Advertisement

ಕೃಷಿ ಬದುಕು ಮೇಳೈಸಿದ ಸಹಕಾರ ಜಾಥಾ

09:44 AM Nov 16, 2017 | Team Udayavani |

ಕೊಡಿಯಾಲ್‌ಬೈಲ್‌: ಗ್ರಾಮ್ಯ ಕೃಷಿ ಬದುಕು, ಹೊಲಗದ್ದೆಗಳ ಚಿತ್ರಣ, ಸಾಂಪ್ರದಾಯಿಕ- ಪಾರಂಪರಿಕ ಕುಲಕಸುಬು, ಬುಟ್ಟಿ ಹೆಣೆಯುವುದರ ಪ್ರದರ್ಶನ, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಪರಿಕಲ್ಪನೆ…

Advertisement

 ಇವೆಲ್ಲ ಕಂಡುಬಂದದ್ದು ನೆಹರೂ ಮೈದಾನದಲ್ಲಿ ಬುಧವಾರ ಜರಗಿದ 64ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆಗೂ ಮುನ್ನ ಜರಗಿದ ಸಮುದಾಯದತ್ತ ಸಹಕಾರ ಜಾಥಾದ ಸ್ತಬ್ಧಚಿತ್ರಗಳ ರೂಪದಲ್ಲಿ. ಕೊಡಿಯಾಲ್‌ಬೈಲ್‌ನ ಎಸ್‌ಸಿಡಿಸಿಸಿ ಬ್ಯಾಂಕ್‌ ಆವರಣದಿಂದ ನೆಹರೂ ಮೈದಾನದವರೆಗೆ ಜಾಥಾ ನಡೆದಿದ್ದು, ಜಿಲ್ಲೆಯ ವಿವಿಧ ಸಹಕಾರ ಸಂಘಗಳು ಜಾಥಾದಲ್ಲಿ ಪಾಲ್ಗೊಂಡವು.

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್‌ ಅವರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕಿನ ವಿವಿಧ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿತ್ತು. ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ ನಂದಿನಿ ಉತ್ಪನ್ನಗಳ ಬಗ್ಗೆ ಪ್ರಾತ್ಯಕ್ಷಿಕೆ, ದ.ಕ. ಮತ್ತು ಉಡುಪಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಡಕೆ, ಭತ್ತ ಕೃಷಿ ಸಾರುವ ಮತ್ತು ಹೊಲಗದ್ದೆಗಳಲ್ಲಿ ಉಳುಮೆ ಮಾಡುವ ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು. ದ.ಕ., ಉಡುಪಿ ಸಹಕಾರಿ ಮೀನು ಮಾರಾಟ ಫೆಡರೇಶನ್‌ನವರ ಸಾಂಪ್ರದಾಯಿಕ ಮೀನುಗಾರಿಕೆ ಚಿತ್ರಣ ನೀಡುವ ದೋಣಿ ಮತ್ತು ಬಲೆ ಬೀಸಿ ಮೀನು ಹಿಡಿಯುವ ಸ್ತಬ್ಧಚಿತ್ರವೂ ಮೆರವಣಿಗೆಗೆ ಕಳೆಯೇರಿಸಿತ್ತು.

ಆಕರ್ಷಕ ಗೊಂಬೆ ಕುಣಿತ ಸುಮಾರು ನಾಲ್ಕಕ್ಕೂ ಹೆಚ್ಚು ತಂಡಗಳಿಂದ ಆಕರ್ಷಕ ಶೈಲಿಯ ಚೆಂಡೆವಾದನ ಗಮನ ಸೆಳೆಯಿತು. ಕಲ್ಲಡ್ಕ ಗೊಂಬೆಗಳ ಪ್ರದರ್ಶನವೂ ಕಳೆಗಟ್ಟಿತ್ತು. ಜಾಥಾದಲ್ಲಿ ಸುಮಾರು 1,000ಕ್ಕೂ ಹೆಚ್ಚು ಮಂದಿ ನವೋದಯ ಸಂಘದ ಸದಸ್ಯೆಯರು ಮತ್ತಿತರರು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next