Advertisement

ಮೇಕೆದಾಟು ಯೋಜನೆ ಬಗ್ಗೆ ಸಿಎಂ ನಿಲುವು ಸ್ಪಷ್ಟಪಡಿಸಬೇಕು: ಸಿದ್ದರಾಮಯ್ಯ ಒತ್ತಾಯ

07:42 PM Aug 13, 2021 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಏನು ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಆಡಳಿತಾರೂಢ ಬಿಜೆಪಿ ಎರಡು ನಾಲಿಗೆಗಳಿಂದ ಮಾತನಾಡುತ್ತಿದೆ. ತಮಿಳುನಾಡಿನ ಬಿಜೆಪಿ ಈ ಯೋಜನೆಯನ್ನು ವಿರೋಧಿಸುತ್ತಿದೆ, ಆ ನಿಲುವನ್ನು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಬೆಂಬಲಿಸುತ್ತಿದ್ದಾರೆ. ಯಾಕೆ ಈ ದಂದ್ವನೀತಿ ಎಂದು ಪ್ರಶ್ನಿಸಿದ್ದಾರೆ.

ಈ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ತಳೆದಿರುವ ಗಟ್ಟಿನಿಲುವಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ. ಆದರೆ ತಮ್ಮ ಸಡಿಲ ನಾಲಿಗೆಯ ಮೂಲಕ ಒಂದಲ್ಲ ಒಂದು ವಿವಾದ ಸೃಷ್ಟಿಸುತ್ತಿರುವ ಸಿ.ಟಿ.ರವಿ ಅವರಂತಹ ಕೂಗುಮಾರಿಗಳ ಬಾಯಿಮುಚ್ಚಿಸದೆ ಹೋದರೆ ಅನಗತ್ಯವಾಗಿ ಇದೊಂದು ಆಂತರಿಕ ವಿವಾದವಾಗಿ ನಾವುನಾವೇ ಕಚ್ಚಾಡುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಗಸ್ಟ್ 15ರ ನಂತರ ರಾಜ್ಯದಲ್ಲಿ ಕಠಿಣ ನಿಯಮಗಳು ಜಾರಿ ಸಾಧ್ಯತೆ : ಸಚಿವ ಅಶೋಕ

ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳೇ ನಮ್ಮ ರಾಷ್ಟ್ರೀಯತೆಯ ವ್ಯಾಖ್ಯಾನ. ಕಾಂಗ್ರೆಸ್‌ ಪಕ್ಷ ಇದನ್ನು ನಂಬಿದೆ. ಈ ಬಗ್ಗೆ ಬಿಜೆಪಿಗೆ ಭಿನ್ನಾಭಿಯ ಹೊಂದಿದ್ದರೆ ಅದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು. ನಾವು ಕೂಡಾ ಭಾರತೀಯರು, ಇದಕ್ಕಾಗಿ ರಾಜ್ಯದ ಹಿತಾಸಕ್ತಿ ಕಡೆಗಣಿಸಲು ಸಾಧ್ಯ ಇಲ್ಲ ಎಂದು ತಿಳಿಸಿದ್ದಾರೆ.

Advertisement

ಕಾವೇರಿ ನ್ಯಾಯಮಂಡಳಿಯ ಐತೀರ್ಪು ಮತ್ತು ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಕಾವೇರಿ ಜಲವಿವಾದ ಇತ್ಯರ್ಥವಾಗಿದೆ. ಪ್ರಕೃತಿಯ ಕೃಪೆಯಿಂದ ಕಳೆದೆರಡು ವರ್ಷ ನದಿನೀರು ಹಂಚಿಕೆಯಲ್ಲಿ ಯಾವುದೇ ವ್ಯತ್ಯಯವಾಗದೆ ತಮಿಳುನಾಡಿಗೆ ಅದರ ಪಾಲಿನ ನೀರು ಹರಿದಹೋಗುತ್ತಿದೆ. ಈ ಸ್ಥಿತಿಯಲ್ಲಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಕ್ಯಾತೆ ತೆಗೆಯುವುದು ಸರಿ ಅಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next