ಮೈಸೂರು: ರಾಜಕೀಯದಲ್ಲಿ ವಿಲನ್ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ. ಸರಕಾರ ಬೀಳುವಾಗ ಅಮೆರಿಕದಲ್ಲಿ ಕೂತಿದರು ಇದಕ್ಕೆ ಏನೂ ಕರೆಯಬೇಕು. ಇಡೀ ಒಂದು ವರ್ಷ ಎರಡು ತಿಂಗಳು ತಾಜ್ ವೆಸ್ಟ್ ಎಂಡ್ ನಲ್ಲಿ ಕಾಲ ಕಳೆದರು. ವಿಧಾನಸಭೆಯಲ್ಲಿ ಬಿಜೆಪಿ ಅವರೇ ಸರಕಾರ ಬೀಳಿಸಿದ್ದು ಅಂತಾ ಹೇಳಿದರು. ಇದು ರೆಕಾರ್ಡ್ ಆಗಿದೆ. ಅಸೆಂಬ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು,ಸಚಿವರು, ಶಾಸಕರ ಭೇಟಿ ಮಾಡದೆ ಹೋಟೆಲ್ ನಲ್ಲಿ ಕುಳಿತು ಈಗ ನನ್ನ ಮೇಲೆ ಆರೋಪ ಮಾಡುತ್ತಾರೆ. ಕುಮಾರಸ್ವಾಮಿ ಅವರು ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ಬಿಜೆಪಿಗಿಂತ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ. ಬಿಜೆಪಿ – ಜೆಡಿಎಸ್ ದ್ದು ಎಳವರು, ಕುರುಡರ ಕಥೆ ಆಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಡಿಪೇಂಡ್ ಆಗಿದ್ದಾರೆ ಖಾಲಿ ಡಬ್ಬ ಮಾತ್ರ ಶಬ್ದ ಜಾಸ್ತಿ ಮಾಡುತ್ತದೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಟೀಕಿಸಿದರು.
ರಾಮನಗರ ವಿಚಾರದಲ್ಲಿ ಮಾತನಾಡಿದ ಅವರು, ರಾಮನಗರ ವಿಚಾರ ಅವರನ್ನೆ ಕೇಳಿ. ನನಗೆ ಅದು ಗೊತ್ತಿಲ್ಲ. ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್ ನಲ್ಲಿ ಏನೂ ಇದೆ ಎಂಬುದು ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಹೆಚ್ಚಾಗಿ ಮಾತಾಡುವುದಿಲ್ಲ ಎಂದರು.
ನಾಡಹಬ್ಬ ರೀ ಲುಕ್ ಮಾಡುವ ವಿಚಾರದಲ್ಲಿ ಮಾತನಾಡಿದ ಅವರು,ಮೈಸೂರು ಜನರ ಅಭಿಪ್ರಾಯ ಕೇಳಿ ರೀ ಲುಕ್ ಬಗ್ಗೆ ತೀರ್ಮಾನ ಆಗುತ್ತದೆ. ಜನರ ಅಭಿಪ್ರಾಯದ ಪ್ರಕಾರ ತೀರ್ಮಾನ ಮಾಡುತ್ತೇವೆ. ಈ ಬಾರಿ ದಸರಾ ಶಾಂತಿಯುತವಾಗಿ ಇತ್ತು.ಅಧಿಕಾರಿಗಳು ಟೀಂ ವರ್ಕ್ ಆಗಿ ಕೆಲಸ ಮಾಡಿದ್ದಾರೆ. ಜನಪ್ರತಿನಿಧಿಗಳು ಸಹಕರಿಸಿದ್ದಾರೆ ಎಂದರು.
ಇದು ಎಟಿಎಂ ಸರಕಾರ ಎಂಬ ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿದ ಅವರು, ಬಿಜೆಪಿ ಗೆ ಮಾನ ಮರ್ಯಾದೆ ಇದ್ಯಾ? ಕೋಟ್ಯಂತರ ರೂಪಾಯಿ ಹಣದಲ್ಲಿ ಆಪರೇಷನ್ ಕಮಲ ಮಾಡಿದವರು ನಮ್ಮ ಬಗ್ಗೆ ಮಾತಾಡುತ್ತಾರೆ? ರಾಜ್ಯ ಆರ್ಥಿಕವಾಗಿ ದಿವಾಳಿ ಆಗಲು ಬಿಜೆಪಿ ಕಾರಣ. ವಿದ್ಯುತ್ ತೊಂದರೆ ಆಗಿದ್ದರೆ ಅದಕ್ಕೆ ಬಿಜೆಪಿ ಕಾರಣ. ಬಿಜೆಪಿ ಆಡಳಿತ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿಲ್ಲ. ಬಿಜೆಪಿ ಗೆ ಕಾಂಗ್ರೆಸ್ ಬಗ್ಗೆ ಮಾತಾಡಲು ನೈತಿಕತೆ ಇಲ್ಲ ಎಂದರು.
ಬಿಜೆಪಿಯವರುಸಾಲ ಮಾಡಿ ಆರ್ಥಿಕವಾಗಿ ರಾಜ್ಯ ದಿವಾಳಿ ಮಾಡಿ ಹೋಗಿದ್ದಾರೆ. ಹಣ ಇರದಿದ್ದರೂ ಕಾಮಗಾರಿ ಟೆಂಡರ್ ಕರೆದು 30 ಸಾವಿರ ಕೋಟಿ ರೂ ಪೆಂಡಿಂಗ್ ಬಿಲ್ ಇದೆ. ಇದಕ್ಕೆ ಯಾರು ಹೊಣೆ? ನಮ್ಮ ಐದು ವರ್ಷದ ಆಡಳಿತ ಅರ್ಥಿಕ ಪರಿಸ್ಥಿತಿ, ಬಿಜೆಪಿ ಅವಧಿಯ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸುತ್ತೇನೆ. ಹೈಕಮಾಂಡ್ ಗೆ ದುಡ್ಡು ಕಳಿಸುತ್ತೇವೆ ಎಂಬುದು ಸುಳ್ಳು. ನಾವು ಯಾರಿಗೂ ಒಂದು ಪೈಸೆ ಕೊಟ್ಟಿಲ್ಲ ಎಂದರು.
ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ವಿಸ್ತರಣೆ ಹಾಗೂ ಮತ್ತೊಂದು ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು. ಈ ರೀತಿಯ ಚರ್ಚೆ ಯಾವುದು ಇಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನ ಎಂದರು.