ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ “ಉಪನಗರ ರೈಲು ಯೋಜನೆ ನೀತಿ’ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪನಗರ ರೈಲು ಯೋಜನೆಯಿಂದ ನಿರ್ವಹಣೆಯಲ್ಲಾಗಬಹುದಾದ ನಷ್ಟವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಬೇಕು ಎಂಬ ಧೋರಣೆ ಸರಿ ಅಲ್ಲ. ರೈಲ್ವೆ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಈ ಹೊರೆ ಭರಿಸುವ ನಿಟ್ಟಿನಲ್ಲಿ ನೀತಿ ರೂಪಿಸಬೇಕು ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರದಟ್ಟಣೆಗೆ ಉಪನಗರ ರೈಲಿನಂತಹ ಸಾರ್ವಜನಿಕ ಸಾರಿಗೆಯೊಂದೇ ಪರಿಹಾರ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಉಪನಗರ ರೈಲು ಯೋಜನೆಗೆ ತಗಲುವ ವೆಚ್ಚದಲ್ಲಿ ಅರ್ಧದಷ್ಟು ಹಣ ಭರಿಸಲು ಸಿದ್ಧವಾಗಿದೆ. ಆದರೆ, ಈ ಯೋಜನೆ ನಂತರ ರೈಲು ಸೇವೆಯಲ್ಲಾಗಬಹುದಾದ ನಿರ್ವಹಣಾ ನಷ್ಟವನ್ನು ಸಂಪೂರ್ಣವಾಗಿ ರಾಜ್ಯವೇ ಭರಿಸಬೇಕು ಎಂದು ಹೊಸ ನೀತಿಯಲ್ಲಿ ಸೂಚಿಸಲಾಗಿದೆ.
ಇದರಿಂದ ರಾಜ್ಯಕ್ಕೆ ಸಾಕಷ್ಟು ಹೊರೆಯಾಗಲಿದ್ದು, ಈ ನಷ್ಟವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಭರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನೀತಿಯನ್ನು ಪರಿಷ್ಕರಿಸಬೇಕು ಎಂದು ಶನಿವಾರ ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆಯೇ ರೈಲ್ವೆ ಇಲಾಖೆಯು ಉಪನಗರ ರೈಲು ಯೋಜನೆ ಸಂಬಂಧದ ಕರಡು ನೀತಿ ರೂಪಿಸಿ, ಸಲಹೆಗಳನ್ನು ಆಹ್ವಾನಿಸಿತ್ತು.
ಆಗಲೂ ಈ ನಿರ್ವಹಣಾ ನಷ್ಟವನ್ನು ಕೇಂದ್ರ ಮತ್ತು ರಾಜ್ಯವು ಸಮವಾಗಿ ಭರಿಸಲು ರಾಜ್ಯ ಸರ್ಕಾರ ಸಲಹೆ ಮಾಡಿತ್ತು. ಇದಲ್ಲದೆ ಹಳಿ, ನಿಲ್ದಾಣಗಳು ಸೇರಿದಂತೆ ಈಗಾಗಲೇ ಇರುವ ಮೂಲಸೌಕರ್ಯಗಳನ್ನು ಬಳಸಿಕೊಳ್ಳಬೇಕು. ಕೊರತೆ ಇರುವಲ್ಲಿ ಮಾತ್ರ ಮೂಲಸೌಕರ್ಯಗಳ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ, ಯೋಜನೆಯು ಕಾರ್ಯಸಾಧು ಆಗುವುದಿಲ್ಲ ಎಂದೂ ಹೇಳಿದ್ದೆವು. ಆದರೆ, ನೀತಿ ರೂಪಿಸುವಾಗ ಇದಾವುದನ್ನೂ ಪರಿಗಣಿಸಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ನಿಯಮ ಸಡಿಲಿಸಬೇಕು: ಉಪನಗರ ರೈಲು ಪ್ರಯಾಣ ದರ ನಿಗದಿಯನ್ನು ವಿಶೇಷ ಉದ್ದೇಶ ಯೋಜನೆ ಅಡಿ ನಿರ್ಮಾಣಗೊಳ್ಳುವ ಸಂಸ್ಥೆಗೆ ಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿರುವ ಮುಖ್ಯಮಂತ್ರಿ, ಉಳಿದಂತೆ ಯೋಜನೆಯ ಎಲ್ಲ ಖರ್ಚು-ವೆಚ್ಚಗಳನ್ನು ರೈಲ್ವೆ ಮತ್ತು ರಾಜ್ಯ ಸರ್ಕಾರ ಸಮಾನವಾಗಿ ಭರಿಸಲು ಕ್ರಮ ಕೈಗೊಳ್ಳಬೇಕು. ಈ ಎಲ್ಲ ಹಿನ್ನೆಲೆಯಲ್ಲಿ ಉಪನಗರ ರೈಲು ಯೋಜನಾ ನೀತಿಯಲ್ಲಿನ ನಿರ್ಬಂಧಗಳನ್ನು ಸಡಿಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೊಸ ನೀತಿ ಏನು ಹೇಳುತ್ತದೆ?: ನೀತಿಯಲ್ಲಿ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ಭೂಮಾಲೀಕರಿಗೆ ಪರಿಹಾರ ನೀಡಬೇಕು. ಅಷ್ಟೇ ಅಲ್ಲ, ರೈಲು ಓಡಿಸುವುದರಿಂದ ಆಗುವ ನಷ್ಟವನ್ನೂ ರಾಜ್ಯ ಸರ್ಕಾರವೇ ಭರಿಸಬೇಕು. ರೈಲ್ವೆ ಇಲಾಖೆಯೇ ಸ್ವಹಿತಾಸಕ್ತಿಯಿಂದ ಸಬ್‌ಅರ್ಬನ್ ಯೋಜನೆ ಕೈಗೆತ್ತಿಕೊಂಡರೆ, ಈ ನಿಯಮಗಳು ಅನ್ವಯಿಸುವುದಿಲ್ಲ. ಈಗಿರುವ ರೈಲ್ವೆ ಹಳಿ, ಸಿಗ್ನಲಿಂಗ್ ಮತ್ತಿತರ ಸೌಕರ್ಯಗಳನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆದರೆ ರೈಲ್ವೆ ಮತ್ತು ರಾಜ್ಯ ಸರ್ಕಾರದ ನಡುವೆ ಒಪ್ಪಂದ ಮಾಡಿಕೊಂಡು, ಇದಕ್ಕಾಗಿ ಬಿಎಂಆರ್‌ಸಿ ಮಾದರಿಯಲ್ಲಿ ಒಂದು ಪ್ರತ್ಯೇಕ ಎಸ್‌ಪಿವಿ (ಸ್ಪೇಷಲ್ ಪರ್ಪಸ್ ವೇಹಿಕಲ್) ರೂಪಿಸಿ, ಅದರಡಿ ಯೋಜನೆ ಕೈಗೆತ್ತಿಕೊಂಡರೆ ಹೊಸ ಕರಡು ನೀತಿ ಪ್ರಕಾರ ಹೊರೆ ಆಯಾ ರಾಜ್ಯಗಳ ಮೇಲೆಯೇ ಬೀಳಲಿದೆ ಎಂದು ನೀತಿಯಲ್ಲಿ ಹೇಳಲಾಗಿತ್ತು.