Advertisement

ಹೈ.ಕ ವಿಮೋಚನಾ ದಿನಾಚರಣೆಗೆ ಸಿಎಂ

11:49 AM Sep 16, 2018 | Team Udayavani |

ಕಲಬುರಗಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೆ. 17ರಂದು ಹೈ.ಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಹಾಗೂ ಬರಗಾಲ ವೀಕ್ಷಣೆಗೆಂದು ನಗರಕ್ಕೆ ಎಂಟು ಸೀಟಿನ ವಿಮಾನದ ಮೂಲಕ ಆಗಮಿಸುತ್ತಿದ್ದಾರೆ.

Advertisement

ಮುಖ್ಯಮಂತ್ರಿ ಕುಮಾರಸ್ವಾಮಿ ಕಲಬುರಗಿಗೆ ಆಗಮಿಸುತ್ತಿರುವುದು ಹಲವು ಮೈಲುಗಳನ್ನು ನಿರ್ಮಿಸಲಿದೆ. ಮುಖ್ಯಮಂತ್ರಿಯಾದ ನಂತರ ಮೊದಲ ಸಲ ಆಗಮಿಸುತ್ತಿರುವುದು ಒಂದೆಡೆಯಾದರೆ ಕಳೆದ ತಿಂಗಳವಷ್ಟೇ ವಿಮಾನ ಹಾರಾಟದ ಪ್ರಾಯೋಗಿಕ ಪರೀಕ್ಷೆ ನಡೆದ ನಂತರ ಇಲ್ಲಿನ ವಿಮಾನ ನಿಲ್ದಾಣಕ್ಕೆ ವಿಮಾನ ಮೂಲಕ ಬಂದಿಳಿದ ಮೊದಲ ಮುಖ್ಯಮಂತ್ರಿ ಎನ್ನುವ ಖ್ಯಾತಿಗೆ ಪಾತ್ರರಾಗಲಿದ್ದಾರೆ.

ಸೋಮವಾರ ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ನಗರದ ಹೊರವಲಯ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮುಂಬೈನ ಫ್ರೀಡ್‌ಂ ಛಾಪ್ಟರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಹಾಕರ್‌ 900 ವಿಮಾನವನ್ನು ಪೂರ್ವ ಪರಿಶೀಲನೆಗಾಗಿ ಯಶಸ್ವಿ ಹಾರಾಟ ನಡೆಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ, ಎಸ್ಪಿ ಶಶಿಕುಮಾರ ಮತ್ತಿತರರು ಇದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಸೆ. 17ರಂದು ಬೆಳಗ್ಗೆ 6:30ಕ್ಕೆ ಬೆಂಗಳೂನ ಹೆಚ್‌.ಎ.ಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಒಂದು ಗಂಟೆ ನಂತರ ಬೆಳಗ್ಗೆ 7;30ಕ್ಕೆ ಬಂದಿಳಿಯುವರು. ತದನಂತರ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಪಾಲ್ಗೊಳ್ಳುವುದರ ಜತೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವರು. ಇದೇ ಸಂದರ್ಭದಲ್ಲಿ ಬರಗಾಲ ಪರಿಸ್ಥಿತಿ ವೀಕ್ಷಿಸುವರು.

ಹೈ.ಕ ವಿಮೋಚನೆ ಗೂ ಮೊಲದ ಬಾರಿಗೆ ಭಾಗಿ: ಸೆಪ್ಟೆಂಬರ್‌ 17ರ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಸರ್ಕಾರದಿಂದ 2002ರಿಂದ ಆಚರಿಸುತ್ತಾ ಬರಲಾಗುತ್ತಿದೆ. ವಿಮೋಚನಾ ದಿನಾಚರಣೆಗೆ ನಮ್ಮವರೇ ಜನಪ್ರತಿನಿಧಿಗಳು ಪಾಲ್ಗೊಳ್ಳಲು ಹಿಂಜರಿಯುತ್ತಿರುವಾಗ ಎಚ್‌.ಡಿ. ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ವಿಮೋಚನಾ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮೊದಲ ಸಿಎಂ ಎಂಬ ಇತಿಹಾಸವನ್ನು ನಿರ್ಮಿಸಿದ್ದರು. ಹೈ.ಕ ವೊಮೋಚನಾ ದಿನಾಚರಣೆಗೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಪಾಲ್ಗೊಂಡಿರುವುದನ್ನು ಈ ಭಾಗದ ಜನ ಸದಾ ನೆನೆಸುತ್ತಲೇ ಇದ್ದಾರೆ. ತದನಂತರ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್‌ ಹಾಗೂ ಸಿದ್ದರಾಮಯ್ಯ ಅವರು ಒಂದು ಸಲ ಪಾಲ್ಗೊಂಡಿದ್ದಾರೆ.

Advertisement

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿಶೇಷ ವಿಮಾನದ ಮೂಲಕ ಸೆಪ್ಟೆಂಬರ್‌ 17ರಂದು ಬೆಳಗ್ಗೆ 7:30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ತದನಂತರ ಬೆಳಗ್ಗೆ 8:30 ಗಂಟೆಗೆ ಕಲಬುರಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿರುವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ನಂತರ ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ನೆರವೇರಿಸುವರು. ತದನಂತರ ಬೆಳಗ್ಗೆ 10:15 ಗಂಟೆಗೆ ಕಲಬುರಗಿಯಲ್ಲಿ ಸಂತ ಸೇವಾಲಾಲ ಸಾಂಸ್ಕೃತಿಕ ಭವನ ಹೊಸ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಗ್ಗೆ 11:30 ಗಂಟೆಗೆ ಕಲಬುರಗಿ ನಗರದ ಐವಾನ್‌ ಶಾಹಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸುವರು.

ಮಧ್ಯಾಹ್ನ 12 ಗಂಟೆಗೆ ಕಲಬುರಗಿಯಿಂದ ರಸ್ತೆ ಮೂಲಕ ಅಫಜಲಪುರ ತಾಲೂಕಿನ ದೇವಲಗಾಣಗಾಪುರಕ್ಕೆ ತೆರಳಿ ಬರ ಪರಿಸ್ಥಿತಿಯ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸುವರು. ಮಧ್ಯಾಹ್ನ 1:15 ಗಂಟೆಗೆ ದೇವಲಗಾಣಗಾಪುರದ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ಮಾಡುವರು. ಅಂದು ಮಧ್ಯಾಹ್ನ 3 ಗಂಟೆಗೆ ಕಲಬುರಗಿ ನಗರದ ಐವಾನ್‌ ಶಾಹಿ ಅತಿಥಿಗೃಹದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡಿ ಕುಂದುಕೊರತೆಗಳ ಆಲಿಕೆ ಹಾಗೂ ಮನವಿ ಸ್ವೀಕರಿಸುವರು. ಅಂದು ಸಂಜೆ 4:30 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.

Advertisement

Udayavani is now on Telegram. Click here to join our channel and stay updated with the latest news.

Next