ಬೆಂಗಳೂರು: ಪಶ್ಚಿಮ ಘಟ್ಟ ಸಂರಕ್ಷಣೆ ಬಗ್ಗೆ ಸಂಬಂಧಪಟ್ಟ ರಾಜ್ಯಗಳಿಗೆ ಏಕರೂಪದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಸಿಎಂ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿ ಸುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಭರವಸೆ ನೀಡಿದ್ದಾರೆ.
ಡಾ| ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸುವ ಬಗ್ಗೆ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್ ಅವರು ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗೋವಾ, ತ. ನಾಡು ಹಾಗೂ ಗುಜರಾತ್ ಸಿಎಂಗಳ ಜತೆ ಗುರುವಾರ ವೀಡಿಯೋ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ನಾನಾ ಹಂತಗಳ ಜನಪ್ರತಿನಿಧಿಗಳು ಮಾತ್ರವಲ್ಲದೆ ಸಚಿವ ಸಂಪುಟವೂ ಕಸ್ತೂರಿರಂಗನ್ ವರದಿಯ ಕರಡು ಅಧಿಸೂಚನೆಯನ್ನು ಈಗಿರುವ ರೂಪದಲ್ಲಿ ತಿರಸ್ಕರಿಸಿದೆ.
ಅದರಲ್ಲೂ ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸಿರುವುದನ್ನು ತಿರಸ್ಕರಿಸಲಾಗಿದೆ. ಪ್ರತೀ ರಾಜ್ಯದ ಸಮಸ್ಯೆಗಳು, ಸವಾಲುಗಳು ವಿಭಿನ್ನವಾಗಿರುತ್ತವೆ. ಹಾಗಾಗಿ ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೆ ಏಕರೂಪದ ಅಧಿಸೂಚನೆ ಹೊರಡಿಸುವುದು ಸರಿಯಲ್ಲ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಪ್ರಕಾಶ್ ಜಾಬ್ಡೇಕರ್ ಅವರು, ಪ್ರತೀ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಪ್ರತ್ಯೇಕವಾಗಿ ಆಯಾ ರಾಜ್ಯಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ.
ಯಡಿಯೂರಪ್ಪ ಸಲಹೆ
ವೀಡಿಯೋ ಸಂವಾದದ ವೇಳೆ ಯಡಿಯೂರಪ್ಪ ಅವರೇ ಮೊದಲಿಗೆ ಮಾತನಾಡಿದರು. ಪಶ್ಚಿಮ ಘಟ್ಟ ಶ್ರೇಣಿ ಸಂರಕ್ಷಣೆಗೆ ಸಂಬಂಧಪಟ್ಟಂತೆ ಏಕರೂಪದ ಅಧಿಸೂಚನೆ ಸರಿಯಲ್ಲ. ರಾಜ್ಯದಲ್ಲಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪರಿಸರ ಪ್ರದೇಶವೆಂದು ಘೋಷಿಸುವುದರಿಂದ ಸಾವಿರಾರು ಜನರ ಜೀವನ ಏರುಪೇರಾಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೆ ಏಕರೂಪದ ಅಧಿಸೂಚನೆ ಹೊರಡಿಸಿದರೆ ಪ್ರಯೋಜನವಾಗದು. ಹಾಗಾಗಿ ರಾಜ್ಯಗಳ ಸಮಸ್ಯೆಯನ್ನು ಪ್ರತ್ಯೇಕವಾಗಿ ಆಲಿಸಿ ಪರಿಶೀಲಿಸುವುದು ಒಳಿತು ಎಂದು ಸಲಹೆ ನೀಡಿದರು ಎನ್ನಲಾಗಿದೆ.