ಬೆಂಗಳೂರು : ಇತ್ತೀಚೆಗಷ್ಟೇ ಕಿರುತೆರೆ ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಈಗ ಚಿತ್ರರಂಗದ ಹಲವು ಚಟುವಟಿಕೆ ನಡೆಸಲು ಅನುಮತಿ ಕೊಡಿ ಎಂಬ ಫಿಲ್ಮ್ ಛೇಂಬರ್ ಮನವಿಗೆ ಸ್ಪಂದಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಅವರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಲಾಕ್ ಡೌನ್ ಹಿನ್ನೆಲೆಯಿಂದ ಚಿತ್ರರಂಗ ಸಾಕಷ್ಟು ಹೊಡೆತ ತಿಂದಿದೆ. ಹೀಗಾಗಿ, ಚಿತ್ರೀಕರಣಕ್ಕೆ ಇನ್ನೂ ಕೇಂದ್ರದಿಂದ ಯಾವುದೇ ಸೂಚನೆ ಬಂದಿಲ್ಲವಾದ್ದರಿಂದ, ಚಿತ್ರರಂಗದ ಚಟುವಟಿಕೆಗಳಾದ ಡಬ್ಬಿಂಗ್, ಎಡಿಟಿಂಗ್, ಹಿನ್ನೆಲೆ ಸಂಗೀತ ಮತ್ತು ಗ್ರಾಫಿಕ್ಸ್ ಇತ್ಯಾದಿ ಕೆಲಸಗಳಿಗೆ ಅನುಮತಿ ಕೊಡಬೇಕು ಎಂದು ಮನವಿ ಮಾಡಿದ್ದರು.
ಸಚಿವ ಆರ್.ಅಶೋಕ್ ಅವರ ಮೂಲಕ ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದಾಗ ನಮ್ಮ ಮನವಿ ಆಲಿಸಿದ ಅವರು ಸೂಕ್ತವಾಗಿ ಸ್ಪಂದಿಸಿದ್ದಾರೆ. ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ತಿಳಿಸಿದ್ದಾರೆ.
ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್‌ಗೆ ಸ್ಪಂದಿಸಿದ್ದಾರೆ. ಇಷ್ಟರಲ್ಲೇ ಅಧಿಕೃತ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂಬ ನಂಬಿಕೆಯೂ ನಮಗಿದೆ . ಚಿತ್ರೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಸೂಚನೆ ಬರುವವರೆಗೆ ಕಾಯಬೇಕಿದೆ. ಸದ್ಯ ಚಿತ್ರರಂಗದ ಚಟುವಟಿಕೆ ನಡೆದರೆ, ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆಯಾಗಬಹುದು ಎಂದು ಹೇಳಿದ್ದಾರೆ.