Advertisement

ಎ. 17ರ ಬಳಿಕ ಸಿಎಂ ರಾಜೀನಾಮೆ ನೀಡಲಿ: ಯತ್ನಾಳ್‌

11:25 PM Apr 07, 2021 | Team Udayavani |

ಬೆಂಗಳೂರು: ಮೂರು ಕ್ಷೇತ್ರಗಳ ಉಪ ಚುನಾವಣೆಯ ಫ‌ಲಿತಾಂಶದ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದ್ದಾರೆ. ಯಡಿಯೂರಪ್ಪ ಅವರು ಎ. 17ರ ಬಳಿಕ ಗೌರವಯುತವಾಗಿ ರಾಜೀನಾಮೆ ನೀಡಬೇಕು ಬಿಜೆಪಿ ಶಾಸಕ ಬಸವಗೌಡ ಪಾಟೀಲ್‌ ಯತ್ನಾಳ್‌ ಆಗ್ರಹಿಸಿದ್ದಾರೆ.

Advertisement

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎ. 17 ರ ಬಳಿಕ ಬಿಜೆಪಿಯಲ್ಲಿ ಇನ್ನೂ ಬಹಳ ಜನ ಶಾಸಕರು ಹಾಗೂ ಸಚಿವರು ರೊಚ್ಚಿಗೇಳುತ್ತಾರೆ. 75 ವರ್ಷ ಮೀರಿದವರಿಗೆ ಅಧಿಕಾರ ಇಲ್ಲ ಎನ್ನುವ ಬಿಜೆಪಿಯ ನಿಯಮ ಯಡಿಯೂರಪ್ಪರಿಗೆ ಅನ್ವಯ ಆಗುವುದಿಲ್ಲವೇ ? ಅವರಿಗೆ ಎರಡು ವರ್ಷ ಬೋನಸ್‌ ಸಿಕ್ಕಿದೆ. ಇನ್ನು ಅವರೇ ದೂರ ಸರಿಯುವುದು ಉತ್ತಮ ಎಂದರು.

ಸದ್ಯ ನಾನೇ ವಿಪಕ್ಷ ನಾಯಕ!
ರಾಜ್ಯದಲ್ಲಿ ವಿಪಕ್ಷವೇ ಇಲ್ಲ. ವಿಪಕ್ಷದ ನಾಯಕರು ಮುಖ್ಯಮಂತ್ರಿ ಜತೆಯಲ್ಲಿ ಕಾವೇರಿ ನಿವಾಸದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ನಾನೇ ವಿಪಕ್ಷದ ನಾಯಕನಂತೆ ಕೆಲಸ ಮಾಡುತ್ತಿದ್ದೇನೆ. ಸ್ಪೀಕರ್‌ ಕಾಗೇರಿಯವರು ವಿಪಕ್ಷದ ನಾಯಕನಿಗೆ ನೀಡುವ ಸವಲತ್ತನ್ನು ನನಗೇ ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.

ನನ್ನ ಹಿಂದಿನ ಶಕ್ತಿಯನ್ನು ಈಗ ಹೇಳಲಾರೆ
ಸಿಎಂ ವಿರುದ್ಧ ಆರೋಪ ಮಾಡಿದ್ದಕ್ಕೆ ಪಕ್ಷ ನೊಟೀಸ್‌ ನೀಡಿ 60 ದಿನಗಳಾದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನನ್ನ ಹಿಂದೆ ಹೈಕಮಾಂಡ್‌ನ‌ ಯಾವುದಾದರೂ ದೊಡ್ಡ ಶಕ್ತಿ ಇರಬೇಕಲ್ವಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ನನ್ನ ಜತೆಗಿದ್ದಾರೆ. ಜತೆಗೆ ದೊಡ್ಡ ಶಕ್ತಿ ಯಾರಿದ್ದಾರೆ ಎಂಬುದನ್ನು ಸಂದರ್ಭ ಬಂದಾಗ ಹೇಳುತ್ತೇನೆ ಎಂದರು.

ಇದನ್ನೂ ಓದಿ :ಸುಬ್ರಹ್ಮಣ್ಯ : ಕೆದಿಲ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷ : ಆತಂಕದಲ್ಲಿ ಸ್ಥಳೀಯರು

Advertisement

ವಿಜಯೇಂದ್ರಗೆ ಇ.ಡಿ. ವಿಚಾರಣೆ
ಯಡಿಯೂರಪ್ಪ ಅವರ ಪುತ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಫೆಡರಲ್‌ ಬ್ಯಾಂಕ್‌ ಹಣದ ಅವ್ಯವಹಾರದಲ್ಲಿ ಕರೆದು ವಿಚಾರಣೆ ನಡೆಸಿದೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದಾರೆ. ಸಾಧ್ಯವಿದ್ದರೆ ಈ ಆರೋಪವನ್ನು ವಿಜಯೇಂದ್ರ ಸುಳ್ಳು ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಯತ್ನಾಳ್‌ – ಬೆಲ್ಲದ ಗುಪ್ತ ಮಾತುಕತೆ
ಬೆಂಗಳೂರು, ಎ. 7: ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಅರವಿಂದ ಬೆಲ್ಲದ್‌ ಅವರು ಬುಧವಾರ ವಿಧಾನಸೌಧದಲ್ಲಿ ಸ್ಪೀಕರ್‌ ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗುಪ್ತ ಮಾತುಕತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.

ವಿಧಾನಸೌಧದಲ್ಲಿ ಹಕ್ಕು ಬಾಧ್ಯತಾ ಸಮಿತಿ ಸಭೆಯ ಬಳಿಕ ಅವರಿಬ್ಬರು ಸ್ಪೀಕರ್‌ ಕಚೇರಿಯಲ್ಲಿ ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯತ್ನಾಳ್‌ಗೆ ಪಕ್ಷದ ವತಿಯಿಂದ ಪ್ರಚಾರಕ್ಕೆ ಆಹ್ವಾನ ನೀಡದಿರುವುದರಿಂದ ಪ್ರಚಾರಕ್ಕೆ ತೆರಳಿ ಪಂಚಮಸಾಲಿ ಸಮುದಾಯದ ಮತದಾರರು ಬಿಜೆಪಿ ಮತ ಹಾಕುವಂತೆ ಮನವಿ ಮಾಡುವ ಕುರಿತು ಚರ್ಚೆ ನಡೆದಿದೆ ಎನ್ನಲಾಗುತ್ತಿದೆ.

ಈ ಚುನಾವಣೆಯಲ್ಲಿ ಬೆಳಗಾವಿ ಹಾಗೂ ಮಸ್ಕಿ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯ ನಿರ್ಣಾಯಕ ಪಾತ್ರ ವಹಿಸಲಿದ್ದು, ಸಮುದಾಯ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಎನ್ನುವುದು ಮಹತ್ವದ್ದಾಗಿದೆ. ಸರಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ನೀಡಿದ್ದು, ಆರು ತಿಂಗಳು ಸಮಯವಕಾಶ ಕೋರಿದೆ. ಹೀಗಾಗಿ ಈ ಸಂದರ್ಭದಲ್ಲಿ ಸಮುದಾಯ ಬಿಜೆಪಿ ಪರ ನಿಲ್ಲುವಂತೆ ಮನವಿ ಮಾಡಿಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next