Advertisement

ನೀರಿನ ಸಮಸ್ಯೆ ತಲೆದೋರದಂತೆ ಕ್ರಮಕ್ಕೆ ಸಿಎಂ ಸೂಚನೆ

07:28 AM Jun 06, 2020 | Lakshmi GovindaRaj |

ಬೆಂಗಳೂರು: ಮುಂದಿನ ಎರಡು ತಿಂಗಳಲ್ಲಿ 23 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ನಿರೀಕ್ಷೆಯಿದ್ದು, ಯಾವುದೇ ಕಾರಣಕ್ಕೂ ಜನ ನೀರಿಗೆ ಪರದಾಡದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ  ಬಿ.ಎಸ್‌.ಯಡಿಯೂರಪ್ಪ ಸೂಚನೆ ನೀಡಿದರು. ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ನಡೆದ ನಗರಾಭಿವೃದ್ದಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇನ್ನೆರಡು ತಿಂಗಳಲ್ಲಿ 23 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಸ್ಯೆ ತಲೆದೋರುವ  ಸಾಧ್ಯತೆ ಇದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಆಗ ಮುಖ್ಯಮಂತ್ರಿಗಳು, ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ತಲೆದೋರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ  ನೀಡಿದರು. ಕೇಂದ್ರ ಸರ್ಕಾರದ ನೆರವಿನ “ಅಮೃತ್‌’ ಯೋಜನೆಯಡಿ ಕೇಂದ್ರದ ಪಾಲಿನ ಬಾಕಿ ಅನುದಾನ ಪಡೆಯಲು ರಾಜ್ಯದ ಪಾಲಿನ ಮೊತ್ತವಾದ 209 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರದಿಂದ ಬರುವ ಅನುದಾನಕ್ಕೆ ಯಾವುದೇ ತೊಡಕಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ನಿವೃತ್ತಿ, ಮರಣ ಅಥವಾ  ಇತರೆ ಕಾರಣಗಳಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಪ್ರಸ್ತಾಪ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು. ಸಭೆಯಲ್ಲಿದ್ದ ಇಲಾಖೆ ಅಧಿಕಾರಿಗಳು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಜಿಲ್ಲಾಧಿಕಾರಿಗಳ ಬಳಿ  47.24 ಕೋಟಿ ರೂ. ಅನುದಾನದ ಲಭ್ಯತೆ ಇದೆ.

ಏಪ್ರಿಲ್‌ ಅಂತ್ಯದವರೆಗೆ 12 ನಗರಗಳಲ್ಲಿ ಖಾಸಗಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಕೋವಿಡ್‌- 19 ವೈರಸ್‌ ನಿಯಂತ್ರಣ,  ನಿರ್ವಹಣೆಗೆ ಸಂಬಂಧಪಟ್ಟಂತೆ ನಗರ ಸ್ಥಳೀಯ ಸಂಸ್ಥೆಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಸಚಿವರಾದ ಬಿ.ಎ.ಬಸವರಾಜು, ಕೆ.ಸಿ.ನಾರಾಯಣಗೌಡ, ಮುಖ್ಯ ಕಾರ್ಯದರ್ಶಿ  ಟಿ.ಎಂ.ವಿಜಯ ಭಾಸ್ಕರ್‌, ನಗರಾಭಿವೃದಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿರಾಕೇಶ್‌ ಸಿಂಗ್‌, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next