ಬೆಂಗಳೂರು: ಮುಖ್ಯಮಂತ್ರಿ ಕಚೇರಿಯಲ್ಲಿ ಸಿಬಂದಿಯಾಗಿದ್ದ ಉಮೇಶ್ ಮೇಲಿನ ಐಟಿ ದಾಳಿ ಹಾಗೂ ನಡೆದಿರುವ ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿಗಳು ಉತ್ತರದಾಯಿಗಳು ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.
ನಾಮಕಾವಸ್ಥೆಗೆ ಮುಖ್ಯಮಂತ್ರಿ ಕಚೇರಿ ಸಿಬಂದಿಯಾಗಿ, ವಾಸ್ತವದಲ್ಲಿ ಮಾಜಿ ಮುಖ್ಯಮಂತ್ರಿಗೆ ಸಹಾಯಕನಾಗಿದ್ದುದು ಬಸವರಾಜ ಬೊಮ್ಮಾಯಿಗೆ ತಿಳಿದಿರಲಿಲ್ಲವೇ ಅಥವಾ ತಿಳಿದಿದ್ದರೂ ಸಹಕರಿಸಿದರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ, ಆಪ್ತ ಸಹಾಯಕನ ಭ್ರಷ್ಟಾಚಾರ, ಈಗ ಆಪ್ತರ ಮೇಲಿನ ಐಟಿ ದಾಳಿ ಇವೆಲ್ಲವೂ ಯಾವ ರಹಸ್ಯವನ್ನು ಹೊಂದಿದೆ? ಬಿಜೆಪಿ ಹಾಗೂ ಯಡಿಯೂರಪ್ಪ ಜಟಾಪಟಿಯ ಹೊಸ ಆಯಾಮಕ್ಕೆ ಈ ದಾಳಿ ಮುನ್ನುಡಿಯಾಗಿದ್ದು, ಇದರ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚದಿರುವುದೇಕೆ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ:ವಿಚ್ಛೇದನಕ್ಕೆ “ಅಕ್ರಮ ಸಂಬಂಧ” ಕಾರಣ ಎಂದವರಿಗೆ ಉತ್ತರ ಕೊಟ್ಟ ನಟಿ ಸಮಂತಾ
ರಾಜ್ಯ ಸರಕಾರದಲ್ಲಿ ಬಗೆದಷ್ಟೂ ಭ್ರಷ್ಟಾಚಾರ ಹೊರಬರುತ್ತವೆ ಎಂದು ಆರೋಪಿಸಿರುವ ಕಾಂಗ್ರೆಸ್, ವೈದ್ಯಕೀಯ ಉಪಕರಣ ಖರೀದಿ ಹಗರಣ, ಮೊಟ್ಟೆ ಹಗರಣ, ಸ್ವೆಟರ್ ಹಗರಣ, ನೀರಾವರಿ ಹಗರಣ, ಆಪರೇಷನ್ ಕಮಲ ಹಗರಣ, ವರ್ಗಾವಣೆ ಹಗರಣ, ಗುತ್ತಿಗೆ ಹಗರಣ, ಬೆಡ್ ಬ್ಲಾಕಿಂಗ್ ಹಗರಣ ಮುಂತಾದವುಗಳನ್ನು ಉಲ್ಲೇಖಿಸಿದೆ. “ನಾ ಖಾವುಂಗಾ ನ ಖಾನೆದುಂಗ’ ಎಂದವರು ಇವುಗಳ ತನಿಖೆ ನಡೆಸಬಲ್ಲರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.