Advertisement

ಬಿಎಸ್‍ವೈಗೆ ಅನರ್ಹರ ಒತ್ತಡ ತಂತ್ರ

10:43 PM Aug 03, 2019 | Team Udayavani |

ಬೆಂಗಳೂರು: ಅನರ್ಹ ಶಾಸಕರು ನಿಧಾನವಾಗಿ ತಮ್ಮ ಅತಂತ್ರತೆ ಕುರಿತು ಸ್ಪಷ್ಟ ನಿಲುವು ತೋರಲು ಬಿಜೆಪಿಗೆ ಒತ್ತಡ ಹೇರುವ ತಂತ್ರಕ್ಕೆ ಮುಂದಾಗಿದ್ದಾರೆ. ಒಂದೆಡೆ ಕೆಲವು ಅನರ್ಹ ಶಾಸಕರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾದರೆ, ಇನ್ನೊಂದೆಡೆ, ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಬಿಎಸ್‌ವೈ ಆಪ್ತ ಸಹಾಯಕ ಸಂತೋಷ್‌ ಮತ್ತು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದೆ.

Advertisement

ಶನಿವಾರ ಬೆಳಗ್ಗೆ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಹಾಗೂ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಸುಧಾಕರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನಗರದ ಡಾಲರ್ ಕಾಲೋನಿಯ ಮುಖ್ಯಮಂತ್ರಿ ನಿವಾಸದಲ್ಲಿ ಶನಿವಾರ ಬೆಳಗ್ಗೆ ಭೇಟಿ ಮಾಡಿದ ಅನರ್ಹ ಶಾಸಕರು, ಕ್ಷೇತ್ರದ ಅಭಿವೃದ್ಧಿ, ಐಎಂಎ ಪ್ರಕರಣ, ಅನರ್ಹತೆ, ಬಿಜೆಪಿ ಸೇರುವುದು, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ನಂತರ ಮಾತನಾಡಿದ ಶಾಸಕ ಡಾ.ಸುಧಾಕರ್‌, “ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗುವ ಕುರಿತು ಯಾವುದೇ ಮಾಹಿತಿ ಇಲ್ಲ. ಬಿಜೆಪಿ ಸೇರ್ಪಡೆ ಕುರಿತು ಕ್ಷೇತ್ರದ ಜನರ ಜತೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ’ ಎಂದರು.

ಉಪ ಚುನಾವಣೆಯಲ್ಲಿ ಬಂಡಾಯ ಶಾಸಕರನ್ನು ಸೋಲಿಸುವುದಾಗಿ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಯಾರೋ ಬಂದು ಬೊಬ್ಬೆ ಹೊಡೆದರೆ ಜನ ಕೇಳಬೇಕಲ್ಲ. ನಮ್ಮನ್ನು ಸೋಲಿಸುವುದು, ಗೆಲ್ಲಿಸುವುದು ಜನರೇ ಹೊರತು ನಾಯಕರಲ್ಲ. ಲೋಕಸಭಾ ಚುನಾವಣೆಯಲ್ಲಿ ಅತಿರಥ ಮಹಾರಥರೆಲ್ಲ ಪ್ರಚಾರ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್‌ ಒಂದು ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯವಾಗಿದೆ ಎಂದರು.

ರಮೇಶ್‌ ಕುಮಾರ್‌ ಸಂವಿಧಾನಕ್ಕೆ ವಿರುದ್ಧವಾಗಿ ನಮ್ಮನ್ನು ಅನರ್ಹಗೊಳಿಸಿದ್ದಾರೆ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದು ಅಭಿಪ್ರಾಯ ಪಟ್ಟರು. ರೋಷನ್‌ ಬೇಗ್‌ ಅವರು ಯಾವುದೇ ವಿಷಯದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ, ಐಎಂಎ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಮೇಲಿಂದ ಮೇಲೆ ನೋಟಿಸ್‌ ನೀಡಿ ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ, ಆ ಪ್ರಕರಣದಲ್ಲಿ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.

Advertisement

ಜಾರಕಿಹೊಳಿ ನಿವಾಸದಲ್ಲಿ ಚರ್ಚೆ: ಅನರ್ಹಗೊಂಡಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರು ಮುಂದಿನ ಕಾನೂನು ಹೋರಾಟ ಹಾಗೂ ರಾಜಕೀಯ ಭವಿಷ್ಯದ ಕುರಿತು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್‌ ಜೊತೆಗೆ ಸಭೆ ನಡೆಸಿದರು. ಅನರ್ಹಗೊಂಡಿರುವ ಎಂ.ಟಿ.ಬಿ.ನಾಗರಾಜ್‌, ಗೋಪಾಲಯ್ಯ, ನಾರಾಯಣಗೌಡ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌, ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣಯ್ಯ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈಗಾಗಲೇ ಅನರ್ಹರು ಸುಪ್ರೀಂಕೋರ್ಟ್‌ನಲ್ಲಿ ರಮೇಶ್‌ ಕುಮಾರ್‌ ಆದೇಶವನ್ನು ಮರು ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ್ದು, ಕೋರ್ಟ್‌ ತೀರ್ಪಿನ ನಂತರ ನಡೆಯುವ ರಾಜಕೀಯ ಬೆಳವಣಿಗೆಗಳು, ಬಿಜೆಪಿ ಸೇರ್ಪಡೆ ಹಾಗೂ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಸುದೀರ್ಘ‌ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅನರ್ಹ ಶಾಸಕರ ಬೆಂಬಲಕ್ಕೆ ನಾವಿದ್ದೇವೆ. ಅವರು ನಮಗೆ ಸಹಕಾರ ನೀಡಿದ್ದಾರೆ. ಅವರ ಮುಂದಿನ ರಾಜಕೀಯ ನಡೆ ಏನೆಂದು ರಮೇಶ್‌ ಜಾರಕಿಹೊಳಿ ನಿವಾಸದಲ್ಲಿ ಚರ್ಚೆ ಮಾಡಿದ್ದೇವೆ .
-ಸಿ.ಪಿ.ಯೋಗೇಶ್ವರ್‌ ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next