ಬೆಂಗಳೂರು: ಕೈಗಾರಿಕೆಗಳಿಗೆ ಪೂರಕ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳಲ್ಲಿ ಉದ್ಯಮಿಗಳನ್ನು ಒಳಗೊಂಡ ತಜ್ಞರ ಸಮಿತಿಗಳನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.
ನಗರದ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಗುರುವಾರ ಹಮ್ಮಿಕೊಂಡಿದ್ದ ವಿನೂತನ ಆವಿಷ್ಕಾರಗಳನ್ನು ಪ್ರೋತ್ಸಾಹಿಸುವ ‘ಮಂಥನ-2019’ರ 11ನೇ ಆವೃತ್ತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಾಗಲೇ ರಾಜ್ಯದ ಎಲ್ಲ ವಿವಿಗಳಲ್ಲಿ ಸಮಿತಿ ರಚಿಸುವಂತೆ ಸೂಚಿಸಿದ್ದೇನೆ. ಅದರಲ್ಲಿ ಉದ್ಯಮಿಗಳನ್ನೂ ಸೇರಿಸುವಂತೆಯೂ ಹೇಳಲಾಗಿದೆ. ಇದರಿಂದ ಉದ್ಯಮಗಳಿಗೆ ಪೂರಕವಾದ ಶಿಕ್ಷಣ ನೀಡಲು ಅನುಕೂಲ ಆಗುತ್ತದೆ ಎಂದು ತಿಳಿಸಿದರು.
ಕೃಷಿ, ಕೈಗಾರಿಕೆ, ಶಿಕ್ಷಣ ಒಂದಕ್ಕೊಂದು ಪೂರಕವಾಗಿರಬೇಕು. ಆದರೆ, ನಮ್ಮಲ್ಲಿ ಇವು ಒಂದಕ್ಕೊಂದು ಸಂಬಂಧವೇ ಇಲ್ಲದಂತಿವೆ. ಮತ್ತೂಂದೆಡೆ ಕೌಶಲ್ಯ ಅಭಿವೃದ್ಧಿ ಕೇಂದ್ರಗಳಿಲ್ಲ. ಕಾಲೇಜುಗಳಲ್ಲಿ ನಡೆಯುವ ಕ್ಯಾಂಪಸ್ ಸಂದರ್ಶನಗಳಲ್ಲಿ ವಿದ್ಯಾರ್ಥಿಗಳು ಆಯ್ಕೆ ಆಗುತ್ತಿಲ್ಲ. ಈ ಕೊರತೆಯಿಂದ ನಿರುದ್ಯೋಗ ಸೃಷ್ಟಿ ಆಗುತ್ತಿದೆ. ಹಾಗೊಂದು ವೇಳೆ ಉದ್ಯೋಗ ಆಧಾರಿತ ಶಿಕ್ಷಣ ನೀಡಿದ್ದರೆ, ಎಲ್ಲರೂ ಉದ್ಯೋಗದಾತರು ಆಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಉದ್ಯೋಗ ಆಧಾರಿತ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೃಷಿ ನಶಿಸಿ ಹೋಗುತ್ತಿದೆ. ಕೈಗಾರಿಕೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಹಾಗಾಗಿ, ಹಿಂದೆಂದಿಗಿಂತ ಕೈಗಾರಿಕೆಗೆ ಆದ್ಯತೆ ನೀಡುವ ಅವಶ್ಯಕತೆ ಇದೆ ಎಂದ ಸಚಿವರು, ಉದ್ಯಮಿಗಳು ಕೂಡ ಸೀಮಿತವಾಗಿದ್ದಾರೆ. ಬರೀ ಮನವಿಗಳನ್ನು ಸಲ್ಲಿಸಿದರೆ ಕೆಲಸ ಆಗುವುದಿಲ್ಲ. ಸರ್ಕಾರಕ್ಕೆ ಇಂತಿಷ್ಟು ತೆರಿಗೆ ಪಾವತಿಸುತ್ತೇವೆ, ಆಂತರಿಕ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ. ಬೇಡಿಕೆಗಳನ್ನು ಈಡೇರಿಸಬೇಕು ಎಂದು ಟೇಬಲ್ ಕುಟ್ಟಿ ಕೇಳುವಂತಾಗಬೇಕು. ಇದಕ್ಕಾಗಿ ಸಂಘಟನೆ ಮುಖ್ಯ ಎಂದು ಕಿವಿಮಾತು ಹೇಳಿದರು.
ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿದರು. ಪದಾಧಿಕಾರಿಗಳಾದ ಸಿ.ಆರ್. ಜನಾರ್ಧನ, ಸುಜ್ಞಾನ ಹಿರೇಮಠ, ಪೆರಿಕಲ್ ಸುಂದರ್ ಮತ್ತಿತರರು ಉಪಸ್ಥಿತರಿದ್ದರು.
ಮಂಥನ ವಿಜೇತರು
••ಕಾನೂನು ಶಾಲೆ, ಕ್ರೈಸ್ಟ್ ಕಾಲೇಜು, ಬೆಂಗಳೂರು (ಪ್ರಥಮ) ••ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು (ದ್ವಿತೀಯ) ••ಕೃಷಿ ಎಂಜಿನಿಯರಿಂಗ್ ಕಾಲೇಜು, ರಾಯಚೂರು (ತೃತೀಯ) ••ಕೃಷಿ ಎಂಜಿನಿಯರಿಂಗ್ ಕಾಲೇಜು, ರಾಯಚೂರು (ತೃತೀಯ) ••ಬಿಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು, ಬೆಂಗಳೂರು (ಸಮಾಧಾನಕರ ಬಹುಮಾನ)
ಪ್ರಶಸ್ತಿ ಪ್ರದಾನ
ವಿವಿಧ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಆವಿಷ್ಕಾರಗಳಿಗೆ ಇದೇ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಗರಿಷ್ಠ 1.40 ಲಕ್ಷದಿಂದ ಕನಿಷ್ಠ 15 ಸಾವಿರ ರೂ. ಚೆಕ್ ಒಳಗೊಂಡಿದೆ.