ಮಂಡ್ಯ/ ಮೈಸೂರು: ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬದ ದಿನವಾದ ಇಂದು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದರು.
ಕೆಆರ್‌ಎಸ್ ಗೆ ಬಾಗಿನ ಅರ್ಪಣೆ ನಂತರ ಮಾತನಾಡಿದ ಸಿಎಂ ಬಿಎಸ್‌ವೈ, ಇದು ಅತ್ಯಂತ ಸಂತಸ ತಂದ ಘಳಿಗೆ. ಐದನೇ ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಸೌಭಾಗ್ಯ ನನ್ನದಾಯಿತು. ಬೃಂದಾವನ ವಿಶ್ವದರ್ಜೆ ಗೇರಿಸಲು ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರದ ಅನುಮತಿ ಪಡೆದು ಮೇಕೆದಾಟು ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ನೀರಾವರಿಗೆ ನಮ್ಮ ಸರ್ಕಾರ ಪ್ರಥಮ ಆದ್ಯತೆ ನೀಡಲಾಗುವುದು. ರೈತರ ಜಮೀನಿಗೆ ನೀರೊದಗಿಸುವ ಯೋಜನೆ ಆರಂಭಿಸಲಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು, ಕೆರೆಕಟ್ಟೆಗಳು ತುಂಬಿವೆ. ಇದು ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು.
ಮೈಸೂರಿನ ಬೀಚನಹಳ್ಳಿಯಲ್ಲಿ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿದ ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯಾದ್ಯಂತ ಈ ಬಾರಿ ಉತ್ತಮ ಮಳೆ ಆಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಕುಸಿಯುವುದು ತಪ್ಪಿದೆ. ಎಲ್ಲ ಕಡೆ ಬಿತ್ತನೆ ಚೆನ್ನಾಗಿ ಆಗುತ್ತಿದೆ. ಜಲಾಶಯಗಳು ತುಂಬಿರುವುದು ನಮ್ಮ ಸುದೈವ ಎಂದರು.
ಸಿಎಂ ಜೊತೆ ಸಚಿವರಾದ ಕೆ.ಸಿ.ನಾರಾಯಣಗೌಡ, ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಶಾಸಕ ಶ್ರೀಕಂಠಯ್ಯ, ಮಂಡ್ಯ ಜಿಲ್ಲಾಧಿಕಾರಿ ವೆಂಕಟೇಶ್ ಇದ್ದರು.