ ವಿಭಾಗದಿಂದ ಹಲವು ಕಟ್ಟುಪಾಡುಗಳನ್ನು ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.

ಇದೆಲ್ಲದರ ಹೊರತಾಗಿ, ಒಬ್ಬರಿಗೆ ಒಂದು ರಾಜಕೀಯ ಪಕ್ಷದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಇದೆ ಎಂದಾದರೆ ಅದನ್ನು ವ್ಯಕ್ತಪಡಿಸಲು ಸಮಯ-ಸಂದರ್ಭ ಎನ್ನುವುದು ಇರುತ್ತದಲ್ಲವೇ? ಅದನ್ನು ವಿಮಾನ ಪ್ರಯಾಣದ ವೇಳೆಯೇ ಯಾಕೆ ತೋರಗೊಡಬೇಕು? ಈ ಸಂಶೋಧನಾ ವಿದ್ಯಾರ್ಥಿನಿಯಾಗಿರಲಿ ಅಥವಾ ಪ್ರಸಕ್ತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕಾಳಜಿ, ಕಳವಳ ಹೊಂದಿರುವವರೇ ಆಗಲಿ, ತಮ್ಮ ವಿಚಾರ ಪ್ರಸ್ತಾಪಕ್ಕೆ ಸೂಕ್ತ ವೇದಿಕೆ ಇರುತ್ತದೆ. ಅಲ್ಲಿ ಅದನ್ನು ಪ್ರಸ್ತಾಪಿಸಿದರೆ ಚೆನ್ನಾಗಿರುತ್ತದೆ. ಅದನ್ನು ಬಿಟ್ಟು  ಇತರೆ ಪ್ರಯಾಣಿಕರಿಗೆ ತೊಂದರೆಯಾಗುವಂತೆ (ಪ್ರಯಾಣಿಕರಲ್ಲಿ ಪುಟ್ಟ ಮಕ್ಕಳು, ವೃದ್ಧರೂ ಇರುತ್ತಾರೆನ್ನುವುದು ಗಮನದಲ್ಲಿರಬೇಕು), ಅಲ್ಲದೆ ಆ ರಾಜಕಾರಣಿಗೂ ಮುಜುಗರ ಆಗುವಂತೆ ವರ್ತಿಸಿದ್ದು ಸರಿಯಲ್ಲ. 

ಎಲ್ಲದಕ್ಕಿಂತ ಹೆಚ್ಚಾಗಿ “ತಮಿಳುನಾಡು ಬಿಜೆಪಿ ಅಧ್ಯಕ್ಷರ ವಿರುದ್ಧ ಮಾತನಾಡಿದ್ದೇನೆ. ಹೀಗಾಗಿ ನನ್ನನ್ನು ವಿಮಾನದಿಂದ ಹೊರಹಾಕಲಾಗಿದೆ’ ಎಂಬ ಧಾಟಿಯಲ್ಲಿ ಈ ವಿದ್ಯಾರ್ಥಿನಿ ಹೇಳಿರುವುದು ಪ್ರಶ್ನಾರ್ಹವಾಗಿದೆ. ಅತ್ತ ತಮಿಳುಸಲೈ ಅವರು ತಾವು ಬ್ಯಾಗ್‌ ತೆಗೆದುಕೊಳ್ಳಲು ಹೋಗುವಾಗ ಈ ವಿದ್ಯಾರ್ಥಿನಿ ಬಿಜೆಪಿ ವಿರುದ್ಧದ ಘೋಷಣೆಗಳನ್ನು ಕೂಗಲು ಆರಂಭಿಸಿದರು ಎಂದು ಹೇಳಿದ್ದಾರೆ. 

