Advertisement

CM ಸಮರ: ಸಿದ್ದು ವಿರುದ್ಧ ಡಿಕೆಶಿ ಚಾರ್ಜ್‌ಶೀಟ್‌

12:13 AM May 17, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮಯ್ಯ ವಿರುದ್ಧ 15 ಆರೋಪಗಳ ಚಾರ್ಜ್‌ಶೀಟನ್ನು ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿಟ್ಟಿದಾರೆ.

Advertisement

2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆಬಂದಾಗಿನಿಂದ 2023ರ ವರೆಗೆ ನಡೆದಿರುವ ಬೆಳವಣಿಗೆ, ಪಕ್ಷ ಕಟ್ಟಲು ಅವರ ಕೊಡುಗೆ ಮತ್ತು ಪಕ್ಷಕ್ಕೆ ಅವರಿಂದ ಆಗಿರುವ ನಷ್ಟದ ಬಗ್ಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಾಮುಂಡೇಶ್ವರಿ ಚುನಾವಣೆಯಲ್ಲಿ 264 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದರು. ಆದರೆ ಪಕ್ಷಕ್ಕೆ ಬಂದ ಮೇಲೆ ನೀವು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಸಂಘಟನೆಗೆ ಸಹಕರಿಸಲಿಲ್ಲ. 2008ರಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಸರಕಾರ ರಚನೆಯಾಗಿ ನಿಮಗೆ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು. ಆದರೆ 6 ಮಂದಿ ಪಕ್ಷೇತರರನ್ನು ಬಿಜೆಪಿಗೆ ಕಳುಹಿಸಿ ಅದನ್ನು ತಪ್ಪಿಸಿದರು. ಆ ಸಂದರ್ಭದಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆಯಿಂದ ನಡೆದ ಉಪ ಚುನಾವಣೆಗಳಲ್ಲಿ ಗೋವಿಂದರಾಜನಗರ ಬಿಟ್ಟರೆ ಬೇರೆ ಎಲ್ಲೂ ಗೆಲ್ಲಲಿಲ್ಲ.

ಅನಂತರ ನೀವು ಸಂಸತ್‌ ಚುನಾವಣೆಯಲ್ಲಿ ಗೆದ್ದು ದಿಲ್ಲಿಗೆ ಹೋದ ಮೇಲೆ ವಿಪಕ್ಷ ನಾಯಕ ಸ್ಥಾನ ಪಡೆದರು. 2010ರಲ್ಲಿ ಸಿ.ಎಂ. ಇಬ್ರಾಹಿಂ ಅವರನ್ನು ಪರಿಷತ್‌ ಸದಸ್ಯರನ್ನಾಗಿ ಮಾಡಲು ಹಠ ಹಿಡಿದರು. ಪರಿಷತ್‌ ಚುನಾವಣೆಯಲ್ಲಿ ಬೈರತಿ ಸುರೇಶ್‌ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಮಾಡಿದ್ದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್‌ ಅಹಮದ್‌ ಸರಡಗಿ ಸೋಲಬೇಕಾಯಿತು.

2013ರ ಚುನಾವಣೆಯಲ್ಲಿ ಭದ್ರಾವತಿಯಲ್ಲಿ ಹಾಲಿ ಶಾಸಕ ಸಂಗಮೇಶ್‌ ಇದ್ದರೂ ಸಿ.ಎಂ. ಇಬ್ರಾಹಿಂಗೆ ಟಿಕೆಟ್‌ ಕೊಡಿಸಿದರು. ಆದರೆ ಅವರು 3ನೇ ಸ್ಥಾನ ಪಡೆದರು. ಆದರೂ ಅವರಿಗೆ ಯೋಜನ ಆಯೋಗದ ಉಪಾಧ್ಯಕ್ಷ ಸ್ಥಾನ ಕೊಟ್ಟರು. 2013ರ ಚುನಾವಣೆಯಲ್ಲಿ ಡಾ| ಪರಮೇಶ್ವರ್‌ ಸೋಲಿಗೆ ಕಾರಣರಾದರು.

Advertisement

ಮುಖ್ಯಮಂತ್ರಿಯಾದ ಬಳಿಕ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬುಲ್ಡೋಜರ್‌ ರೀತಿ ಕೆಲಸ ಮಾಡಿದರು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸಂಪುಟ ಸಭೆಯ ತೀರ್ಮಾನಕ್ಕೆ ವಿರುದ್ಧವಾಗಿ ಲಿಂಗಾಯತ ಧರ್ಮ ವಿಭಜನೆಯ ತೀರ್ಮಾನ ಕೈಗೊಂಡರು. ಇದರಿಂದ ಪಕ್ಷಕ್ಕೆ ಹಾನಿ ಆಯಿತು.

2018ರಲ್ಲಿ ಚುನಾವಣೆಗೆ ಆರು ತಿಂಗಳು ಮುನ್ನ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ತೆಗಳಿದ್ದರಿಂದ ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಯಿತು. 120 ಇದ್ದ ಸ್ಥಾನ 80ಕ್ಕೆ ಕುಸಿಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ಮತಗಳ ಅಂತರದಿಂದ ಸೋತರು.

2019ರ ಲೋಕಸಭೆ ಚುನಾವಣೆಯಲ್ಲಿ ಕೆ.ಎಚ್‌. ಮುನಿಯಪ್ಪ ಅವರ ಸೋಲಿಗೂ ಕಾರಣರಾದರು. ಆಗ ಕಾಂಗ್ರೆಸ್‌ ಗೆದ್ದದ್ದು ಒಂದು ಲೋಕಸಭೆ ಕ್ಷೇತ್ರವನ್ನು. ಅದು ನನ್ನ ಸಹೋದರ ಡಿ.ಕೆ. ಸುರೇಶ್‌. ಇದರ ಜತೆಗೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ ಪತನಕ್ಕೂ ಕಾರಣರಾದರು. ಅಹಿಂದ ಮತ ಅವರಿಂದ ಮಾತ್ರ ಬಂದಿಲ್ಲ. ಕುರುಬ ಸಮುದಾಯ ಬಿಟ್ಟರೆ ಬೇರೆ ಯಾರೂ ಅವರ ಜತೆ ಇಲ್ಲ. ಅಲ್ಪಸಂಖ್ಯಾಕರು ಸದಾ ಕಾಂಗ್ರೆಸ್‌ ಜತೆಗಿದ್ದಾರೆ. ದಲಿತ ಮತಗಳು ಅವರಿಂದ ಬಂದಿವೆ ಎಂದರೆ ನಿಮಗೇ ಅವಮಾನ.

ಈ ಬಾರಿಯೂ ಚುನಾವಣೆಗೆ ಮುನ್ನ ಮುಂದಿನ ಸಿಎಂ ಗೊಂದಲ ಸೃಷ್ಟಿಸಿದರು. ಪ್ರಚಾರ ಸಭೆಗಳಲ್ಲಿ ತಮ್ಮ ಬೆಂಬಲಿಗರಿಂದ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಹಾಕಿಸಿದರು. ಸಿದ್ದರಾಮಯ್ಯ ಚುನಾವಣೆಗೆ ಸಂಪನ್ಮೂಲ ಹೊಂದಿಸಿ ಕೊಡಲಿಲ್ಲ. ಅವರದು ಕೇವಲ ಭಾಷಣ ಅಷ್ಟೇ. ಒಟ್ಟಾರೆಯಾಗಿ ಕಾಂಗ್ರೆಸ್‌ಗೆ ಬಂದಾಗಿನಿಂದ 15 ವರ್ಷ ಅವರೇ ಅಧಿಕಾರ ಅನುಭವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next