ಬೆಂಗಳೂರು : ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳಿಗೆ ಶಾಲು ಹೊದಿಸಿ ಸರ್ಕಾರದ ಪರವಾಗಿ ಸನ್ಮಾನಿಸಿದರು. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರು.
ಇಂದು ರಾಜಭವನದಲ್ಲಿ ವಾಸ್ತವ್ಯ ಮಾಡಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು,ಗುರುವಾರ ಚಾಮರಾಜನಗರ ತಾಲೂಕಿನ ಯಡ್ರಾಪುರ ಗ್ರಾಮದಲ್ಲಿ ನಿರ್ಮಿಸಿರುವ 450 ಹಾಸಿಗೆಗಳ ಬೋಧನಾ ಆಸ್ಪತ್ರೆ ಉದ್ಘಾಟನೆ ಮಾಡಲಿದ್ದಾರೆ.
ಅ.8 ರಂದು ರಾಷ್ಟ್ರಪತಿ ಗಳು ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ನೀಡಲಿದ್ದಾರೆ. ಆ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್ ನಿಲುಗಡೆಗಾಗಿ ಗಾಂಧಿ ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ.
ರಾಷ್ಟ್ರಪತಿಯವರ ಸದ್ಯದ ಪ್ರವಾಸ ವೇಳಾಪಟ್ಟಿಯಂತೆ ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿಯ ಬಳಿಕ ಮೈಸೂರು ವಿಮಾನ ನಿಲ್ದಾಣ ದಿಂದ ಅ. 7ರಂದು ಸಂಜೆ 5.20ಕ್ಕೆ ಹೊರಟು ಮಂಗಳೂರು ವಿಮಾನ ನಿಲ್ದಾಣಕ್ಕೆ 6.10ಕ್ಕೆ ಆಗಮಿಸಿ 6.35ಕ್ಕೆ ನಗರಕ್ಕೆ ಆಗಮಿಸಿ ಖಾಸಗಿ ಹೊಟೇಲ್ ಅಥವಾ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅ. 8ರಂದು ಬೆಳಗ್ಗೆ ಉಪಾಹಾರದ ಬಳಿಕ 10.45ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಶೃಂಗೇರಿ ದೇವಸ್ಥಾನಕ್ಕೆ 11.40ಕ್ಕೆ ಹೋಗಿ ಶ್ರೀದೇವಿಯ ದರ್ಶನ ಪಡೆಯಲಿದ್ದಾರೆ. 3.15ಕ್ಕೆ ಶೃಂಗೇರಿಯಿಂದ ನಿರ್ಗಮಿಸಿ 3.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ, 4.10ಕ್ಕೆ ನಗರಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ಅ. 9ರಂದು ಬೆಳಗಿನ ಉಪಾಹಾರ ಸ್ವೀಕರಿಸಿ 11 ಗಂಟೆಗೆ ಹೊರಟು 11.25ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ನಿರ್ಗಮಿಸಲಿದ್ದಾರೆ.