ಕಲಬುರಗಿ: ದೇಶ ಕಟ್ಟುವ ಮತ್ತು ಸಾಮಾಜಿಕ ಸೇವೆ ಮಾಡುವಂತಹ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳ ಬಗ್ಗೆ ಸರಕಾರದ ತಾರತಮ್ಯ ನೀತಿ ಸರಿಯಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ|ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಖೂಬಾ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಸರ್.ಎಂ.ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ನಿಯಮಿತದ 25ನೇ ವರ್ಷದ ವಾರ್ಷಿಕೋತ್ಸವ ಮತ್ತು ಬೆಳ್ಳಿ ಹಬ್ಬದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರಗಳ ಬ್ಯಾಂಕ್‌ಗಳಿಗೆ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡುವ ಉತ್ತೇಜನವನ್ನು ಸರಕಾರ ನೀಡುತ್ತಿಲ್ಲ. ಆದರೂ, ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ತಮ್ಮ ಸ್ವಂತ ಶಕ್ತಿಯಿಂದ ಬೆಳೆದು ಹಲವಾರು ಕ್ಷೇತ್ರಗಳ ಆರ್ಥಿಕ ವಿಕಾಸಕ್ಕೆ ತಮ್ಮದೇ ಕೊಡುಗೆ ನೀಡಿವೆ ಎಂದರು.
ಮೊದಲ ಪ್ರಧಾನಿ ನೆಹರು ಸೇರಿದಂತೆ ಇಂದಿರಾಜಿ ಅವರೆಲ್ಲರೂ ಬ್ಯಾಂಕ್ ಸಾರ್ವತ್ರಿಕರಣ ಮಾಡಿದರು. ಸಹಕಾರ ಅಲ್ಲದೇ, ಕೋ-ಆಪರೇಟಿವ್ ವಲಯದ ಬ್ಯಾಂಕುಗಳಿಗೆ ಉತ್ತೇಜನ ನೀಡಿದ್ದಾರೆ. ಆದರೆ, ಈಚೆಗಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿನ ಶ್ರೀಮಂತರ ಸಾಲ ಮನ್ನಾ ಮಾಡಲಾಗುತ್ತಿದೆ. ಆದರೆ, ಅದರಲ್ಲಿ ಬಡವರ, ರೈತರ ಠೇವಣಿ, ಉಳಿತಾಯದ ಹಣವಿರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾ ಮಂಡಳ ಅಧ್ಯಕ್ಷ , ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, ಕಳೆದ 25 ವರ್ಷಗಳಿಂದ ಸರ್.ಎಂ. ವಿಶ್ವೇಶ್ವರಯ್ಯ ಸಹಕಾರ ಬ್ಯಾಂಕ್ ನಿಯಮಿತದ ಅಧ್ಯಕ್ಷರಾಗಿ ಶರಣಬಸಪ್ಪ ದರ್ಶನಾಪುರ ಮಾಡಿರುವ ಸಾಧನೆ, ಬ್ಯಾಂಕ್ ಮಾಡಿರುವ ಪ್ರಗತಿ ಎರಡೂ ಶ್ಲಾಘನೀಯ. ಆದರೆ, ಈ ಹಂತದಲ್ಲಿ ಸರಕಾರಗಳು ತೋರುವ ವಿರೋಧಾಭಾಸ ನಡೆಯಿಂದಾಗಿ ಸಹಕಾರ ಕ್ಷೇತ್ರದ ಪ್ರಗತಿ ಕುಂಟುತ್ತ ಸಾಗಿದೆ. 1904ರಲ್ಲಿ ಸಹಕಾರಿ ಕಲ್ಪನೆ ಕೊಟ್ಟವರು ಕನ್ನಡಿಗರಾದ ಸಿದ್ಧನಗೌಡ ಎಸ್ .ಪಾಟೀಲ. ಈಗ ಇದು ಜಗತ್ತಿನಲ್ಲಿ ಖ್ಯಾತಿ ಪಡೆದಿದೆ. ಪ್ರಮುಖವಾಗಿ ಕೃಷಿ ಕ್ಷೇತ್ರವನ್ನೇ ದತ್ತು ತೆಗೆದುಕೊಂಡಂತೆ ಈ ಬ್ಯಾಂಕ್‌ಗಳು ಕೆಲಸ ಮಾಡುತ್ತಿವೆ. ಆದರೆ, ಸರಕಾರದ ಉದಾಸೀನತೆಯಿಂದಾಗಿ ದಾಪುಗಾಲಿಟ್ಟು ಬೆಳೆಯಲಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಶೇ.22ರಷ್ಟು ಆದಾಯ ತೆರಿಗೆ ಇದ್ದರೆ, ಸಹಕಾರಿಗಳಿಗೆ ಶೇ.30ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದು ತಾರತಮ್ಯ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದ ಅವರು, ಸೇವೆಯೇ ಗುರಿ ಎಂದು ಆರ್‌ಬಿಐನ ಎಲ್ಲ ನಿಯಮಾವಳಿಗಳ ಮಧ್ಯೆಯೂ ನಾವು ಗೆಲ್ಲುತ್ತಲೇ ಹೊರಟಿದ್ದೇವೆ. ಆದರೂ, ಎಲ್ಲ ವಲಯದಲ್ಲಿ ನಮ್ಮನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಮತ್ತು ಶಾಸಕ ಶರಣಬಸಪ್ಪ ದರ್ಶನಾಪುರ, ಕಳೆದ 25 ವರ್ಷಗಳಲ್ಲಿ ಹಲವಾರು ಏಳುಬೀಳುಗಳ ಮಧ್ಯೆ ನಾವಿಂದು 150 ಕೋಟಿ ರೂ.ವಹಿವಾಟು ನಡೆಸುತ್ತಿದ್ದೇವೆ. 2ಕೋಟಿ ರೂ.ಗೂ ಅಧಿಕ ಲಾಭವನ್ನು ಪ್ರತಿ ವರ್ಷ ಮಾಡುತ್ತೇವೆ. ಆದರೆ, ಕೋವಿಡ್‌ನಿಂದ ನಮಗೆ ತುಸು ಹೊಡೆತ ಬಿದ್ದಿದೆ. ರೈತರಾದಿಯಾಗಿ ಎಲ್ಲರೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ಆದರೆ, ಸರಕಾರದ ಎಡರು, ತೊಡರು ನೀತಿಗಳೇ ಸಹಕಾರಿ ವಲಯವನ್ನು ಹೈರಾಣ ಮಾಡುತ್ತಿವೆ ಎಂದರು.
ಮುಖಂಡರಾದ ಜಿ.ಆರ್.ಮುತ್ತಗಿ, ಎಸ್.ಎನ್ .ಪುಣ್ಯಶೆಟ್ಟಿ, ವಿಜಯಕುಮಾರ ಮೂಲಗೆ, ವೀರಣ್ಣ ಕೌಲಗಿ, ಅಲ್ಲಾಭಕ್ಷ ಪಟೇಲ್, ಸೋಮಶೇಖರ ಗೋನಾಯಕ್, ಶರಣಬಸಪ್ಪ ಕಂಠಿ, ಅಮರೇಶಗೌಡ, ವಿನೋದ ಪಾಟೀಲ, ಎಲ್.ಡಿ.ಚವ್ಹಾಣ, ಹಣಮಂತರೆಡ್ಡಿ, ಸರಸ್ವತಿ ರೆಡ್ಡಿ, ಸ್ಮಿತಾ ಕವಳೆ ಇತರರು ಇದ್ದರು.