Advertisement

ಸಿಎಂ ವಾಸ್ತವ್ಯ: ಉಜಳಂಬದಲ್ಲಿ ಕಾಮಗಾರಿ ಜೋರು

09:54 AM Jun 11, 2019 | Team Udayavani |

ಬಸವಕಲ್ಯಾಣ:ಉಜಳಂಬ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಜು.29ರಂದು ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಲು ನಿರ್ಧರಿಸುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯಿಂದ ಶಾಲಾ ಆವರಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಲಾಗಿದೆ.

Advertisement

ಶಾಲಾ ಆವರಣದಲ್ಲಿ ಶಿಥಿಲಾವಸ್ಥೆ ತಲುಪಿರುವ ಹಾಗೂ ಹಾಳು ಬಿದ್ದಿರುವ ಕೋಣೆಗಳನ್ನು ತೆರವುಗೊಳಿಸುವ ಕಾರ್ಯ ಪಿಆರ್‌ಇ ಇಲಾಖೆಯಿಂದ ನಡೆದಿದ್ದು, ಇದಕ್ಕಾಗಿ ಗುತ್ತಿಗೆದಾರರು ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಪಿಆರ್‌ಇ ವಿಭಾಗದ ಇಲಾಖೆ ಹಾಗೂ ಭೂ ಸೇನಾ ನಿಗಮದಿಂದ ಒಟ್ಟು 8 ನೂತನ ಕೊಠಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕಟ್ಟಡಕ್ಕೆ ಬೇಕಾದ ಕಿಟಕಿ, ಬಾಗಿಲು ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳಲಾಗಿದೆ.

ಗ್ರಾಮ ವಾಸ್ತವ್ಯಕ್ಕೆ ಬರುವ ರಾಜಕೀಯ ನಾಯಕರಿಗಾಗಿ ಗ್ರಾಮ ಪಂಚಾಯಿತಿ ವತಿಯಿಂದ ಶಾಲಾ ಆವರಣದಲ್ಲಿ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಹಾಗೂ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಗ್ರಾಮದಲ್ಲಿ ನಿರ್ಮಾಣಗೊಂಡ ಶೌಚಾಲಕ್ಕೂ ಬಣ್ಣ ಬಳಿಯುವ ಕಾರ್ಯ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಕೆಲವು ವರ್ಷಗಳ ಹಿಂದೆ ರಾಜೀವ ಗಾಂಧಿ ಸೇವಾ ಕೇಂದ್ರ ನಿರ್ಮಿಸಿ ಹಾಗೇ ಬೀಡಲಾಗಿತ್ತು. ಈಗ ಮುಖ್ಯಮಂತ್ರಿಗಳು ಬರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯತ ವತಿಯಿಂದ ಅದಕ್ಕೆ ಸುಣ್ಣಬಣ್ಣ ಬಳಿದು, ಸಿಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡಲಾಗುತ್ತಿದೆ.

Advertisement

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರುವುದರ ಒಳಗೆ ಕೆಲಸಗಳನ್ನು ಮುಗಿಸಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಜಳಂಬ ಗ್ರಾಮಕ್ಕೆ ನಿತ್ಯ ಭೇಟಿ ನೀಡುವುದು ಸಾಮಾನ್ಯವಾಗಿದೆ.

ಗ್ರಾಮದಲ್ಲಿ ಬಹಳ ವರ್ಷಗಳಿಂದ ಕೆಲವು ಸಮಸ್ಯೆಗಳು ಹಾಗೇ ಉಳಿದುಕೊಂಡಿದ್ದವು. ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದಿಂದ ನಮ್ಮ ಗ್ರಾಮದ ಸಮಸ್ಯೆಗಳು ಶಾಶ್ವತವಾಗಿ ಪರಿಹಾರವಾಗುತ್ತವೆ ಎಂಬ ನಂಬಿಕೆ ನಮಗಿದೆ. ಗ್ರಾಮ ವಾಸ್ತವ್ಯದಂದು ನಮ್ಮ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಎದುರು ಇಡಲಾಗುವುದು ಎಂಬುದು ಗ್ರಾಮಸ್ಥರ ಮಾತು.

ಹಲವು ವರ್ಷಗಳಿಂದ ಸೌಲಭ್ಯದಿಂದ ವಂಚಿತವಾಗಿದ್ದ ಗಡಿಭಾಗದ ಗ್ರಾಮ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಿಂದ ಸಮಸ್ಯೆಯಿಂದ ಮುಕ್ತಿ ಪಡೆಯುತ್ತಿರುವುದು ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಪಿಆರ್‌ಇ ಉಪ ವಿಭಾಗದ ಸಭೆ: ಉಜಳಂಬ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿಯನ್ನು ಪಿಆರ್‌ಇ ಉಪ ವಿಭಾಗದ ಅಧಿಕಾರಿ ರಾಜಕುಮಾರ ಸಾಹುಕಾರ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಕಟ್ಟಡಕ್ಕೆ ಬಳಸಲಾಗುತ್ತಿರುವ ಇಟ್ಟಿಗೆ, ಮರಳು ಹಾಗೂ ಕಬ್ಬಿಣದ ಸರಳುಗಳನ್ನು ಪರಿಶೀಲಿಸಿದರು.

ನಂತರ ಗುತ್ತಿಗೆದಾರರ ಜೊತೆಗೆ ಸಭೆ ನಡೆಸಿ, ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಬಾರದು. ನಿಯಮದ ಪ್ರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರುವುದೊರಳಗೆ ಕೆಲಸ ಮಾಡಬೇಕು ಎಂದರು.

ಕಟ್ಟಡ ಕಾಮಗಾರಿಗೆ ಸಂಬಂಧ ಪಟ್ಟ ಗುತ್ತಿಗೆದಾರರು ಮತ್ತು ಸಿಬ್ಬಂದಿ ಬೇರೆಕಡೆ ಗಮನ ಹರಿಸದೆ, ಇತ್ತ ಹೆಚ್ಚು ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. ಪಿಆರ್‌ಐ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next