ನವದೆಹಲಿ : ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಗೆ ಅನುಮತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹರಿಹಾಯ್ದಿದ್ದಾರೆ.
ಇಂದು ಮಾಧ್ಯಮಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರವು ಕೇಂದ್ರ ಸರ್ಕಾರದ ಷರತ್ತುಗಳಿಗೆ ಬದ್ಧವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ಉಚಿತವಾಗಿ ಪಡಿತರ ವಿತರಿಸುವ ಯೋಜನೆ ರೂಪಿಸಿದೆ. ಆದರೆ, ಈ ಯೋಜನೆ ಜಾರಿಯಾಗುವ ಎರಡು ದಿನಗಳ ಮುಂಚೆ ಅವರು ಅನುಮತಿ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಡಿತರ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅವ್ಯವಸ್ಥೆಯನ್ನು ತೊಡೆದು ಹಾಕುವಲ್ಲಿ ನಮ್ಮ ಹೊಸ ಯೋಜನೆ ಉಪಯುಕ್ತವಾಗಲಿದೆ. ಇದೊಂದು ಕ್ರಾಂತಿಯನ್ನು ಸೃಷ್ಠಿಸುವ ಯೋಜನೆಯಾಗಿತ್ತು. ಇದರ ಜಾರಿಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ, ಕೇಂದ್ರ ಸರ್ಕಾರ ಮಾತ್ರ ಇದಕ್ಕೆ ತಡೆಯೊಡ್ಡಿತು ಎಂದಿರುವ ಕೇಜ್ರಿವಾಲ್, ನಮ್ಮನ್ನು ಯಾಕೆ ತಡೆಯುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ನಮ್ಮ ದೇಶವು ಕಳೆದ 75 ವರ್ಷಗಳಿಂದ ಪಡಿತರ ಮಾಫಿಯಾದಿಂದ ನಲಗುತ್ತಿದೆ. ಅದನ್ನು ಸುಧಾರಿಸಲು ಇದು ಸಕಾಲವಾಗಿದೆ ಎಂದು ಹೇಳಿರವ ಅರವಿಂದ್ ಕೇಜ್ರಿವಾಲ್, ಬಡವರಿಗೆ ಹಾಗೂ ಅಗತ್ಯವಿರುವರಿಗೆ ಪಡಿತರ ನೀಡುವುದಕ್ಕಾಗಿ ನಾನೂ ಕಳೆದ 17 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೆನೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ ಕೇಜ್ರಿವಾಲ್, ಅವರು (ಕೇಂದ್ರ ಸರ್ಕಾರ) ನಾವು ಅನುಮತಿ ಪಡೆಯಲಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಾನು ಕೇವಲ ಒಂದು ಸಾರಿ ಮಾತ್ರವಲ್ಲ, 5 ಬಾರಿ ಪಡೆದಿದ್ದೇವೆ. ಕಾನೂನು ದೃಷ್ಟಿಯಿಂದ ನೋಡುವುದಾದರೆ ನಮಗೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿಲ್ಲ. ಆದರೆ, ಸೌಜನ್ಯಕ್ಕಾಗಿ ಅವರ ಅನುಮತಿ ಕೇಳುತ್ತಿದ್ದೇವೆ. ಬೇಕಾದರೆ ಈ ಯೋಜನೆಯ ಸಂಪೂರ್ಣ ಶ್ರೇಯಸ್ಸು ಅವರೇ ತೆಗೆದುಕೊಳ್ಳಲಿ ಎಂದಿದ್ದಾರೆ.