ಮುಂಬೈ: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಬೆಳಗಾವಿ ವಿಚಾರದಲ್ಲಿ ಮತ್ತೆ ಕ್ಯಾತೆ ಶುರು ಮಾಡುವ ಸುಳಿವು ನೀಡಿದೆ. ಬೆಳಗಾವಿ ತನಗೇ ಸೇರಬೇಕು ಎಂದು ತಂಟೆ ತೆಗೆಯುವ ಸರ್ಕಾರ ಈಗ ಹೊಸ ಸಮಿತಿಯೊಂದನ್ನು ರಚಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ಸಚಿವ ಛಗನ್ ಭುಜಬಲ್ ಮತ್ತು ಏಕನಾಥ ಶಿಂಧೆ ಅವರನ್ನೊಳ ಗೊಂಡ ಸಮನ್ವಯ ಸಮಿತಿ ರಚಿಸಿ, ಕರ್ನಾಟಕದ ಜತೆಗೆ ಇರುವ ಗಡಿ ವಿವಾದಕ್ಕೆ ಸಂಬಂಧಿಸಿದ ಕೇಸುಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಸಚಿವರ ಜತೆಗೆ ಸಭೆಯನ್ನೂ ಉದ್ಧವ್ ನಡೆಸಿದ್ದಾರೆ. ಗಡಿ ವಿವಾದ ಕುರಿತ ಮುಂದಿನ ಕ್ರಮಗಳ ಬಗ್ಗೆ ಹಾಗೂ ಮಹಾರಾಷ್ಟ್ರದ ಪರ ಬಲಿಷ್ಠ ವಾದ ಮಂಡನೆ ಬಗ್ಗೆ ವಕೀಲರ ಜತೆಗೆ ಸಮಾಲೋಚನೆ ನಡೆಸುವ ಇರಾದೆಯನ್ನೂ ಮುಖ್ಯಮಂತ್ರಿ ಉದ್ಧವ್ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ಜತೆಗೆ ಠಾಕ್ರೆಯವರೇ ಗಡಿ ತಂಟೆ ನಿಭಾಯಿಸುವುದು ಹೇಗೆ ಎಂಬುದರ ಬಗ್ಗೆ ಸಲಹೆ ಪಡೆದುಕೊಳ್ಳಲಿದ್ದಾರೆ.
ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಹೇಳಿಕೊಂಡು ಬರುತ್ತಿರುವಂತೆ ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಗಳಲ್ಲಿ ಮರಾಠಿ ಮಾತನಾಡು ವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆ ಪ್ರದೇಶ ತನಗೇ ಸೇರಬೇಕು ಎಂದು ವಾದಿಸುತ್ತಿದೆ. ಜತೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕೇಸು ದಾಖಲಿ ಸಿದ್ದು, ಅದು ವಿಚಾರಣೆಯ ಹಂತದಲ್ಲಿದೆ.
ಶನಿವಾರ ನಡೆದ ಸಭೆಯಲ್ಲಿ ಸಚಿವರಾದ ಜಯಂತ್ ಪಾಟೀಲ್, ಛಗನ್ ಭುಜಬಲ್, ಏಕನಾಥ ಶಿಂಧೆ, ನಿತಿನ್ ರಾವುತ್, ಸುಭಾಷ್ ದೇಸಾಯಿ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಮನೋಹರ ಕಿಣೇಕರ್, ಅರವಿಂದ ಪಾಟೀಲ್, ದಿಗಂಬರ ಪಾಟೀಲ್ ಮತ್ತು ಬೆಳಗಾವಿ “ತರುಣ ಭಾರತ’ ಪತ್ರಿಕೆಯ ಕಿರಣ್ ಠಾಕೂರ್ ಭಾಗವಹಿಸಿದ್ದರು.