ಕಾಪು: ಮೂಳೂರು ಸಾಯಿರಾಧಾ ರೆಸಾರ್ಟ್‌ನಲ್ಲಿ ಐದು ದಿನಗಳ ಪ್ರಕೃತಿ ಚಿಕಿತ್ಸೆ ಪಡೆದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶುಕ್ರವಾರ ಮಧ್ಯಾಹ್ನ ನಿರ್ಗಮಿಸಿದ್ದಾರೆ.
ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ, ಕ್ಯಾಮರಾಗಳತ್ತ ತಿರುಗಿಯೂ ನೋಡದೆ ಹೊರಟ ಮುಖ್ಯಮಂತ್ರಿ, ಮೂಳೂರಿನಿಂದ ಶೃಂಗೇರಿಗೆ ಪ್ರಯಾಣ ಬೆಳೆಸಿದರು. ನಿರ್ಗಮನದ ಸಂದರ್ಭದಲ್ಲೂ ರೆಸಾರ್ಟ್ ಸುತ್ತಮುತ್ತ ಮತ್ತು ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
40 ಜನರ ತಂಡದಿಂದ ಪಂಚಕರ್ಮ ಚಿಕಿತ್ಸೆ: ಮೂಳೂರು ಸಾಯಿರಾಧಾ ಹೆರಿಟೇಜ್‌ನಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಡಾ| ತನ್ಮಯ್ ಗೋಸ್ವಾಮಿ ನೇತೃತ್ವದ ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ 40 ಜನರ ತಂಡ ಪಂಚಕರ್ಮ ಚಿಕಿತ್ಸೆ ನೀಡಿದೆ. 40 ಜನರ ತಂಡದಲ್ಲಿ ನಾಲ್ವರು ತಜ್ಞ ವೈದ್ಯರು, 20 ಮಂದಿ ತಂತ್ರಜ್ಞರು ಮತ್ತು 16 ಮಂದಿ ಸಿಬ್ಬಂದಿಯಿದ್ದರು.
ಸಿಎಂ ಮತ್ತು ಮಾಜಿ ಪಿಎಂಗೆ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಸಾಥ್ ನೀಡಿದ್ದು, ಶುಕ್ರವಾರ ನಿರ್ಗಮನದ ವೇಳೆ ಜೆಡಿಎಸ್ ಮುಖಂಡ ಶಿವರಾಮೇಗೌಡ ಜತೆಗಿದ್ದರು.
ಸಿಎಂ ಮತ್ತು ಮಾಜಿ ಪಿಎಂಗೆ ವಿಶ್ರಾಂತಿ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ಗೋಸ್ವಾಲ್ ಆಯುರ್ವೇದಿಕ್ ಸಂಸ್ಥೆಯ ವತಿಯಿಂದ ಪಂಚಕರ್ಮ ರಸಾಯನ್ ಥೆರಪಿ ನಡೆಸಲಾಗಿದೆ. ಯೋಗ, ಲೇಪನ, ಮಸಾಜ್‌ನೊಂದಿಗೆ ಯೋಗಿಕ್ ಆಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆರೋಗ್ಯ ವರ್ಧನೆ, ದೇಹದ ಪುಷ್ಟಿಗಾಗಿ ಪಂಚಕರ್ಮ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಉಲ್ಲಸಿತರಾಗಿ ನಿರ್ಗಮಿಸಿದ್ದಾರೆ.
-ಡಾ| ತನ್ಮಯ್ ಗೋಸ್ವಾಮಿ