ಈ ಪ್ರಕರಣ ಕಾವು ಪಡೆಯುತ್ತಿದ್ದಂತೆಯೇ ಒಂದು ವಲಯದಿಂದ “ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ’ ಎನ್ನುವ ವಾದ ಎದುರಾಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ, ಅದಕ್ಕೆ ಮಿತಿಗಳಿವೆ ಎನ್ನುವುದನ್ನು ಗಮನಿಸಬೇಕು. ಅದರಲ್ಲೂ ವಿಮಾನ ಪ್ರಯಾಣದ ವೇಳೆ ಇಂಥ ವರ್ತನೆಗಳು ಪ್ರಶ್ನಾರ್ಹ. 9/11 ಘಟನೆ ಬಳಿಕ ಅಮೆರಿಕ ಸೇರಿದಂತೆ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿಯೂ ವಾಯುಯಾನ ಸಂಬಂಧಿ ತಪಾಸಣೆ, ಭದ್ರತಾ ಕ್ರಮಗಳು ಮತ್ತಷ್ಟು ಬಿಗಿಯಾಗಿವೆ. ಎಲ್ಲರೂ ಇಂಥ ನಿಯಮಗಳಿಗೆ ತಲೆಬಾಗಲೇಬೇಕು. 

Advertisement

ತಮ್ಮ ನಿಲುವಿಗೆ, ಸಿದ್ಧಾಂತಕ್ಕೆ ವಿರುದ್ಧವಾಗಿರುವವರು ಇದ್ದಾರೆ ಎಂದ ಮಾತ್ರಕ್ಕೆ ಅವರ ವಿರುದ್ಧ ಘೋಷಣೆ ಕೂಗುವುದು, ಅದೂ ಸಮಯ-ಸಂದರ್ಭ-ಸ್ಥಳ ನೋಡದೆ..ಎಷ್ಟು ಸರಿ? ಇದು ಅಪರಾಧವೇ ಹೌದು. ಕೆನಡಾದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಲೂಯಿಸ್‌ ಸೋಫಿಯಾರಿಗೆ ವಿಮಾನಯಾನದ ನಿಯಮಗಳು ತಿಳಿದಿದ್ದರೆ ಅವರು ಬಂಧನಕ್ಕೆ ಒಳಗಾಗುವಂತೆ ವರ್ತನೆ ಮಾಡುತ್ತಿರಲಿಲ್ಲ. ಅವರ ವಿಚಾರಧಾರೆಗಳೇನೇ ಇರಲಿ ವಿಮಾನ ಪ್ರಯಾಣದಲ್ಲಿ ಅದನ್ನು ತೋರಬಾರದಿತ್ತು. 

ಆದರೆ ಡಿಎಂಕೆ ಮತ್ತು ತಮಿಳುನಾಡಿನ ಕಾಂಗ್ರೆಸ್‌ ನಾಯಕರು ವಿದ್ಯಾರ್ಥಿನಿ ಬಂಧನವನ್ನು ಪ್ರಶ್ನಿಸಿದ್ದಾರೆ. ಇಲ್ಲಿ ರಾಜಕೀಯ ಬೇಡ. ಇದು ಪ್ರಯಾಣಿಕರ ಸುರಕ್ಷೆಯ ಪ್ರಶ್ನೆಗೆ ಸಂಬಂಧಿಸಿದ ವಿಚಾರ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ನಿಯಮಗಳಿಂದ ವಿನಾಯಿತಿ ಬಯಸುವುದು ಅಹಂಕಾರವಾದೀತು. ವಿಮಾನ ಯಾನ ಕ್ಷೇತ್ರಕ್ಕೆ ಯಾವ ರೀತಿಯ ಬೆದರಿಕೆ, ಸಮಸ್ಯೆಗಳು ಎದುರಾಗುತ್ತಿವೆ ಎನ್ನುವುದು ಈಗ ಸರ್ವ ವಿದಿತ. ಹೀಗಾಗಿ, ಆ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಷ್ಟೇ ಮಾತು-ವರ್ತನೆ ಇದ್ದರೆ ಎಲ್ಲರಿಗೂ ಚೆನ್ನ. 

Advertisement

Udayavani is now on Telegram. Click here to join our channel and stay updated with the latest news.

Next