Advertisement

ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಲು ಸಿಎಂ ಸೂಚನೆ

07:26 AM May 21, 2020 | Lakshmi GovindaRaj |

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ವಲಸೆ ಬಂದಿರುವ ಕಾರ್ಮಿಕರಿಗೆ ನರೇಗಾ ಯೋಜನೆ ಅಡಿಯಲ್ಲಿ ಉದ್ಯೋಗ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಬುಧವಾರ ಗೃಹ  ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ, 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ಮಾನವ ದಿನಗಳ ಸೃಜನೆಯ ಗುರಿ ಹಾಗೂ  6,315.79 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ.

Advertisement

ಇದಲ್ಲದೆ ಕೇಂದ್ರ ಸರ್ಕಾರವೂ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ವಲಸಿಗ ಕಾರ್ಮಿಕರಿಗೆ ಉದ್ಯೋಗ   ದೊರೆಯುವಂತೆ ಹಾಗೂ ನಿಗದಿತ ಅವಧಿ ಯಲ್ಲಿ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಕೊರೊನಾ ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್‌ ರಚಿಸಿ, ಜನ ಜಾಗೃತಿ ಮೂಡಿಸುವುದು,

ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ವಿತರಣೆ, ಸೌಲಭ್ಯಗಳ ವಿತರಣೆ, ಮನೆ ಮನೆ ಭೇಟಿ ನೀಡಿ ಹೋಮ್‌ ಕ್ವಾರಂಟೈನ್‌ ಪರಿಶೀಲನೆ, ದೈನಂದಿನ ಮಾಹಿತಿ ಸಂಗ್ರಹ, ಸಾಂಸ್ಥಿಕ ಕ್ವಾರಂಟೈನ್‌ ನಿರ್ವಹಣೆ ಮೇಲ್ವಿಚಾರಣೆ ವಹಿಸಲಾಗುತ್ತಿದೆ. ಅಲ್ಲದೆ, ಸ್ವಸಹಾಯ ಸಂಘಗಳು 8 ಲಕ್ಷ ಮಾಸ್ಕ್ ತಯಾರಿಸಿ ವಿತರಿಸುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಿರುವ ಕುರಿತು ಮುಖ್ಯಮಂತ್ರಿ ಮೆಚ್ಚುಗೆ  ವ್ಯಕ್ತಪಡಿಸಿದರು.

ಕುಡಿಯುವ ನೀರಿಗೆ ಆದ್ಯತೆ ನೀಡಲು ಸೂಚನೆ: ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸುವಂತೆ ನಿರ್ದೇಶನ ನೀಡಿದರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇರುವ 14 ಜಿಲ್ಲೆಗಳಲ್ಲಿ  659 ಗ್ರಾಮಗಳಲ್ಲಿ 389 ಟ್ಯಾಂಕರ್‌ ಮತ್ತು 706 ಖಾಸಗಿ ಬೋರ್‌ ವೆಲ್‌ ಗಳಿಂದ ನೀರು ಪೂರೈಕೆ ಆಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ಸರ್ಕಾರದ  ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌. ಕೆ. ಅತೀಕ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next