ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಗುರುವಾರ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡಿದ ಕೆಲವು ಗಂಭೀರ ಆರೋಪಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಚೆಲುವರಾಯ ಸ್ವಾಮಿ ಸೇರಿ ಕಾಂಗ್ರೆಸ್ ಶಾಸಕರು ಕೆರಳಿ ತೀವ್ರ ವಾಕ್ಸಮರ ನಡೆಸಿದ್ದಾರೆ.
ಕುಮಾರಸ್ವಾಮಿ ಅವರು ಯತೀಂದ್ರ ಕುರಿತು ಆರೋಪ ಮಾಡಿದಾಗ ಕೆರಳಿದ ಸಿಎಂ ಸಿದ್ದರಾಮಯ್ಯ ಎದ್ದು ನಿಂತು ತಿರುಗೇಟು ನೀಡಿದರು. ನಾವು ಯಾಕೆ ಹೆದರಬೇಕು. ನೀವು ಕೇರ್ ಮಾಡಲ್ಲ ಅಂದರೆ ನಾನು ಅದರ ಅಪ್ಪನಷ್ಟು ಕೇರ್ ಮಾಡಲ್ಲ.ಯಾರ್ ರೀ ಹೆದರಿ ಕೊಳ್ಳುತ್ತಾರೆ ಎಂದು ಸಿಎಂ ಕಿಡಿ ಕಾರಿದರು. ತಿರುಗೇಟು ನೀಡಿದ ಕುಮಾರಸ್ವಾಮಿ, ಈ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ನಾವು ನಿಮ್ಮ ಮುಲಾಜಿನಲ್ಲಿ ಬರಲಿಲ್ಲ.ನಮ್ಮಲ್ಲಿ ಬೆಳೆದವರನ್ನು ತೆಗೆದುಕೊಂಡು ರಾಜಕಾರಣ ಮಾಡುತ್ತಿದ್ದೀರಿ. ದೇವೇಗೌಡರ ಕತ್ತು ಕೊಯ್ದು ಬಂದವರು .. ಎಂದು ಕಿಡಿ ಕಾರಿದರು.
ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಕಾರಣಕ್ಕೆ ಈಶ್ವರಪ್ಪ ಅವರಿಂದ ಕಿತ್ತೋದ ಕಾಂಗ್ರೆಸ್ ನವರು ರಾಜೀನಾಮೆ ಕೊಡಿಸಿದ್ದರು. ನನ್ನ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಮಾರಸ್ವಾಮಿ ಮತ್ತು ಸಚಿವ ಚಲುವರಾಯಸ್ವಾಮಿ ನಡುವೆ ವಾಗ್ವಾದ ನಡೆಯಿತು. ಜಗದೀಶ್ ಕುಟುಂಬದೊಂದಿಗೆ ವೈದ್ಯರ ಜತೆ ಏನು ಮಾತಾಡಿದ್ದೇನೆಂಬ ರೆಕಾರ್ಡಿಂಗ್ ಇದೆ. ಲಕ್ಷಾಂತರ ಬಡವರ ಜೀವ ಉಳಿಸಿದವ ನಾನು.ಕೊಲೆಗಡುಕ ಅಲ್ಲ. ತನಿಖೆ ಆಗುವವರಗೆ ಸಚಿವರು ರಾಜೀನಾಮೆ ನೀಡಿ ಹೊರಗಿರಲಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.
ಮಂಡ್ಯ ಜಿಲ್ಲೆ ನಾಗಮಂಗಲ ಡಿಪೋ ಎದುರು ಸಾರಿಗೆ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತುಜೆಡಿಎಸ್ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸ್ಪೀಕರ್ ಯು.ಟಿ.ಖಾದರ್ ಅವರ ಮನವಿಯ ಬಳಿಕ ಧರಣಿ ಕೈಬಿಟ್ಟು ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತುಕೊಂಡರು.
ಸದನದಲ್ಲೇ ಪ್ರದರ್ಶನ..!
ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂಬ ಆರೋಪಕ್ಕೆ ಕುಪಿತರಾದ ಸಚಿವ ಕೆ.ಜೆ.ಜಾರ್ಜ್, ಪೆನ್ಡ್ರೈವ್ ಇದೆ, ಸಾಕ್ಷ್ಯವಿದೆ ಎಂದು ಹೇಳಿದ್ದೀರಿ. ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ ಎಂದು ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದರು. ಉತ್ತರಿಸಿದ ಕುಮಾರಸ್ವಾಮಿ, ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸ್ಪೀಕರ್ ಅವರು ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪ್ರದರ್ಶನ ಮಾಡುತ್ತೇನೆ ಎಂದರು.