Advertisement

ಪ್ರಧಾನಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

06:00 AM May 29, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ ಮೊದಲ ಬಾರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

Advertisement

ಸೋಮವಾರ ಸಂಜೆ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈಸೂರು ಪೇಟಾ ತೊಡಿಸಿ, ರೇಷ್ಮೆ ಶಾಲು ಹೊದಿಸಿದರಲ್ಲದೆ, ಹಾರ ಹಾಕಿ ಅಭಿನಂದಿಸಿದರು. ಬಳಿಕ ಸ್ವಲ್ಪ ಹೊತ್ತು ಇಬ್ಬರೂ ಪರಸ್ಪರ ಮಾತುಕತೆ ನಡೆಸಿದರು.
ಪ್ರಧಾನಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಧಾನಿಯವರನ್ನು ಮೊದಲ ಬಾರಿ ಭೇಟಿಯಾಗುತ್ತಿದ್ದೇನೆ. ಇದು ಸೌಹಾರ್ದ ಭೇಟಿಯಾದರೂ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ವಿಶ್ವಾಸದಲ್ಲಿ ಹೋಗುವ ಬಗ್ಗೆ ಚರ್ಚೆ ನಡೆಸಿದ್ದೇನೆ. ಉತ್ತಮ ಸಹಕಾರ ಕೊಡುವುದಾಗಿ ಭರವಸೆ ನೀಡಿದ ಪ್ರಧಾನಿಯವರು ತಮ್ಮ ಅನುಭವದ ಮೂಲಕ ಹಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಕಲ್ಲಿದ್ದಲು ಪೂರೈಕೆ ಬಗ್ಗೆಎ ಚರ್ಚೆ:
ರಾಜ್ಯದ ರಾಯಚೂರು, ಯರಮರಸ್‌ ಮತ್ತು ಬಳ್ಳಾರಿಯ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಮುಗಿಯುತ್ತಿದ್ದು, ತಕ್ಷಣಕ್ಕೆ ಕಲ್ಲಿದ್ದಲು ಅವಶ್ಯಕತೆ ಇದೆ. ಆದ್ದರಿಂದ ಈ ಬಗ್ಗೆ ಕಲ್ಲಿದ್ದಲು ಸಚಿವಾಲಯಕ್ಕೆ ನಿರ್ದೇಶನ ನೀಡಿ ರಾಜ್ಯದ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಅಗತ್ಯವಿರುವ ಕಲ್ಲಿದ್ದಲು ಪೂರೈಸಲು ನಿರ್ದೇಶನ ನೀಡುವಂತೆ ಪ್ರಧಾನಿಯವರನ್ನು ಕೋರಿದ್ದು, ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next