ಮಸ್ಕಿ: ಉಪಚುನಾವಣೆ ಘೋಷಣೆಗೂ ಮುನ್ನವೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಸ್ಕಿಗೆ ಆಗಮಿಸುವುದು ಖಚಿತವಾಗಿದೆ. ಸಿಎಂ ಪ್ರವಾಸ ಕುರಿತು ತಾತ್ಕಾಲಿಕ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ಮಸ್ಕಿ ಮಂಡಲ ಬಿಜೆಪಿಯಲ್ಲಿ ಚೈತನ್ಯ ಮೂಡಿದೆ. ಸಿಎಂ ಕಾರ್ಯಕ್ರಮಕ್ಕೆ ಜನಸೇರಿಸಲು ಈಗಿನಿಂದಲೇ ಕಸರತ್ತು ನಡೆಸಲಾಗುತ್ತಿದೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪರ ಪ್ರಚಾರ ಮತ್ತು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಮಾ.20ರಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮಸ್ಕಿ ಪಟ್ಟಣಕ್ಕೆ ಆಗಮಿಸುವುದು ಖಚಿತವಾಗಿದೆ.
ಅಂದು ಪ್ರತ್ಯೇಕ ಎರಡು ಕಾರ್ಯಕ್ರಮ ಆಯೋಜನೆಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ ವತಿಯಿಂದ ಒಂದು ಸರಕಾರಿ ಕಾರ್ಯಕ್ರಮ. ಪಕ್ಷ ಸೇರ್ಪಡೆ, ಬೃಹತ್ ಶಕ್ತಿ ಪ್ರದರ್ಶನಕ್ಕಾಗಿ ಬಿಜೆಪಿ ವತಿಯಿಂದ ಮತ್ತೂಂದು ಖಾಸಗಿ ಕಾರ್ಯಕ್ರಮ ಆಯೋಜನೆಗೆ ಪ್ರತ್ಯೇಕ ಸ್ಥಳಗಳಲ್ಲಿ ಸಿದ್ಧತೆ ನಡೆದಿದೆ.
ಏಲ್ಲೆಲ್ಲಿ?: ಮಸ್ಕಿ ಪಟ್ಟಣದ ಹೃದಯ ಭಾಗ ಶ್ರೀಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸರಕಾರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮಾ.20ರಂದು ಮಧ್ಯಾಹ್ನ ಸರಕಾರಿ ವಿವಿಧ ಕಾರ್ಯಕ್ರಮಗಳಿಗೆ ಶಂಕುಸ್ಥಾಪನೆ, ಲೋಕಾರ್ಪಣೆ ಬಳಿಕ ಇಲ್ಲಿ ಬಹಿರಂಗ ಕಾರ್ಯಕ್ರಮ ನಡೆಯಲಿದೆ. ಅಂದಾಜು 1 ಸಾವಿರ ಜನರಿಗೆ ಇಲ್ಲಿ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬಳಿಕ ಸಂಜೆ 6ಗಂಟೆಗೆ ಪೊಲೀಸ್ ಠಾಣೆ ಪಕ್ಕದ ಬಯಲು ಪ್ರದೇಶದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಯಲು ವೇದಿಕೆ ನಿರ್ಮಾಣ ಮಾಡಿ ಇಲ್ಲಿಯೇ ಬಿಜೆಪಿಗೆ ಸೇರ್ಪಡೆ, ಚುನಾವಣೆ ಪ್ರಚಾರ ಭಾಷಣ ನಡೆಯಲಿದೆ. ಈಗಿನಿಂದಲೇ ಸಂಚಾರ: ಮಾ.20ರಂದು ಸಿಎಂ ಕಾರ್ಯಕ್ರಮ ನಿಗದಿ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಜನರನ್ನು ಸೇರಿಸಲು ಈಗಿನಿಂದಲೇ ಪ್ರಯತ್ನ ನಡೆದಿವೆ. ಸ್ವತಃ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮತ್ತು ಅವರ ಪುತ್ರರು ಹಾಗೂ ಸಂಬಂ ಧಿಗಳೇ ಅಖಾಡಕ್ಕೆ ಇಳಿದಿದ್ದಾರೆ.
ಜಿಲ್ಲಾ ಪಂಚಾಯಿತಿವಾರು ಉಸ್ತುವಾರಿ ಹೊತ್ತು ಈಗಿನಿಂದಲೇ ಪ್ರಚಾರಕ್ಕೆ ಇಳಿದಿದ್ದಾರೆ. ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ನೇತೃತ್ವದಲ್ಲಿ ತಿಡಿಗೋಳ, ತುರುವಿಹಾಳ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದರೆ, ಅವರ ಪುತ್ರ ಪ್ರಸನ್ನ ಪಾಟೀಲ್ ಸಂತೆಕಲ್ಲೂರು ಜಿಪಂ ಕ್ಷೇತ್ರ, ಮತ್ತೂಬ್ಬ ಪುತ್ರ ಚೇತನ ಪಾಟೀಲ್ ತೋರಣದಿನ್ನಿ ಭಾಗ ಹಾಗೂ ಅವರ ಅಳಿಯ ರವಿಗೌಡ ಪಾಟೀಲ್ ನೇತೃತ್ವದಲ್ಲಿ ಬಳಗಾನೂರು ಜಿಪಂ ವ್ಯಾಪ್ತಿಯಲ್ಲಿ ಸಂಚರಿಸಿ ಪ್ರಚಾರ ನಡೆಸುತ್ತಿದ್ದಾರೆ. ಆಯಾ ಭಾಗದ ಬಿಜೆಪಿ ಮುಖಂಡರು ಇವರಿಗೆ ಸಾಥ್ ನೀಡಿದ್ದು, ಮಾ.20ರಂದು ನಡೆಯುವ ಸಿಎಂ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಲಾಗುತ್ತಿದೆ.