Advertisement

19ಕ್ಕೆ ದೇವತ್ಕಲ್‌ನಲ್ಲಿ ಸಿಎಂ ಗ್ರಾಮ ವಾಸ್ತವ್ಯ

10:06 AM Mar 03, 2022 | Team Udayavani |

ಯಾದಗಿರಿ: ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ “ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ‘ ಕಾರ್ಯಕ್ರಮದಲ್ಲಿ ಮಾ. 19ರಂದು ಸುರಪುರ ತಾಲೂಕಿನ ದೇವತ್ಕಲ್‌ ಗ್ರಾಮದಲ್ಲಿ ಮುಖ್ಯಮಂತ್ರಿ ಅವರು ಗ್ರಾಮ ವಾಸ್ತವ್ಯ ಹೂಡಲಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ತಮ್ಮ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್‌. ಅಧಿಕಾರಿಗಳಿಗೆ ಸೂಚಿಸಿದರು.

Advertisement

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿಯವರು ದೇವತ್ಕಲ್‌ ಗ್ರಾಮದಲ್ಲಿ ಮಾ.19ರಂದು ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆ ಪೂರ್ವಭಾವಿ ಸಿದ್ಧತೆ ಸಭೆ ನಡೆಸಿ ಅವರು ಮಾತನಾಡಿದರು. ಅಂದು ದೇವತ್ಕಲ್‌ ಗ್ರಾಮದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಕೂಡಲೇ ದೇವತ್ಕಲ್‌ ಗ್ರಾಮದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಬೇಕೆಂದು ಅವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಂದು ದೇವತ್ಕಲ್‌ ಗ್ರಾಮ ವಾಸ್ತವ್ಯದಲ್ಲಿ ವಿವಿಧ ಇಲಾಖೆಗಳು ತಮ್ಮ-ತಮ್ಮ ಯೋಜನೆಗಳ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಳಿಗೆಗಳನ್ನು ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹದ್ದುಬಸ್ತು, ಕಂದಾಯ ಗ್ರಾಮಗಳ ರಚನೆ, ಗ್ರಾಮದಲ್ಲಿ ಎಸ್‌ಸಿ, ಎಸ್‌ಟಿ, ಬಿಸಿಎಂ ವಸತಿ ನಿಲಯಗಳಿದ್ದಲ್ಲಿ ಭೇಟಿ ನೀಡಿ ಸುಸ್ಥಿಯಲ್ಲಿರುವ ಬಗ್ಗೆ ಕ್ರಮ ವಹಿಸುವುದು, ಶಾಲೆ ಹಾಗೂ ಅಂಗನವಾಡಿಗಳಿಗೆ ಭೇಟಿ ನೀಡಿ ಆಹಾರ, ಕಲಿಕಾ ಕ್ರಮ ಇತ್ಯಾದಿ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಉನ್ನತ ಅಧಿಕಾರಿಗಳು ಖುದ್ದಾಗಿ ಸ್ಪಂದಿಸಲು ಹಾಗೂ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರವು ನೀಡಿರುವ ಮಾರ್ಗಸೂಚಿಗಳನ್ನು ಗ್ರಾಮ ವಾಸ್ತವ್ಯದಲ್ಲಿ ಅನುಸರಿಸಲು ಜಿಲ್ಲಾಧಿಕಾರಿ ಸೂಚಿಸಿದರು.

Advertisement

ಸಮಿತಿ ರಚನೆ ಜವಾಬ್ದಾರಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಪಂ ಸಿಇಒ ಅಮರೇಶ ಆರ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯ ಆಯುಕ್ತ ಶಾ ಆಲಂ ಹುಸೇನ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ್‌ ಕವಿತಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್‌., ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ರಾಜು, ಡಿಡಿಪಿಐ ಶಾಂತಗೌಡ ಪಾಟೀಲ್‌, ಡಿಡಿಪಿಯು ಚಂದ್ರಕಾಂತ ಹಿಳ್ಳಿ, ಕಾರ್ಮಿಕ ಇಲಾಖೆ ಉಮಾಶ್ರೀ, ಸುರಪುರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಹಾಗೂ ಇನ್ನಿತರ ತಹಶೀಲ್ದಾರರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next