ಬೆಂಗಳೂರು: ಖರ್ಗೆಯವರು ಈ ಹಿಂದೆಯೇ ಮುಖ್ಯಮಂತ್ರಿಯಾಗಬೇಕಿತ್ತು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಯಾಗಿ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ನ ಆಂತರಿಕ ವಿಚಾರವಾಗಿದ್ದು, ಅದಕ್ಕೂ ಕುಮಾರಸ್ವಾಮಿ ಯವರಿಗೂ ಸಂಬಂಧವೇನು ಎಂದು ಸಚಿವ ಎಂ.ಟಿ.ಬಿ.ನಾಗರಾಜ್ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರು ಖರ್ಗೆ ಸಿಎಂ ಆಗಲು ಬಯಸಿದರೆ ಕುರ್ಚಿ ಬಿಟ್ಟು ಕೊಡುತ್ತಾರಾ ಎಂದು ಮಾಧ್ಯಮಗಳು ಪ್ರಶ್ನಿಸಬೇಕು ಎಂದಿದ್ದಾರೆ.
ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯವರು ಖರ್ಗೆಯವರಿಗೆ ಕುರ್ಚಿ ಬಿಟ್ಟು ಕೊಡಲಿ ಎಂದು ಹೇಳುವುದಿಲ್ಲ. ಮುಖ್ಯಮಂತ್ರಿಯಾಗಲು ಅರ್ಹತೆ ಇದೆ ಎನ್ನುವುದಾದರೆ ಆ ಸ್ಥಾನ ಬಯಸುವರ ಹಲವರಿಗೆ ಅರ್ಹತೆ ಇದೆ. ನಾವೆಲ್ಲ ಶಾಸಕರು ಬಯಸಿದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬಹುದು ಎಂದು ತಿಳಿಸಿದರು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್, ಮತ್ತೂಂದು ಅವಕಾಶದ ನಿರೀಕ್ಷೆಯಲ್ಲಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಅರ್ಹರಿದ್ದಾರೆ. ಕೆಲವರು ಇಂತಹವರೇ ಮುಖ್ಯಮಂತ್ರಿಯಾಗಬೇಕು ಎಂದು ವೈಯಕ್ತಿಕ ಅಭಿಪ್ರಾಯ ಹೇಳುತ್ತಾರೆ. ಆದರೆ ಪಕ್ಷದ ಹೈಕಮಾಂಡ್ ಇದೆ. ಎಲ್ಲರೂ ಮುಖ್ಯಮಂತ್ರಿಯಾಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಹೈಕಮಾಂಡ್ ಹಾಗೂ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ತೀರ್ಮಾನ ಕೈಗೊಂಡರೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.