Advertisement

ಶಾಲೆಗಳ ಆರಂಭದ ಕುರಿತು ಸಿಎಂ ನಿರ್ಧಾರ: ಸಚಿವ ಬಿ.ಸಿ.ನಾಗೇಶ್

02:28 PM Aug 30, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ನಿರ್ಣಯಿಸಬೇಕಾಗಿದೆ ಎಂದರು.

ತಾಂತ್ರಿಕ ಸಲಹಾ ಸಮಿತಿ ಜೊತೆ ಮುಖ್ಯಮಂತ್ರಿಗಳ ಸಭೆಯ ಬಳಿಕ ಶಾಲಾ ತರಗತಿಗಳ ಕುರಿತು ನಿರ್ಧರಿಸಲಿದ್ದೇವೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಶಿಕ್ಷಕರೂ ಶಾಲೆಗಳ ಆರಂಭಕ್ಕೆ ಉತ್ಸುಕರಾಗಿ ಕಾಯುತ್ತಿದ್ದಾರೆ ಎಂದರು. ಯಾಕೆ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪೋಷಕರೂ ಶಾಲೆಗಳಿಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ ಎಂದರು.

ಇದನ್ನೂ ಓದಿ:ಜೆಡಿಎಸ್ ಬಿಟ್ಟು ಹೋಗಿ ಎಂದು ಹೇಳುವಷ್ಟು ದುರಹಂಕಾರವಿಲ್ಲ: ಎಚ್.ಡಿ.ಕುಮಾರಸ್ವಾಮಿ

Advertisement

ಮುಖ್ಯಮಂತ್ರಿಗಳು ಮತ್ತು ಶಾಸಕರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಜ್ಯದಲ್ಲಿ ದೊಡ್ಡ ತರಗತಿಗಳು ಆರಂಭಗೊಂಡಿವೆ. ಮಕ್ಕಳ ಸಹಭಾಗಿತ್ವ ಮತ್ತು ಪೋಷಕರ ಸಹಕಾರ ಪೂರ್ಣವಾಗಿ ಲಭಿಸಿದೆ. ಬಹುತೇಕ ಶೇ 70ರಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ. ಮುಖ್ಯಮಂತ್ರಿಗಳು ಮಕ್ಕಳ ಜೊತೆ ಸಂವಾದ ನಡೆಸಿದಾಗ ಆನ್‍ಲೈನ್ ತರಗತಿಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ ಎಂಬುದು ಗೊತ್ತಾಗಿದೆ. ಅನೇಕ ಮಕ್ಕಳು ಇಡೀ ದಿನ ಶಾಲಾ ತರಗತಿ ನಡೆಸಲು ಮತ್ತು ಕುಡಿಯುವ ನೀರು ಹಾಗೂ ಬುತ್ತಿ ತರಲು ಅವಕಾಶ ಕೊಡುವಂತೆ ಸಿಎಂ ಅವರಲ್ಲಿ ಮನವಿ ಮಾಡಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮೂಲಸೌಕರ್ಯ ಚೆನ್ನಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಾರದು. ಶಾಲೆಗಳ ಆರಂಭದ ಬಳಿಕ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂದು ಸಚಿವರು ಹೇಳಿದರು.

ಜನಸಾಮಾನ್ಯರ ಕುಂದುಕೊರತೆ ಪರಿಹಾರಕ್ಕಾಗಿ ತಿಂಗಳಿಗೆ ಎರಡು ಬಾರಿ ಎಲ್ಲ ಸಚಿವರು ಪಕ್ಷದ ಕಾರ್ಯಾಲಯಕ್ಕೆ ಭೇಟಿ ಕೊಡಬೇಕೆಂಬ ಆಶಯಕ್ಕೆ ಅನುಗುಣವಾಗಿ ಇಲ್ಲಿಗೆ ಬಂದಿದ್ದೇನೆ. ಸಾಕಷ್ಟು ಜನ ಅಹವಾಲಯಗಳ ಜೊತೆ ಶಿಕ್ಷಣ ಕ್ಷೇತ್ರದ ಬಗ್ಗೆ ಒಂದಷ್ಟು ಒಳ್ಳೆಯ ವಿಚಾರಗಳನ್ನೂ ತಿಳಿಸಿದ್ದಾರೆ. ಕಾರ್ಯಕರ್ತರ ಭೇಟಿಗೂ ಇದು ಸದವಕಾಶ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next