ಬೆಂಗಳೂರು: ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ 3,667 ಎಕರೆ ಜಮೀನು ಪರಭಾರೆ ಮಾಡುವ ನಿರ್ಧಾರದ ಕುರಿತು ಪರಾಮರ್ಶೆ ನಡೆಸಿ ವರದಿ ನೀಡಲು ಸಂಪುಟ ಉಪ ಸಮಿತಿ ರಚಿಸಲು ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಲವು ಸಚಿವರ ವಿರೋಧದ ನಡುವೆಯೇ ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್ ಅವರ ಒತ್ತಾಯದ ಮೇರೆಗೆ ಸಂಪುಟ ಉಪ ಸಮಿತಿ ರಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದು, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಉಪ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇದೆ.
ಈ ಕುರಿತು ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ, ಜಿಂದಾಲ್ಗೆ ಲೀಸ್ ಕಮ್ ಸೇಲ್ ಮಾಡಿಕೊಡಲು ಹಿಂದೆ ಆಗಿದ್ದ ಒಪ್ಪಂದದಂತೆ ಮೇ 27 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಸಂಪುಟದ ತೀರ್ಮಾನಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಸಂಪುಟ ಉಪ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಉಪ ಸಮಿತಿಯ ಅಧ್ಯಕ್ಷರನ್ನು ನೇಮಿಸುವ ಜವಾಬ್ದಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಜಿಂದಾಲ್ಗೆ ಜಮೀನು ಮಾರಾಟ ಮಾಡಲು ಸಂಪುಟ ನಿರ್ಧಾರ ತೆಗೆದು ಕೊಂಡ ಬೆನ್ನಲ್ಲೆ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್, ಸಿಎಂಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಬಿಜೆಪಿ ಕೂಡ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಸಂಪುಟದ ನ್ಯಾಯಯುತವಾದ ತೀರ್ಮಾನಕ್ಕೆ ಕೆಲವರ ವಿರೋಧಕ್ಕೆ ಸಂಪುಟ ಮಣಿಯಬಾರದು ಎಂದು ಕೆಲವು ಸಚಿವರು ಹೇಳಿದರು. ಆದರೂ, ಜಾರ್ಜ್ ಒತ್ತಾಯಕ್ಕೆ ಉಪ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಈ ಸಮಿತಿಯಲ್ಲಿ ತಮ್ಮನ್ನು ಸದಸ್ಯರನ್ನಾಗಿ ಮಾಡಬೇಡಿ ಎಂದು ಜಾರ್ಜ್ ಮನವಿ ಮಾಡಿದರು. ಆದರೆ, ಅವರೇ ಕೈಗಾರಿಕಾ ಸಚಿವರಾಗಿರುವುದರಿಂದ ಅವರನ್ನು ಸಮಿತಿಯ ಸದಸ್ಯರನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ಸಂಪುಟ ಉಪ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ. ಆದಷ್ಟು ಬೇಗ ಅವರು ಸಂಪುಟ ಉಪ ಸಮಿತಿ ಅಧ್ಯಕ್ಷರನ್ನು ನೇಮಿಸುತ್ತಾರೆ. ಸಮಿತಿ ವರದಿ ಬಂದ ನಂತರ ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಹಳ್ಳಿ ಕಡೆಯವ್ರು ಟ್ಯಾಕ್ಸ್ ಕಟ್ಟಲ್ಲ, ಫಾರ್ಮಿಂಗ್ ಮಾಡ್ತಾರೆ ಅಷ್ಟೇ. ಉದ್ಯಮಿಗಳು ಟ್ಯಾಕ್ಸ್ ಕಟ್ತಾರೆ, ಉದ್ಯೋಗ ಸೃಷ್ಟಿ ಆಗಬೇಕು ಅಂದ್ರೆ ಜಮೀನು ಕೊಡಬೇಕಾಗುತ್ತದೆ. ಜಿಂದಾಲ್ ಗುಡ್ ಬಿಸಿನೆಸ್‌ಮನ್.
-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