ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.
ಭಾನುವಾರ ರಾತ್ರಿಯೇ ದೆಹಲಿಗೆ ತೆರಳಿರುವ ಕುಮಾರಸ್ವಾಮಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ತಂಗಿದ್ದು, ಸೋಮವಾರ ಬೆಳಗ್ಗೆ ರಾಜಘಾಟ್‌ಗೆ ತೆರಳಿ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಗೌರವ ಸಲ್ಲಿಸುವರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವರು. ಇದಾದ ಬಳಿಕ ಕೇಂದ್ರದ ಕೆಲವು ಸಚಿವರನ್ನೂ ಭೇಟಿ ಮಾಡುವ ಕಾರ್ಯಕ್ರಮವಿದ್ದು, ರಾತ್ರಿ ಬೆಂಗಳೂರಿಗೆ ಹಿಂತಿರುಗುವರು.
ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿ ಪ್ರಧಾನಿಯವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನರೆವು ಕೋರುವ ಸಾಧ್ಯತೆ ಇದೆ. ಜತೆಗೆ ರೈತರ ಸಾಲ ಮನ್ನಾ, ಮಹದಾಯಿ ವಿವಾದ, ತೆಂಗು ಬೆಳೆಗಾರರ ಸಮಸ್ಯೆ ಸೇರಿದಂತೆ ರಾಜ್ಯದ ರೈತರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಪ್ರಧಾನಿಯವರೊಂದಿಗೆ ಸಮಾಲೋಚನೆ ನಡೆಸುವ ಸಾಧ್ಯತೆ ಇದೆ.
ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದು, ಶೀಘ್ರದಲ್ಲೇ ಘೋಷಣೆ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ, ಇದಕ್ಕೆ ಸುಮಾರು 53 ಸಾವಿರ ಕೋಟಿ ರೂ. ಅಗತ್ಯವಿದೆ. ಹೀಗಾಗಿ ತಮ್ಮ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಪ್ರಧಾನಿಯವರನ್ನು ಕೋರುವ ಸಾಧ್ಯತೆ ಇದೆ.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲಿ ಮಹದಾಯಿ ವಿವಾದ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಶೀಘ್ರದಲ್ಲೇ ಮಹದಾಯಿ ನ್ಯಾಯಾಧಿಕರಣ ತನ್ನ ಅಂತಿಮ ತೀರ್ಪು ನೀಡಲಿದ್ದು, ತೀರ್ಪು ನೀಡಿದರೆ ಮತ್ತೆ ಕಾನೂನಾತ್ಮಕ ಹೋರಾಟ ಮುಂದುವರಿದು ಸದ್ಯಕ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ಹೀಗಾಗಿ ತಮ್ಮ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸುವಂತೆ ಪ್ರಧಾನಿಯವನ್ನು ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಉಳಿದಂತೆ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಅತಿ ಹೆಚ್ಚು ತೆರಿಗೆ ನೀಡುತ್ತಿರುವ ಬೆಂಗಳೂರಿಗೆ ಕೇಂದ್ರದಿಂದ ಹೆಚ್ಚಿನ ನೆರವು ಮುಂತಾದ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮತ್ತು ಕೇಂದ್ರದ ಸಚಿವರೊಂದಿಗೆ ಚರ್ಚಿಸಲಿದ್ದಾರೆ ಎಂದೂ ಮೂಲಗಳು ಹೇಳಿವೆ.
ಇಡಿ, ಐಟಿ ಬಗ್ಗೆ ಪ್ರಸ್ತಾಪಿಸುವರೇ?
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಗಳ ಬಗ್ಗೆ ಪ್ರಸ್ತಾಪಿಸುವರೇ?
ಹೀಗೊಂದು ಪ್ರಶ್ನೆ ಕೇಳಿಬರುತ್ತಿದೆ. ಇದಕ್ಕೆ ಕಾರಣ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕುಮಾರಸ್ವಾಮಿ ಅವರು ಇಡಿ ವಿಚಾರ ಪ್ರಸ್ತಾಪಿಸಿರುವುದು. ಇಡಿ ಅಧಿಕಾರಿಯೊಬ್ಬರು ನನ್ನನ್ನು ಸಂಪರ್ಕಿಸಿ, ನೀವು ಮಲೇಶಿಯಾದಲ್ಲಿ ಆಸ್ತಿ ಹೊಂದಿದ್ದೀರಂತೆ ಎಂದು ಕೇಳಿದ್ದರು. ಕೇಂದ್ರ ಸರ್ಕಾರ ಇಡಿ, ಐಟಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡಬೇಕಾಗಿದೆ ಎಂದು ಸದನದಲ್ಲಿ ಹೇಳಿದ್ದರು. ಹೀಗಾಗಿ ಈ ವಿಚಾರವನ್ನೂ ಪ್ರಧಾನಿಯವರ ಜತೆಗಿನ ಮಾತುಕತೆ ವೇಳೆ ಕುಮಾರಸ್ವಾಮಿ ಪ್ರಸ್ತಾಪಿಸುವರೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.